ಕೊಡಗಲ್ಲಿ ಪ್ರವಾಹ ಭೀತಿ ಜನರದ್ದು ದುಸ್ಥಿತಿ
ಕೊಡಗು

ಕೊಡಗಲ್ಲಿ ಪ್ರವಾಹ ಭೀತಿ ಜನರದ್ದು ದುಸ್ಥಿತಿ

July 16, 2022

ಮಡಿಕೇರಿ, ಜು.15-ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಅಪಾರ ಹಾನಿ ಸಂಭವಿಸಿದೆ. ಮಳೆಯ ಅಬ್ಬರಕ್ಕೆ ನದಿಗಳಲ್ಲಿ ಮತ್ತೆ ಪ್ರವಾಹ ತಲೆದೋರಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಗ್ರಾಮೀಣ ಜನರ ಬದುಕು ದುಸ್ತರವಾಗಿದೆ. ಕಾಫಿ, ಅಡಿಕೆ, ಬಾಳೆ ತೋಟಗಳು ನೀರಿನಲ್ಲಿ ಮುಳುಗಿದ್ದು, ಬೆಳೆ ನಷ್ಟ ಆತಂಕ ಬೆಳೆ ಗಾರರನ್ನು ಕಾಡುತ್ತಿದೆ. ಈ ನಡುವೆ ಶನಿವಾರ ಬೆಳಗಿನ 8.30 ಗಂಟೆವರೆಗೆ ಜಿಲ್ಲೆ ಯಲ್ಲಿ `ಆರೆಂಜ್ ಅಲರ್ಟ್’ ಘೋಷಣೆ ಮಾಡಲಾಗಿದೆ. ಭಾರೀ ಗಾಳಿ ಸಹಿತ ಮಳೆ ಸುರಿಯುತ್ತಿರುವ ಕಾರಣ ವಿವಿಧ ಕಡೆಗಳಲ್ಲಿ ಮರಗಳು ಮುರಿದು ಬಿದ್ದು ಜಿಲ್ಲೆಯಾದ್ಯಂತ ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದಿದ್ದು, ದುರಸ್ಥಿ ಕಾರ್ಯ ನಡೆಸಲಾ ಗುತ್ತಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ ಬಗ್ಗೆಯೂ ವರದಿಯಾಗಿದ್ದು ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿವೆ.

ಕುಟುಂಬಗಳ ಸ್ಥಳಾಂತರ: ವಿರಾಜಪೇಟೆ ಪಟ್ಟಣದ ಮಲೆತಿರಿಕೆ ಬೆಟ್ಟ ಮತ್ತು ನೆಹರೂ ನಗರ ಅಪಾಯದ ಸ್ಥಿತಿಯಲ್ಲಿದೆ. 2018, 2019ರಲ್ಲಿ ಈ ಭಾಗದಲ್ಲಿ ಸುರಿದ ಭಾರೀ ಮಳೆಯಿಂದ ಬೆಟ್ಟದಲ್ಲಿ ಭಾರೀ ಬಿರುಕುಗಳು ಉಂಟಾಗಿದ್ದು, ಆ ಸಂದರ್ಭ ಭೂಗರ್ಭ ಶಾಸ್ತ್ರ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಅಪಾಯದ ಮುನ್ಸೂಚನೆ ನೀಡಿದ್ದರು. ಇದೀಗ ಮಳೆ ಹೆಚ್ಚಾಗಿರುವ ಕಾರಣ ಬೆಟ್ಟ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಅಲ್ಲಿ ನೆಲೆಸಿರುವ 68 ಕುಟುಂಬಗಳನ್ನು ಸುರಕ್ಷತಾ ಕ್ರಮವಾಗಿ ಸಂತ ಅನ್ನಮ್ಮ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಕುಟುಂಬಗಳಿಗೆ ಆಹಾರ ಕಿಟ್‍ಗಳು, ಹಾಸಿಗೆ, ಹೊದಿಕೆ ಸೇರಿದಂತೆ ದಿನ ಬಳಕೆ ವಸ್ತುಗಳನ್ನು ಒದಗಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ವೈದ್ಯರು, ಶುಶ್ರೂಷಕಿಯರು, ಆರೋಗ್ಯ ಸಹಾಯಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕರಡಿಗೋಡುವಿನಲ್ಲಿ ಕಾವೇರಿ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿದ್ದು, ಕರಡಿಗೋಡು ನದಿ ತಟದ ಮನೆಗಳಿಗೆ ನೀರು ನುಗ್ಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಅಲ್ಲಿನ ನಿವಾಸಿಗಳನ್ನು ಸಮೀಪದ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ.

ಪ್ರವಾಹ ಪರಿಸ್ಥಿತಿ: ಜಿಲ್ಲೆಯಾದ್ಯಂತ ಬಿರುಸಿನ ಮಳೆ ಮುಂದುವರೆದಿರುವ ಕಾರಣ ಎಲ್ಲಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಕಾವೇರಿ, ಲಕ್ಷ್ಮಣ ತೀರ್ಥ, ರಾಮತೀರ್ಥ ಸೇರಿದಂತೆ ಎಲ್ಲಾ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಪ್ರವಾಹ ನೀರಿನಿಂದ ಬಂದ್ ಆಗಿದೆ. ಭಾಗಮಂಡಲ-ಅಯ್ಯಂಗೇರಿ, ಗುಹ್ಯ-ಕಕ್ಕಟ್ಟುಕಾಡು, ಹೊದ್ದೂರು-ನಾಪೋಕ್ಲು, ನಾಪೋಕ್ಲು-ಮೂರ್ನಾಡು, ಕರಡಿಗೋಡು-ಚಿಕ್ಕನಲ್ಲಿ ಗ್ರಾಮೀಣ ರಸ್ತೆಗಳು ಪ್ರವಾಹ ನೀರಿನಿಂದ ಸಂಪರ್ಕ ಕಡಿದುಕೊಂಡಿವೆ. ಕಾವೇರಿ ನದಿ ಪಾತ್ರದ ಗ್ರಾಮಗಳಾದ ಎಮ್ಮೆಮಾಡು, ಕೊಟ್ಟಮುಡಿ, ಬಲ್ಲಮಾವಟಿ, ನಾಪೋಕ್ಲು ವ್ಯಾಪ್ತಿಯಲ್ಲಿ ಪ್ರವಾಹ ಕಂಡು ಬಂದಿದೆ. ನಾಪೋಕ್ಲುವಿನ ಪಾಲೂರು ಹರಿಶ್ಚಂದ್ರ ದೇವಾಲಯ ಆವರಣ ಕಾವೇರಿ ನದಿ ನೀರಿನಿಂದ ಆವೃತ್ತವಾಗಿದೆ.

ದಕ್ಷಿಣ ಕೊಡಗಿನಲ್ಲಿ ಮಳೆಯಿಂದಾಗಿ ಲಕ್ಷ್ಮಣ ತೀರ್ಥ ಹಾಗೂ ರಾಮ ತೀರ್ಥ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಲಕ್ಷ್ಮಣ ತೀರ್ಥ ನದಿಯ ಉಪನದಿ ರಾಮತೀರ್ಥ ಉಕ್ಕಿ ಹರಿಯುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ, ನಾಲ್ಕೇರಿ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿ, ಅಡಿಕೆ ಹಾಗೂ ಬಾಳೆ ತೋಟಗಳಿಗೆ ನೀರು ನುಗ್ಗಿದ್ದು, ಹತ್ತಾರು ಏಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ರಾಮ ತೀರ್ಥ ನದಿ ಪ್ರವಾಹದಿಂದಾಗಿ ನಾಲ್ಕೇರಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಮೇಲೆ 5 ಅಡಿಗಳಷ್ಟು ನೀರು ಹರಿಯುತ್ತಿದ್ದು, ಬ್ಯಾರಿಕೇಡ್ ಅಳವಡಿಸಿ ಸಂಚಾರ ನಿಷೇಧಿಸಲಾಗಿದೆ. ಇನ್ನು ಉಕ್ಕಿ ಹರಿಯುತ್ತಿರುವ ಪ್ರವಾಹ ದಾಟಲಾರದೆ ನಾಲ್ಕೇರಿ ಗ್ರಾಮಸ್ಥರು ಪರದಾಡುವಂತಾಗಿದೆ.

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭೂ ಕುಸಿತ: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೊಡಗಿನ ಇತಿಹಾಸ ಪ್ರಸಿದ್ಧ ಪಾಲೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದಿದೆ. ಮಣ್ಣು ಕುಸಿದ ರಭಸಕ್ಕೆ ದೇವಾಲಯದ ಕೆಳ ಭಾಗದಲ್ಲಿ ವಾಸವಿರುವ ಅರ್ಚಕರ ಮನೆಗೆ ಹಾನಿಯಾಗಿದೆ. ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಅರ್ಚಕರಾದ ದೇವಿಪ್ರಸಾದ್ ವಾಸವಿದ್ದ ಮನೆ ಏಕಾಏಕಿ ನಲುಗಿದಂತಾಗಿದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಸರು ಮಣ್ಣು ಕಾಣಿಸಿಕೊಂಡಿದೆ. ಇದರಿಂದ ಭೀತಿಗೊಂಡ ಅರ್ಚಕರ ಕುಟುಂಬಸ್ಥರು ಮನೆಯ ಹಿಂಭಾಗದಲ್ಲಿ ನೋಡಿದಾಗ ಭಾರೀ ಪ್ರಮಾಣದ ಮಣ್ಣು ಕುಸಿದಿರುವುದು ಕಂಡು ಬಂದಿದೆ. ಅಷ್ಟೇ ಅಲ್ಲದೇ ಮಣ್ಣಿನ ಜೊತೆಗೆ ಬಂಡೆಗಳು ಮನೆಯ ಗೋಡೆಗೆ ಅಪ್ಪಳಿಸಿದ್ದರಿಂದ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಸೋಮವಾರಪೇಟೆ, ಶನಿವಾರಸಂತೆ, ಶಾಂತಳ್ಳಿ ವ್ಯಾಪ್ತಿಯಲ್ಲೂ ಧಾರಾಕಾರ ಮಳೆ ಸುರಿಯುತ್ತಿದ್ದು, ಮನೆ ಮೇಲೆ ಭೂ ಕುಸಿತ, ಜಾನುವಾರು ಸಾವನ್ನಪ್ಪಿದ ಘಟನೆಗಳು ನಡೆಸಿರುವ ಬಗ್ಗೆ ವರದಿಯಾಗಿದೆ. ಶಾಂತಳ್ಳಿ ಹೋಬಳಿ ಕೊತ್ತನಳ್ಳಿ ಗ್ರಾಮದ ಎನ್.ಟಿ. ಮೇದಪ್ಪ ಎಂಬುವರ ಮನೆಗೆ ಹಾನಿಯಾಗಿದೆ. ಪ್ರಸ್ತುತ ಮನೆ ವಾಸಕ್ಕೆ ಯೋಗ್ಯವಾಗಿಲ್ಲದ ಕಾರಣ ಈ ಕುಟುಂಬವನ್ನು ಸಮೀಪದ ಅಂಗನವಾಡಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಳೆ ವಿವರ: ಕಳೆದ 24 ಗಂಟೆ ಅವಧಿಯಲ್ಲಿ ಭಾಗಮಂಡಲ ವ್ಯಾಪ್ತಿಯಲ್ಲಿ 200 ಮಿ.ಮೀ, ಪೊನ್ನಂಪೇಟೆ ತಾಲೂಕಿನ ಹುದಿಕೇರಿಗೆ 190.60, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ವ್ಯಾಪ್ತಿಯಲ್ಲಿ 178, ಮಡಿಕೇರಿ ತಾಲೂಕಿನ ಬಲ್ಲಮಾವಟಿ 155 ಮಿ.ಮೀ, ನಾಪೋಕ್ಲು ವ್ಯಾಪ್ತಿಯಲ್ಲಿ 107.40 ಮಿ.ಮೀ, ಶ್ರೀಮಂಗಲ 85, ಪೊನ್ನಂಪೇಟೆ ವ್ಯಾಪ್ತಿಯಲ್ಲಿ 82 ಮಿ.ಮೀ. ಮಳೆ ಸುರಿದಿದೆ. ಪರಿಣಾಮ ಸಹಜವಾಗಿಯೇ ನದಿಗಳಲ್ಲಿ ನೀರಿನ ಪ್ರಮಾಣ ಉಕ್ಕೇರಿ, ಪ್ರವಾಹ ಉಂಟಾಗಲು ಕಾರಣವಾಗಿದೆ.

Translate »