ಕೊರೊನಾ ಸೋಂಕು ನಿಯಂತ್ರಣದಲ್ಲಿ ಬಿಎಸ್‍ವೈ ಸರ್ಕಾರದಿಂದ ದಿಟ್ಟ ಕ್ರಮ
ಮೈಸೂರು

ಕೊರೊನಾ ಸೋಂಕು ನಿಯಂತ್ರಣದಲ್ಲಿ ಬಿಎಸ್‍ವೈ ಸರ್ಕಾರದಿಂದ ದಿಟ್ಟ ಕ್ರಮ

June 15, 2020

ಬೆಂಗಳೂರು, ಜೂ.14- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಗೆ ಕೇಂದ್ರದಲ್ಲಿ ಮೊದಲನೇ ವರ್ಷ ಪೂರೈಸಿದೆ. ಇದರ ಭಾಗವಾಗಿ ಭಾನುವಾರ ನವದೆಹಲಿಯಿಂದ ಫೇಸ್‍ಬುಕ್ ಲೈವ್ ಮೂಲಕ ರಾಜ್ಯ ಬಿಜೆಪಿಯ ವರ್ಚುವಲ್ ರ್ಯಾಲಿಯನ್ನುದ್ದೇಶಿಸಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾಷಣ ಮಾಡಿದರು.

ಕೋವಿಡ್-19 ವೈರಸ್ ನಿಯಂ ತ್ರಣದಲ್ಲಿ ಕರ್ನಾಟಕ ಸರ್ಕಾರದ ಸಾಧನೆ ಶ್ಲಾಘನೀಯ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿ ಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೊಂಡಾಡಿದರು.

ಕಳೆದ ತಿಂಗಳು 7ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ರ್ಯಾಲಿಗೆ ಚಾಲನೆ ಕೊಟ್ಟಿದ್ದರು. ಇದು 19ನೇ ಜನಸಂವಾದ ವರ್ಚುವಲ್ ರ್ಯಾಲಿಯಾಗಿದೆ. ಮಾರಕ ಕೊರೊನಾ ಎಲ್ಲರನ್ನೂ ಕಂಗೆಡಿ ಸಿದೆ. ಕೊರೊನಾದಿಂದ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ಯನ್ನು ಆ ಭಗವಂತ ನೀಡಲಿ ಎಂದರು.

ಕೊರೊನಾ ವಾರಿಯರ್ಸ್‍ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ. ನಮ್ಮ ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಪೆÇಲೀಸರು ಎಲ್ಲರೂ ಕೊರೊನಾ ವಿರುದ್ಧ ಜನರ ರಕ್ಷಣೆ ಮಾಡುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲರೂ ಋಣಿಯಾಗಿರಬೇಕು. ಕೊರೊನಾ ಬಂದಾಗ ಲಾಕ್‍ಡೌನ್ ಹೇರ ಬೇಕಾಯಿತು. ಸರ್ಕಾರಕ್ಕೂ ಸಾಕಷ್ಟು ಒತ್ತಡ, ಸವಾಲುಗಳು ಎದುರಾದವು. ಈ ಸಂದರ್ಭ ದಲ್ಲಿ ನಮ್ಮ ಸರ್ಕಾರಕ್ಕೆ ಮೊದಲ ವರ್ಷ ಪೂರ್ಣವಾಗಿದೆ. ನಮಗೆ ವರ್ಚುವಲ್ ಸಂವಾದ ಕಾರ್ಯಕರ್ತರನ್ನು, ಜನರನ್ನು ತಲುಪುವ ಸೂಕ್ತ ಮಾರ್ಗವಾಯಿತು ಎಂದು ಹೇಳಿದರು.

ಬೇರೆಡೆಗೆ ಹೋಲಿಸಿದರೆ ಬೆಂಗಳೂರಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇವೆ. ಯಡಿಯೂರಪ್ಪ ಟೀಮ್ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಯಡಿಯೂರಪ್ಪನವರು ಸಹ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಕೃಷಿಕರು, ಸವಿತಾ ಸಮಾಜ, ಆಟೋರಿಕ್ಷಾ ಚಾಲಕರು ಹೀಗೆ ಅನೇಕರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪರ ಕಾರ್ಯವನ್ನು ಮುಕ್ತ ಕಂಠದಿಂದ ನಡ್ಡಾ ಕೊಂಡಾಡಿದರು.

ರಾಜ್ಯದ ಬಿಜೆಪಿ ಕಾರ್ಯಕರ್ತರು ಕೊರೊನಾ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ. ಕರ್ನಾಟಕದ ಬಿಜೆಪಿ ಕಾರ್ಯ ಕರ್ತರಿಗೆ ನಮನ ಸಲ್ಲಿಸುತ್ತೇನೆ. ಮೋದಿ ನೇತೃತ್ವದಲ್ಲಿ ಆರು ವರ್ಷದ ಸಾಧನೆಗಳು 60 ವರ್ಷದ ಸಾಧನೆಗಳಿಗೆ ಸಮವಾಗಿದೆ ಎಂದರು. ಕೊರೊನಾ ವೇಳೆ ಪ್ರಧಾನಿ ಮೋದಿ ಗಟ್ಟಿ ತೀರ್ಮಾನ ಮತ್ತು ಸರಿಯಾದ ಸಮಯದಲ್ಲಿ ಲಾಕ್‍ಡೌನ್ ಮಾಡಿದರು. ಭಾರತದಲ್ಲಿ ಪ್ರತಿದಿನ 6 ಲಕ್ಷ ಪಿಪಿಇ ಕಿಟ್ ತಯಾರಾಗುತ್ತಿದೆ. ಈ ಹಿಂದೆ ಭಾರತದಲ್ಲಿ ಒಂದೇ ಒಂದು ಕಿಟ್ ತಯಾರಾಗುತ್ತಿರಲಿಲ್ಲ. ಈಗ ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಆರು ವರ್ಷದ ಆಡಳಿತ ಭಾರತವನ್ನು ಸಶಕ್ತಗೊಳಿಸಿದೆ. ಕೊರೋನಾದಿಂದ ದೇಶವನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊರೋನಾ ಬಂದ ಆರಂಭದಲ್ಲಿ ಮೂರು ದಿನಕ್ಕೆ ಸೋಂಕು ದ್ವಿಗುಣಗೊಳ್ಳುತ್ತಿತ್ತು. ಈಗ ಸೋಂಕು 14 ದಿನಕ್ಕೆ ದ್ವಿಗುಣವಾಗುತ್ತಿದೆ. ದೇಶಾದ್ಯಂತ 1 ಸಾವಿರ ಕೋವಿಡ್ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಮೊದಲು ಕೇವಲ 1500 ಟೆಸ್ಟಿಂಗ್ ನಡೆಯು ತ್ತಿದ್ದವು. ಈಗ 1,50,000 ಟೆಸ್ಟಿಂಗ್ ಸಾಮರ್ಥ್ಯ ಇದೆ. 20 ಸಾವಿರ ಐಸೋಲೇಷನ್ ಬೆಡ್‍ಗಳಿವೆ ಪಿಪಿಇ ಕಿಟ್ ತಯಾರಿಕೆಯೂ ಹೆಚ್ಚಾಗಿದೆ ಎಂದರು. ಇಡೀ ದೇಶ ಮೋದಿಯವರ ಮಾತಿಗೆ ಬೆಲೆ ಕೊಟ್ಟು ಜನತಾ ಕರ್ಫ್ಯೂ ಆಚರಿಸಿತು. ಲಾಲ್ ಬಹದ್ದೂರ್ ಶಾಸ್ತ್ರಿಯವರ ಮಾತನ್ನು ಇಡೀ ದೇಶ ಕೇಳುತ್ತಿತ್ತು. ಶಾಸ್ತ್ರಿಯವರ ಬಳಿಕ ಈಗ ಅಂತಹ ಮತ್ತೊಬ್ಬ ನಾಯಕ ಅಂದರೆ ಮೋದಿ. ಜನತಾ ಕರ್ಫ್ಯೂ ಕುರಿತ ಮೋದಿಯವರ ಕರೆಯನ್ನು ಇಡೀ ದೇಶ ಪಾಲಿಸಿತು ಎಂದರು. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಫೇಸ್‍ಬುಕ್ ಲೈವ್ ವೀಕ್ಷಣೆ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇನ್ನಿತರರು ಹಾಜರಿದ್ದರು.

ಮೈಸೂರು ವರದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2ನೇ ಅವಧಿಯ ಮೊದಲ ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಆಯೋಜಿಸಿರುವ ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ ಅಭಿಯಾನ’ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ‘ಕರ್ನಾಟಕ ಜನಸಂವಾದ’ ಹೆಸರಿನಲ್ಲಿ ಫೇಸ್‍ಬುಕ್ ಲೈವ್ ಮೂಲಕ ನಡೆಸಿದ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಸ್ಥಳೀಯ ಬಿಜೆಪಿ ಶಾಸಕರು, ಸಂಸದರು ಹಾಗೂ ಪಕ್ಷದ ಮುಖಂಡರು ವೀಕ್ಷಣೆ ಮಾಡಿದರು. ನಗರದ ಚಾಮ ರಾಜಪುರಂನಲ್ಲಿರುವ ಬಿಜೆಪಿ ಕಚೇರಿ ಹಾಗೂ ಕಾಡಾ ಕಚೇರಿ ಆವರಣದಲ್ಲಿ ಅಳವಡಿಸಿದ್ದ ಬೃಹತ್ ಟಿವಿ ಪರದೆಯಲ್ಲಿ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಿದರು.

ಬಿಜೆಪಿ ಕಚೇರಿ: ನಗರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ವೀಕ್ಷಣಾ ಕಾರ್ಯಕ್ರಮ ದಲ್ಲಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್, ಪಕ್ಷದ ನಗರಾಧ್ಯಕ್ಷ ಶ್ರೀವತ್ಸ, ಜಿಲ್ಲಾಧ್ಯಕ್ಷ ಎಸ್.ಡಿ.ಮಹೇಂದ್ರ, ಮುಖಂಡರಾದ ಜಗದೀಶ್, ಸುರೇಶ್‍ಬಾಬು, ಮೈ.ವಿ.ರವಿಶಂಕರ್, ಗೆಜ್ಜೆಗಳ್ಳಿ ಮಹೇಶ್, ಕೆ.ವಸಂತಕುಮಾರ್ ಮತ್ತಿತರರಿದ್ದರು.

ಕಾಡಾ ಕಚೇರಿ: ನಗರದ ಕಾಡಾ ಕಚೇರಿ ಆವರಣದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿದ್ದ ವೀಕ್ಷಣೆ ಕಾರ್ಯಕ್ರಮದಲ್ಲಿ ಬಿಜೆಪಿ ಕೆ.ಆರ್.ಕ್ಷೇತ್ರ ಅಧ್ಯಕ್ಷ ವೇಡಿವೇಲು, ಕಾರ್ಯದರ್ಶಿ ನೂರ್ ಫಾತಿಮಾ, ಮಹಿಳಾ ಮೋರ್ಚಾ ಅಧ್ಯಕ್ಷೆ ಅನ್ನಪೂರ್ಣ, ಬಾಲಕೃಷ್ಣ, ರವಿ, ಸಂತೋಷ್, ಶಂಬು, ಮುರಳಿ, ಉಮೇಶ್, ಹೇಮಂತ್ ಹಾಜರಿದ್ದರು.

ಸಂಕಲ್ಪ: ಇದೇ ವೇಳೆ ಆತ್ಮನಿರ್ಭರ ಭಾರತ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ವಿವರಗಳನ್ನು ಹಾಗೂ `ಸ್ವದೇಶಿ ಬಳಸಿ-ದೇಶ ಉಳಿಸಿ’ ಮತ್ತು `ಚೀನಾ ಪದಾರ್ಥ ಮುಕ್ತ ಮೈಸೂರು’ ಎನ್ನುವ ಸಂದೇಶವನ್ನು ಮೈಸೂರಿನಲ್ಲಿ ಮನೆ ಮನೆಗೂ ತಲುಪಿಸುವ ಕಾರ್ಯವನ್ನು ಕೆಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅದಕ್ಕಾಗಿ ತಾಯಿ ಭಾರತಾಂಭೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಕಲ್ಪ ಮಾಡಲಾಯಿತು.

Translate »