ಮೈಸೂರಿಂದ ಅಪಾರ ಸಂಖ್ಯೆಯಲ್ಲಿ  ನಿರ್ಗಮನ-ಆಗಮನ!
ಮೈಸೂರು

ಮೈಸೂರಿಂದ ಅಪಾರ ಸಂಖ್ಯೆಯಲ್ಲಿ ನಿರ್ಗಮನ-ಆಗಮನ!

April 28, 2021

ಮೈಸೂರು,ಏ.27(ಎಂಟಿವೈ)- ಕೊರೊನಾ 2ನೇ ಅಲೆಯಿಂದಾಗಿ ಸೋಂಕಿಗೆ ಒಳ ಗಾಗುವವರ ಹಾಗೂ ಜೀವ ಕಳೆದು ಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಸರ್ಕಾರ ರಾಜ್ಯಾದ್ಯಂತ 14 ದಿನಗಳ `ಕೋವಿಡ್ ಕಫ್ರ್ಯೂ’ (ಲಾಕ್ ಡೌನ್) ಘೋಷಿಸಿದ ಹಿನ್ನೆಲೆಯಲ್ಲಿ ಮೈಸೂ ರಲ್ಲಿ ನೆಲೆಸಿದ್ದ ಅನ್ಯ ರಾಜ್ಯಗಳ ಹಾಗೂ ಜಿಲ್ಲೆಗಳ ವಿದ್ಯಾರ್ಥಿ ಸಮೂಹ, ಅಸಂಘ ಟಿತ ವಲಯದ ಕಾರ್ಮಿಕರು ಹಾಗೂ ಐಟಿ ಕಂಪನಿಗಳ ಉದ್ಯೋಗಿಗಳು ಮರಳಿ ತವರೂರಿನತ್ತ ಪ್ರಯಾಣಿಸಲು ಬಸ್‍ಗಳಿಗೆ ಮುಗಿಬಿದ್ದರು. ಇದೇ ವೇಳೆ, ಬೆಂಗಳೂರು ಸೇರಿದಂತೆ ವಿವಿಧೆಡೆ ನೆಲೆಸಿದ್ದ ಮೈಸೂ ರಿಗರು ವಾಪಸಾಗುತ್ತಿದ್ದಾರೆ.

ರಾಜ್ಯ ಸರ್ಕಾರ ಏ.27ರ ರಾತ್ರಿ 9ರಿಂದಲೇ ಅನ್ವಯವಾಗುವಂತೆ 14 ದಿನಗಳ `ಕೋವಿಡ್ ಕಫ್ರ್ಯೂ’ ಜಾರಿಗೊಳಿಸಿದ ಬೆನ್ನಲ್ಲೇ ತವರಿಗೆ ಮರಳುವ ಕ್ರಿಯೆ ಆರಂಭ ವಾಗಿದ್ದು, ಮಂಗಳವಾರ ಮತ್ತಷ್ಟು ವೇಗ ಪಡೆದುಕೊಂಡಿತು. ಕಾಲೇಜು ತರಗತಿಗಳು 2 ವಾರ ನಡೆಯದ ಕಾರಣ, ಮೈಸೂರಲ್ಲಿ ವ್ಯಾಸಂಗ ಮಾಡುತ್ತಿದ್ದ ಬೇರೆ ಊರುಗಳ ವಿದ್ಯಾರ್ಥಿ ಸಮೂಹ ಊರಿಗೆ ವಾಪಸಾಗು ತ್ತಿದೆ. ಐಟಿ-ಬಿಟಿ ಕಂಪನಿಗಳ ಉದ್ಯೋಗಿ ಗಳಿಗೆ `ವರ್ಕ್ ಫ್ರಂ ಹೋಮ್’ (ಮನೆ ಯಲ್ಲಿದ್ದುಕೊಂಡೇ ಕಚೇರಿ ಕೆಲಸ) ಮಾಡಲು ಸೂಚನೆ ನೀಡಿರುವುದರಿಂದ ಉದ್ಯೋಗಿ ಗಳು ತವರಿನತ್ತ ಮುಖ ಮಾಡಿದ್ದಾರೆ.
ವಿವಿಧ ಜಿಲ್ಲೆಗಳಿಗೆ ಪ್ರಯಾಣ: ವಿವಿಧ ಉದ್ದೇಶಗಳಿಂದ ಮೈಸೂರಲ್ಲಿ ನೆಲೆಸಿದ್ದ ಬೇರೆ ಜಿಲ್ಲೆಗಳ ಜನರು ತಮ್ಮ ಲಗೇಜ್ ನೊಂದಿಗೆ ವಾಪಸಾದರು. ವಿವಿಧ ಹೋಟೆಲ್, ಅಂಗಡಿ, ವಸತಿ ಗೃಹಗಳಲ್ಲಿ ಕೆಲಸ ಮಾಡು ತ್ತಿದ್ದವರು, ರಸ್ತೆ ಬದಿ ಚಾಟ್ ಸೆಂಟರ್ ನಡೆಸುತ್ತಿದ್ದವರು ಮಂಗಳವಾರ ಬೆಳಗ್ಗೆಯೇ ಊರಿಗೆ ತೆರಳಿದರು. ಮೈಸೂರಿನಿಂದ ಬೆಂಗ ಳೂರು, ತುಮಕೂರು, ಹಾಸನ, ಕೊಡಗು, ಚಾಮರಾಜನಗರ, ಶಿವಮೊಗ್ಗ, ಮಂಗ ಳೂರು, ಉಡುಪಿ ಮತ್ತಿತರೆಡೆಗೆ ಸಂಚರಿಸಿ ದವರ ಸಂಖ್ಯೆ ಹೆಚ್ಚಾಗಿತ್ತು.

ವೀಕೆಂಡ್ ಕಫ್ರ್ಯೂ ಬಳಿಕ ಸಾರಿಗೆ ಸಂಸ್ಥೆ ಬಸ್‍ಗಳ ಸಂಚಾರ ಆರಂಭವಾದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಸೋಮವಾರ ಬೆಳಗ್ಗೆ ಮೈಸೂರು ಗ್ರಾಮಾಂ ತರ ಬಸ್ ನಿಲ್ದಾಣದಿಂದ ಬೇರೆ ನಗರ, ಜಿಲ್ಲೆಗಳಿಗೆ ಸಂಚರಿಸಿದ ಬಸ್‍ಗಳ ಸಂಖ್ಯೆ ಕಡಿಮೆ ಇತ್ತು. ಮಧ್ಯಾಹ್ನ 2 ವಾರಗಳ ಕಫ್ರ್ಯೂ ಘೋಷಣೆಯಾದ ನಂತರ ಪ್ರಯಾ ಣಿಕರ ಸಂಖ್ಯೆ ದಿಢೀರ್ ಹೆಚ್ಚಿತು. ಆಗ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಯಿತು. ಮಂಗಳವಾರ ಬೆಳಗ್ಗಿನಿಂದಲೇ ಗ್ರಾಮಾಂ ತರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರ ದಂಡೇ ಹರಿದು ಬಂತು. ಕೆಲ ದಿನಗಳಿಂದ ಬಸ್ ಮುಷ್ಕರ, ಪ್ರಯಾಣಿಕರಿಲ್ಲದೇ ಭಣಗುಡು ತ್ತಿದ್ದ ಬಸ್ ನಿಲ್ದಾಣದಲ್ಲಿ ಮಂಗಳವಾರ ಪ್ರಯಾಣಿಕರ ದಟ್ಟಣೆ ಕಂಡು ಬಂತು.

ಕೇರಳ, ತಮಿಳುನಾಡು: ಮೈಸೂರಿನ ವಿವಿಧ ಖಾಸಗಿ ಕಾಲೇಜು, ವಿಶ್ವವಿದ್ಯಾ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಕೇರಳ, ತಮಿಳುನಾಡು ರಾಜ್ಯಗಳ ವಿದ್ಯಾರ್ಥಿ ಗಳು ಲಗ್ಗೇಜ್ ಸಹಿತ ತಮ್ಮ ಊರಿಗೆ ಹೊರಟರು. ಗ್ರಾಮಾಂತರ ಬಸ್ ನಿಲ್ದಾಣ ದಿಂದ ಕೇರಳದ ವಯನಾಡು, ಕ್ಯಾಲಿ ಕಟ್, ತ್ರಿವೆಂಡ್ರಮ್, ಮಣ ಪುರಂ ಸೇರಿ ದಂತೆ ವಿವಿಧ ನಗರಕ್ಕೆ ಕೇರಳ ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ಬೆಳೆಸಿದರು.

ಕೇರಳದ ರಸ್ತೆ ಸಾರಿಗೆ ಸಂಸ್ಥೆಯೇ ಹೆಚ್ಚು ವರಿ ಬಸ್ ಸೌಲಭ್ಯ ಕಲ್ಪಿಸಿತ್ತು. ತಮಿಳು ನಾಡಿನ ವಿವಿಧ ನಗರಗಳಿಗೂ ಆ ರಾಜ್ಯದ ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ಊರಿಗೆ ತೆರಳಿದವರ ಸಂಖ್ಯೆಯೂ ಹೆಚ್ಚಾಗಿತ್ತು. ಸೋಮವಾರವೇ ಕಫ್ರ್ಯೂ ಬಗ್ಗೆ ಮಾಹಿತಿ ಪಡೆದಿದ್ದ ಉಭಯ ರಾಜ್ಯಗಳ ಸಾರಿಗೆ ಸಂಸ್ಥೆ ಅಧಿಕಾರಿಗಳು ಮುಂಗಡ ಟಿಕೆಟ್ ಕಾಯ್ದಿರಿಸಿದ್ದ ಪ್ರಯಾಣಿಕರ ಸಂಖ್ಯೆ ಆಧರಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ದ್ದವು. ಮೈಸೂರು, ಬೆಂಗಳೂರಲ್ಲಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು, ವ್ಯಾಪಾರಿ ಗಳು, ಉದ್ಯೋಗಿಗಳು ಕುಟುಂಬ ಸದಸ್ಯರೂ ತವರೂರಿಗೆ ಹೊರಟಿದ್ದರಿಂದ ಬಸ್ ಗಳೆಲ್ಲಾ ಪ್ರಯಾಣಿಕರಿಂದ ತುಂಬಿ ತುಳುಕಿದವು.

Translate »