ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಆರೋಪ
ಮೈಸೂರು, ಜೂ.15(ಆರ್‍ಕೆಬಿ)- ಮೈಸೂರು ತಾಲೂಕು ಕಚೇರಿಯಲ್ಲಿ ಭೋವಿ, ಕೊರಮ, ಬಂಜಾರ, ಲಂಬಾಣಿ ಜನಾಂಗಗಳಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡದೆ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳು ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮು ಇಂದಿಲ್ಲಿ ಆರೋಪಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆದು ಹಾಕಲಾಗಿದ್ದು, ಜನರಲ್ ಕ್ಯಾಟಗರಿಗೆ ಸೇರಿದ್ದೀರಿ. ಹೀಗಾಗಿ ನಿಮಗೆ ಜಾತಿ ಪ್ರಮಾಣ ಪತ್ರ ನೀಡಲು ಬರುವುದಿಲ್ಲ ಎಂದು ಗೋಡೆಗಳಿಗೆ ನೋಟಿಸ್ ಅಂಟಿಸಿ ಹೇಳುವ ಮೂಲಕ ಈ ಸಮಾಜಗಳಿಗೆ ಜನಸ್ನೇಹಿ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.
ತಾಲೂಕು ತಹಶೀಲ್ದಾರ್ ಯಾವುದೇ ನಿರ್ದೇಶನ ನೀಡದಿದ್ದರೂ ಈ ಸಮಾಜದ ಜನರೊಂದಿಗೆ ಸ್ಪಂದಿಸದೆ, ಹೆದರಿಸಿ, ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡುತ್ತಿರುವ ಜನಸ್ನೇಹಿ ಕೇಂದ್ರದ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸುವಂತೆ ಆಗ್ರಹಿಸಿದರು. ಕ್ರಮ ಕೈಗೊಳ್ಳದಿದ್ದರೆ ಈ ಸಮುದಾಯಗಳು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಂಜಾರ ಸಮಾಜದ ಅಧ್ಯಕ್ಷ ಬಸವರಾಜ ನಾಯಕ್, ನಗರಪಾಲಿಕೆ ಮಾಜಿ ಸದಸ್ಯ ಜಿ.ನಾಗರಾಜು, ಕೊರಮ ಸಮಾಜದ ಮುಖಂಡ ರಮೇಶ್, ಭೋವಿ ಸಮಾಜದ ಮುಖಂಡ ರಮೇಶ್‍ಬಾಬು ಇದ್ದರು.