ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಐದು ವರ್ಷ ಲಕ್ಷಕ್ಕೂ ಅಧಿಕ ಮಂದಿಗೆ  ಪಾಸ್‍ಪೋರ್ಟ್ ಭಾಗ್ಯ
ಮೈಸೂರು

ಮೈಸೂರಿನ ಪಾಸ್‍ಪೋರ್ಟ್ ಸೇವಾ ಕೇಂದ್ರಕ್ಕೆ ಐದು ವರ್ಷ ಲಕ್ಷಕ್ಕೂ ಅಧಿಕ ಮಂದಿಗೆ ಪಾಸ್‍ಪೋರ್ಟ್ ಭಾಗ್ಯ

July 15, 2022

ಮೈಸೂರು, ಜು.14(ಜಿಎ)- ಮೈಸೂ ರಿನಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭವಾಗಿ ಐದು ವರ್ಷವಾಯಿತು. ಇದು ವರೆಗೂ ಲಕ್ಷಕ್ಕೂ ಅಧಿಕ ಮಂದಿ ಕೇಂದ್ರದಿಂದ ಪಾಸ್‍ಪೋರ್ಟ್ ಸೇವೆ ಪಡೆದಿದ್ದಾರೆ.

2017ರಲ್ಲಿ ಮೈಸೂರಿನ ಮೇಟಗಳ್ಳಿಯ ಅಂಚೆ ಕಚೇರಿ ಆವರಣದಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಮಹತ್ವಾಕಾಂಕ್ಷೆಯಂತೆ, ವಿದೇಶಾಂಗ ಸಚಿವರಾಗಿದ್ದ ಸುಷ್ಮಾ ಸ್ವರಾಜ್ ಅವರ ಸಹಕಾರದಿಂದ ಆರಂಭವಾದ ಈ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು, ರಾಜ್ಯದವರೇ ಆದ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಉದ್ಘಾಟಿ ಸಿದ್ದರು. ಅಂದಿನಿಂದ ಇಂದಿನವರೆಗೂ ಮೈಸೂರು ಸೇರಿದಂತೆ ನೆರೆ ಜಿಲ್ಲೆ ಸಾರ್ವಜನಿಕರು ಈ ಕೇಂದ್ರದ ಮೂಲಕ ಪಾಸ್‍ಪೋರ್ಟ್ ಪಡೆದುಕೊಳ್ಳುತ್ತಿದ್ದಾರೆ. ಈ ಸೇವಾ ಕೇಂದ್ರ ಸ್ಥಾಪನೆಗೆ ಮುನ್ನ ಹೊಸದಾಗಿ ಪಾಸ್‍ಪೋರ್ಟ್ ಪಡೆಯಲು ಹಾಗೂ ನವೀಕರಣಕ್ಕೆ ಬೆಂಗಳೂರು ಹಾಗೂ ಮಂಗಳೂರಿನ ಪಾಸ್‍ಪೋರ್ಟ್ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಹಾಗಾಗಿ ಅಧಿಕ ಹಣದ ಜೊತೆಗೆ ಸಮಯವೂ ಹಿಡಿಯುತ್ತಿತ್ತು. ಕೆಲವೊಮ್ಮೆ ಅಲ್ಲಿಗೆ ಹೋದರೂ ಒಂದು ದಿನದಲ್ಲೇನೂ ಕೆಲಸವಾಗುತ್ತಿರಲಿಲ್ಲ. ಅವರು ಕೇಳಿದ ಅಗತ್ಯ ದಾಖಲೆಗಳು ಇಲ್ಲದೆ ಹೋದರೆ, ಮರಳಿ ಮೈಸೂರಿಗೆ ಬರಬೇಕು, ಮತ್ತೆ ಹೋಗಬೇಕು. ಹೀಗೆ ಪ್ರಯಾಸದ ಸಂಗತಿಯಾಗಿತ್ತು. ಮೈಸೂರಿನಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಆರಂಭವಾದಂದಿನಿಂದ ಮೈಸೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಕೊಡಗು ಸೇರಿದಂತೆ ಮೈಸೂರಿನ ಸುತ್ತಮುತ್ತಲಿನ ಜಿಲ್ಲೆಯ ವಿದ್ಯಾರ್ಥಿಗಳು, ಉದ್ಯಮಿಗಳು, ಅಧಿಕಾರಿಗಳು, ಪ್ರವಾಸಿಗರು ಸೇರಿದಂತೆ ಪ್ರತಿ ವರ್ಷ 25 ಸಾವಿರಕ್ಕೂ ಅಧಿಕ ಅರ್ಜಿ ಗಳು ಬರುತ್ತಿವೆ. ಜನರಿಗೆ ಈ ಕೇಂದ್ರದಿಂದ ಪಾಸ್‍ಪೋರ್ಟ್ ಪಡೆಯಲು ಹೆಚ್ಚು ಅನುಕೂಲಕಾರಿಯಾಗಿದೆ. ಹಾಗಾಗಿ ಅವರೆಲ್ಲಾ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಾಗದ ರಹಿತ ಅರ್ಜಿ ಸಲ್ಲಿಕೆ: ಆನ್‍ಲೈನ್ ಮೂಲಕ ಪಾಸ್‍ಪೋರ್ಟ್‍ಗೆ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಈ ಸೇವಾ ಕೇಂದ್ರಕ್ಕೆ ಬರಲು ಒಂದು ದಿನಾಂಕ, ಸಮಯವನ್ನು ನಿಗಧಿಪಡಿಸಿ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಸಂದೇಶ ಹೋಗುತ್ತದೆ. ಆ ನಿಗಧಿಪಡಿಸಿದ ದಿನಾಂಕ, ಸಮಯದಂದು ಅರ್ಜಿದಾರರು ತಮ್ಮ ಮೂಲ ದಾಖಲಾತಿಗಳನ್ನು ತೆಗೆದುಕೊಂಡು ಸೇವಾ ಕೇಂದ್ರಕ್ಕೆ ಬಂದರೆ, ಮೊದಲು ಅಲ್ಲಿರುವ ಅಧಿಕಾರಿಗಳು ಅರ್ಜಿಯನ್ನು ಪರಿಶೀಲನೆ ನಡೆಸುತ್ತಾರೆ. ನಂತರ ಅರ್ಜಿದಾರರ ಫೋಟೋ ಮತ್ತು ಬೆರಳಚ್ಚು ಪಡೆದುಕೊಂಡು ಅರ್ಜಿದಾರರನ್ನು ಪರಿಶೀಲನಾ ಅಧಿಕಾರಿಗಳ ಬಳಿ ಕಳುಹಿಸಲಾಗುತ್ತದೆ. ಪರಿಶೀಲನಾ ಅಧಿಕಾರಿಯು ಇವರ ಮೂಲ ದಾಖಲೆಗಳು ಮತ್ತು ಅರ್ಜಿಯ ಜೊತೆಗೆ ಲಗತ್ತಿಸಿರುವ ದಾಖಲಾತಿಗಳ ಸಾಮ್ಯತೆಯನ್ನು ಪರಿಶೀಲಿಸಿ, ನಂತರ ಸ್ಕ್ಯಾನ್ ಮಾಡಿ ಅಪ್ ಲೋಡ್ ಮಾಡುವ ಮೂಲಕ ಬೆಂಗಳೂ ರಿನ ಪ್ರಾದೇಶಿಕ ಕಚೇರಿಗೆ ಕಳುಹಿಸುತ್ತಾರೆ. ಒಂದು ವೇಳೆ ಮೂಲ ದಾಖಲೆಗಳು ಸರಿ ಇಲ್ಲದಿದ್ದರೆ, ಸರಿಪಡಿಸಿಕೊಂಡು ಮರು ದಿನವೇ ಬರುವಂತೆ ತಿಳಿಸಲಾಗುತ್ತದೆ. ಯಾವುದೇ ಕಾಗದ ಬಳಸದೆ ಅನ್‍ಲೈನ್ ಮೂಲಕವೇ ಈ ಎಲ್ಲಾ ಪ್ರಕ್ರಿಯೆಗಳು ಸುಗಮ ಹಾಗೂ ತ್ವರಿತವಾಗಿ ನಡೆಯುತ್ತಿವೆ. ಬೆಂಗಳೂರಿನ ಪ್ರಾದೇಶಿಕ ಕಚೇರಿಗೆ ಕಳುಹಿಸಿದ ನಂತರ ಅರ್ಜಿದಾರರ ಮನೆಯು ಯಾವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆಯೋ ಆ ಠಾಣೆಗೆ ಅರ್ಜಿದಾರರ ಕುರಿತಾಗಿ ಪೊಲೀಸ್ ಪರಿಶೀಲನೆ ನಡೆಸುವಂತೆ ಸಂದೇಶ ರವಾನೆಯಾಗುತ್ತದೆ. ಅರ್ಜಿದಾರರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಾಗದೇ ಇದ್ದರೆ ಕೆಲವೇ ದಿನಗಳಲ್ಲಿ ಪಾಸ್‍ಪೋರ್ಟ್ ಅವರ ಕೈ ಸೇರಲಿದೆ.

Translate »