ಹೊರ ರಾಜ್ಯದ ಅಲಂಕಾರಿಕ ದೀಪಗಳ ಮುಂದೆ  ಮಂಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು
ಮೈಸೂರು

ಹೊರ ರಾಜ್ಯದ ಅಲಂಕಾರಿಕ ದೀಪಗಳ ಮುಂದೆ ಮಂಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು

November 4, 2021

ಮೈಸೂರು, ನ.3-ದೀಪಾವಳಿಯಲ್ಲಿ ಬೆಳಗ ಬೇಕಾದ `ದೂರ’ ಗ್ರಾಮದ ಮಣ್ಣಿನ ದೀಪಗಳು ಹೊರ ರಾಜ್ಯದ ಅಲಂಕಾರಿಕ ಮೌಲ್ಡ್ ದೀಪಗಳ ಮುಂದೆ ಮಂಕಾಗಿವೆ.

ಇಂದು ಎಲ್ಲಾ ಕ್ಷೇತ್ರಗಳಲ್ಲೂ ಆಧುನಿಕತೆಯ ರಂಗು ತನ್ನ ಕಬಂಧಬಾಹು ಚಾಚಿದ್ದು, ಪಾರಂ ಪರಿಕ ಮತ್ತು ಸಾಂಪ್ರದಾಯಿಕ ವಸ್ತುಗಳಿಗೆ ಬೆಲೆಯೇ ಇಲ್ಲವೇನೋ ಎಂಬಂತಾಗಿದೆ. ಆದರೂ ಕೆಲ ವೊಂದು ವಸ್ತುಗಳು ಇದಕ್ಕೆ ಸವಾಲೊಡ್ಡುವಂತೆ ಮುಂದುವರೆದುಕೊಂಡು ಬಂದಿದ್ದು, ಜನರು ಅದರ ಕೈಹಿಡಿಯುವ ಕೆಲಸ ಮಾಡಬೇಕಿದೆ.

ಆಧುನಿಕತೆಯ ಪರಿಣಾಮ ಗುಡಿಕೈಗಾರಿಕೆ ನೆಲಕಚ್ಚಿವೆ. ಕುಂಬಾರರ ಕುಲಕಸುಬಿಗೆ ಭಾರೀ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ. ಕೆಲವರು ಕುಂಬಾರ ವೃತ್ತಿಯನ್ನು ತ್ಯಜಿಸಿ ಅನ್ಯ ಹುದ್ದೆಯನ್ನೇ ಅವಲಂಬಿಸುತ್ತಿದ್ದಾರೆ. ಆದರೆ ಮೈಸೂರು ತಾಲೂಕಿನ `ದೂರ’ ಗ್ರಾಮದಲ್ಲಿರುವ ಕುಂಬಾರ ಕುಶಲ ಕೈಗಾರಿಕಾ ಸಂಘದ ಸದಸ್ಯರು ತಮ್ಮ ಕುಲ ಕಸುಬನ್ನು ಮುಂದುವರೆಸಿಕೊಂಡು ಬಂದು, ಗಮನ ಸೆಳೆಯುತ್ತಿದ್ದಾರೆ.

ತಮಿಳುನಾಡು, ಪಾಂಡಿಚೇರಿ, ರಾಜಸ್ತಾನ, ಬಿಹಾರ, ಕೊಲ್ಕತ್ತ ಸೇರಿದಂತೆ ಹೊರ ರಾಜ್ಯಗಳಲ್ಲಿ ದೊಡ್ಡ ಕಂಪನಿಗಳಲ್ಲಿ ಯಂತ್ರದಿಂದ ತಯಾರಾದ ಅಲಂಕಾರಿಕ ದೀಪಗಳು ಮಾರುಕಟ್ಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಲಗ್ಗೆಯಿಟ್ಟಿದ್ದು, ಕುಂಬಾರಿಕೆ ಕಲೆ ಯಿಂದ ತಯಾರಾದ ಮಣ್ಣಿನ ದೀಪಗಳಿಗೆ ಬೇಡಿಕೆ ಕುಗ್ಗಿದೆ. ಆದರೂ ಸ್ಥಳೀಯವಾಗಿ ತಯಾರಿ ಸಲಾದ ಮಣ್ಣಿನ ಹಣತೆ ಖರೀದಿಸಲು ಕೆಲವರು ಮುಂದಾಗುತ್ತಿರುವುದು ಒಳ್ಳೆಯ ಬೆಳವಣಿಗೆ.
ಈ ಹಿಂದೆ ಪ್ರತಿ ವರ್ಷ 10 ರಿಂದ 15 ಲಕ್ಷ ಮಣ್ಣಿನ ದೀಪಗಳು ದೀಪಾವಳಿ ಸಂದರ್ಭದಲ್ಲಿ ವ್ಯಾಪಾರವಾಗುತ್ತಿತ್ತು. ಇದರಿಂದ ಅವರ ಬಾಳು ಹಸನಾಗುತ್ತಿತ್ತು. ಆದರೆ ಈಗ ಪ್ರತಿ ವರ್ಷ ಕೇವಲ ಎರಡು ಲಕ್ಷ ದೀಪಗಳನ್ನು ಮಾತ್ರ ತಯಾ ರಿಸಲಾಗಿರುವುದು ಮಣ್ಣಿನ ದೀಪಗಳ ಬೇಡಿಕೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ.

ದೀಪಾವಳಿಗಾಗಿ ದೂರದ ದೀಪದ ಮೆರಗು: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಹಿಂದೂ ಗಳ ಮನೆಯಲ್ಲಿ ಎಲ್ಲಿಲ್ಲದ ಸಂಭ್ರಮ. ಮನೆ ಮುಂದೆ ದೀಪ ಬೆಳಗಿಸುವ ಸಂಪ್ರದಾಯ. ಮನಸ್ಸಿ ನಲ್ಲಿರುವ ಅಂಧಕಾರ ಹೋಗಲಾಡಿಸುವ ಸಂಕೇತ ವಾಗಿ ದೀಪ ಬೆಳಗಿಸಲಾಗುತ್ತದೆ.
ಪ್ರತಿ ವರ್ಷವೂ ಹೊಸ ಹೊಸ ದೀಪವನ್ನೇ ಬೆಳಗಬೇಕು ಎಂಬುದು ವಾಡಿಕೆ. ಇದಕ್ಕಾಗಿ ಮಾರುಕಟ್ಟೆಗಳಲ್ಲಿ ಸಿಗುವ ದೀಪಗಳನ್ನು ಖರೀ ದಿಸಲಾಗುತ್ತದೆ. ಕಳೆದ 30 ವರ್ಷದಿಂದ `ದೂರ’ ಗ್ರಾಮದ ದೀಪಗಳಿಗೆ ಬೇಡಿಕೆ ಇತ್ತು. ಕಳೆದ ಐದಾರು ವರ್ಷದಿಂದ ಯಂತ್ರದ ಮೂಲಕ ತಯಾರಿಸಿರುವ ಮಣ್ಣಿನ ದೀಪಗಳು ಮಾರು ಕಟ್ಟೆಗೆ ಲಗ್ಗೆ ಇಟ್ಟಿದ್ದು, ಇದರಿಂದ ಕುಂಬಾರರ ಗುಡಿ ಕೈಗಾರಿಕೆಯ ದೀಪಗಳಿಗೆ ಬೇಡಿಕೆ ಕುಸಿ ದಿದೆ. ಆದರೂ ದೂರ ಗ್ರಾಮದ 14 ಕುಟುಂಬ ದವರು ಸೇರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಾಲ್ಕು ಬಗೆಯ ಮಣ್ಣಿನ ಹಣತೆ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.

ನೆರವಾಯಿತು ಸಂಘ: ಕಳೆದ ಮೂರು ದಶಕದ ಹಿಂದೆ ದೂರ ಗ್ರಾಮದಲ್ಲಿ `ಕುಂಬಾರ ಕುಲಾಲ ಗುಂಡ ಬ್ರಹ್ಮಾರ್ಯ ಕುಂಬಾರ ಕುಶಲ ಕೈಗಾರಿಕಾ ಸಹಕಾರ ಸಂಘ’ ಎಂಬ ಹೆಸರಿನಲ್ಲಿ ಸಹಕಾರ ಸಂಘ ನಿರ್ಮಿಸಿಕೊಂಡು ಜೀವನ ನಿರ್ವಹಿಸು ತ್ತಿದ್ದಾರೆ ಇಲ್ಲಿನ ಕುಂಬಾರರು. ಈ ಸಂಘಕ್ಕೆ ದೂರ ಗ್ರಾಮದ ಕುಂಬಾರ ಸಮುದಾಯ ಹಿರಿಯರು ಮುಕ್ಕಾಲು ಗುಂಟೆ ಭೂಮಿಯನ್ನು ದಾನವಾಗಿ ನೀಡಿದ್ದಾರೆ. ಈ ಭೂಮಿಯಲ್ಲಿ ಜಿಲ್ಲಾ ಖಾದಿ ಬೋರ್ಡ್‍ನಿಂದ ಸಾಲ ಸೌಲಭ್ಯ ಪಡೆದು ಶೆಡ್ ನಿರ್ಮಿಸಲಾಗಿದೆ. ಈ ಶೆಡ್‍ನಲ್ಲಿ 14 ಕುಟುಂಬದ ಸದಸ್ಯರು ದೀಪ ಸೇರಿದಂತೆ ಇನ್ನಿತರ ಮಣ್ಣಿನಿಂದ ವಸ್ತುಗಳನ್ನು ತಯಾರಿಸುತ್ತಿದ್ದಾರೆ.

ಎರಡು ಒಲೆ ಗೂಡು: ಜೇಡಿಮಣ್ಣಿನಿಂದ ತಯಾರಿಸಿದ ದೀಪವನ್ನು 10 ದಿನ ಒಣಗಿಸ ಲಾಗುತ್ತದೆ. ಆ ನಂತರ ಒಲೆ ಗೂಡಿನಲ್ಲಿ ಜೋಡಿಸಿ ಬೇಯಿಸಲಾಗುತ್ತದೆ. ತೆಂಗಿನ ಗರಿ ಹಾಗೂ ತೆಂಗಿನ ಮಟ್ಟೆಯನ್ನೇ ಬಳಸಿ ಮಣ್ಣಿನ ದೀಪವನ್ನು ಬೇಯಿಸಲಾಗುತ್ತದೆ. ಸುಮಾರು ಐದಾರು ಗಂಟೆ ಬೇಯಿಸಿದ, ಬಳಿಕ ಮರುದಿನ ಒಲೆ ಗೂಡನ್ನು ತೆರೆಯಲಾಗುತ್ತದೆ. ಅದರೊಳಗಿ ರುವ ದೀಪವನ್ನು ಗಾತ್ರ, ವಿನ್ಯಾಸಕ್ಕನುಗುಣವಾಗಿ ವಿಂಗಡಿಸಿ ಜೋಡಿಸಲಾಗುತ್ತದೆ.

ಮೂರು ಜಿಲ್ಲೆಗಳಿಗೂ ಸರಬರಾಜು: ದೂರ ಗ್ರಾಮದ ಮಣ್ಣಿನ ಹಣತೆಯನ್ನು ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳಿಗೆ ಸರಬ ರಾಜು ಮಾಡಲಾಗುತ್ತಿದೆ. ಮೈಸೂರು ನಗರ, ನಂಜನಗೂಡಿಗೆ ಹೆಚ್ಚು ದೀಪ ಸರಬರಾಜಾದರೆ, ಹುಣಸೂರು, ಕೆ.ಆರ್.ನಗರ, ಗುಂಡ್ಲುಪೇಟೆ, ಚಾಮ ರಾಜನಗರದಲ್ಲೂ `ದೂರ’ ಗ್ರಾಮದ ದೀಪಗಳು ದೀಪಾವಳಿಯಂದು ಬೆಳಗಲಿದೆÉ. ಒಂದು ಚಿಕ್ಕ ದೀಪಕ್ಕೆ 1 ರೂ., 2 ರೂ., ದರ ನಿಗದಿ ಮಾಡ ಲಾಗಿದ್ದರೆ, ದೊಡ್ಡ ದೀಪಗಳಿಗೆ 6 ರೂ, 8 ರೂ., ಅಯ್ಯಪ್ಪಸ್ವಾಮಿ ದೀಪಕ್ಕೆ 10 ರೂ. ದರ ನಿಗದಿ ಮಾಡಲಾಗಿದೆ. ತಯಾರಕರಿಂದ ವ್ಯಾಪಾರಿ ಗಳು ಹೋಲ್‍ಸೆಲ್ ದರದಲ್ಲಿ ದೀಪ ಖರೀದಿಸಿ ಲಾಭಾಂಶ ಇಟ್ಟುಕೊಂಡು ಮಾರಾಟ ಮಾಡುತ್ತಾರೆ.

Translate »