ಅರಮನೆ ಆವರಣಕ್ಕೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡ
ಮೈಸೂರು

ಅರಮನೆ ಆವರಣಕ್ಕೆ ಆಗಮಿಸಿದ ದಸರಾ ಗಜಪಡೆಯ 2ನೇ ತಂಡ

September 8, 2022

ಮೈಸೂರು,ಸೆ.7(ಎಂಟಿವೈ)-ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊ ಳ್ಳಲು ಎರಡನೇ ತಂಡದಲ್ಲಿ ಮೂರು ಹೊಸ ಆನೆ ಸೇರಿದಂತೆ ಐದು ಆನೆಗಳು ಬುಧವಾರ ಮಧ್ಯಾಹ್ನ ಮೈಸೂರು ಅರಮನೆ ಆವರಣವನ್ನು ತಲುಪಿದವು.

ಇದೀಗ ದಸರಾ ಗಜಪಡೆಯ ಸಂಖ್ಯೆ 14ಕ್ಕೇರಿದಂತಾಗಿದೆ. ಇವುಗಳಲ್ಲಿ 18 ವರ್ಷದ ಪಾರ್ಥಸಾರಥಿ ಅತ್ಯಂತ ಕಿರಿಯ ಆನೆ ಯಾಗಿದ್ದರೆ, 63 ವರ್ಷದ ಅರ್ಜುನ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ದ್ದಾನೆ. 4 ಹೆಣ್ಣಾನೆಗಳಲ್ಲಿ 20 ವರ್ಷದ ಲಕ್ಷ್ಮೀ ಕಿರಿಯಳಾದರೆ, 63 ವರ್ಷದ ವಿಜಯ ಹಿರಿಯಳಾಗಿದ್ದಾಳೆ. ಈ ಬಾರಿಯ ದಸರಾ ಗಜಪಡೆಯಲ್ಲಿ 18ರಿಂದ 63 ವರ್ಷದ ಆನೆಗಳಿದ್ದು, ಸಮತೋಲನ ಕಾಯ್ದುಕೊಂಡಂತಾಗಿದೆ. ಎರಡನೇ ತಂಡದ 5 ಆನೆಗಳನ್ನು ಕರೆತರಲು ಇಂದು ಮುಂಜಾನೆಯೇ ಆನೆ ಕ್ಯಾಂಪ್‍ಗಳಿಗೆ ಲಾರಿ ಕಳುಹಿಸಲಾಗಿತ್ತು. ಭಾರೀ ಮಳೆ ಕಾರಣ 4 ಆನೆಗಳು ಮೈಸೂರು ತಲು ಪುವುದು 2 ಗಂಟೆ ವಿಳಂಬವಾಯಿತು.
ಎರಡನೇ ತಂಡದಲ್ಲಿ ಹೊಸ ಆನೆ ಬಂಡೀ ಪುರದ ರಾಮಪುರ ಶಿಬಿರದ ಪಾರ್ಥ ಸಾರಥಿ(18) ಮಧ್ಯಾಹ್ನ 12.30ಕ್ಕೆ ಅರಮನೆ ಯನ್ನು ಸುರಕ್ಷಿತವಾಗಿ ತಲುಪಿದರೆ, ಸಂಜೆ 4 ಗಂಟೆಗೆ ದುಬಾರೆ ಕ್ಯಾಂಪ್‍ನ ಶ್ರೀರಾಮ (40), ಸುಗ್ರೀವ(40), ಗೋಪಿ(41) ಹಾಗೂ ವಿಜಯ(63) ಆಗಮಿಸಿದವು. ಲಾರಿಯಿಂದ ಅತ್ಯಂತ ಸುರಕ್ಷಿತವಾಗಿ ಕೆಳಗಿಳಿಸಿದ ಬಳಿಕ ಎಲ್ಲಾ ಆನೆಗಳನ್ನು ಉಪಚರಿಸಲಾಯಿತು. ನಂತರ ನಿಗದಿತ ಸ್ಥಳದಲ್ಲಿ ಆನೆಗಳನ್ನು ಕಟ್ಟಿಹಾಕಿ, ಮಾವುತ, ಕಾವಾಡಿಗಳಿಗೆ ಅಗತ್ಯ ವಸ್ತುಗಳ ಕಿಟ್ ವಿತರಿಸಲಾಯಿತು.

Translate »