ಕೊಡಗಲ್ಲಿ ಮುಂದುವರೆದ ಭಾರೀ ಗಾಳಿ ಮಳೆ
ಕೊಡಗು

ಕೊಡಗಲ್ಲಿ ಮುಂದುವರೆದ ಭಾರೀ ಗಾಳಿ ಮಳೆ

July 15, 2022

ಮಡಿಕೇರಿ,ಜು.14-ಕಳೆದ 24 ಗಂಟೆ ಗಳಿಂದ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಕೊಡಗು ಜಿಲ್ಲೆ ತತ್ತರಿಸಿದ್ದು, ಸಾಲು ಸಾಲು ಮರಗಳು ಮತ್ತು ವಿದ್ಯುತ್ ಕಂಬ ಗಳು ಧರೆಗುರುಳಿವೆ. ವಿದ್ಯುತ್ ಟ್ರಾನ್ಸ್ ಫಾರ್ಮರ್‍ಗಳಿಗೂ ಹಾನಿಯಾಗಿದ್ದು, ಜಿಲ್ಲೆಯ ಬಹುತೇಕ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶುಕ್ರವಾರ ಬೆಳಗಿನಿಂದ `ಆರೆಂಜ್ ಅಲರ್ಟ್’ ಘೋಷಿಸÀಲಾಗಿದೆ. ಈ ಅವಧಿಯಲ್ಲಿ 155.6 ಮಿಮೀನಿಂದ 204.4 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಸುರಿಯುತ್ತಿರುವ ಮಳೆಯ ನಡುವೆಯೇ ಕಂಬಗಳನ್ನು ಬದಲಿಸಿ ವಿದ್ಯುತ್ ಪೂರೈಕೆ ಮರು ಸ್ಥಾಪಿಸಲು ಸೆಸ್ಕ್ ಮುಂದಾಗಿದೆ. ಆದರೆ ಭಾರೀ ಮಳೆ ಸುರಿಯುತ್ತಿರುವ ಕಾರಣ ನಿರಂತರ ವಿದ್ಯುತ್ ಪೂರೈಕೆ ಅಸಾಧ್ಯವಾಗಿ ಪರಿಣಮಿಸಿದೆ. ಮುಖ್ಯ ರಸ್ತೆಗಳಿಗೆ ಬೃಹತ್ ಮರಗಳು ಬಿದ್ದಿದ್ದು ಅರಣ್ಯ ಇಲಾಖೆ, ಸೆಸ್ಕ್, ಎನ್‍ಡಿಆರ್‍ಎಫ್, ಗ್ರಾಪಂ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜಿಲ್ಲೆಯ ಬಹುತೇಕ ಎಲ್ಲಾ ರಸ್ತೆಗಳಲ್ಲೂ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿಯಲ್ಲಿ ಕಳೆದ 24 ಗಂಟೆಯಲ್ಲಿ ದಾಖಲೆಯ 284 ಮಿ.ಮೀ ಮಳೆಯಾಗಿದ್ದರೆ, ಭಾಗಮಂಡಲ ವ್ಯಾಪ್ತಿಯಲ್ಲಿ 195.2 ಹಾಗೂ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ವ್ಯಾಪ್ತಿಯಲ್ಲಿ 100 ಮೀ.ಮೀ ಮಳೆ ದಾಖಲಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ಪ್ರವಾಹ ಕಂಡು ಬಂದಿದೆ. ಲಕ್ಷ್ಮಣ ತೀರ್ಥ ನದಿಯಲ್ಲಿ ಪ್ರವಾಹ ಉಕ್ಕೇರಿದ್ದು, ಬಾಳಲೆ, ನಿಟೂರು, ನಾಲ್ಕೇರಿ, ಕುಟ್ಟ ಹನಗೋಡು ಕಡೆಗಳಲ್ಲಿ ಪ್ರವಾಹ ಎದುರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಭತ್ತದ ಗದ್ದೆಗಳು ಸಮುದ್ರದಂತಾಗಿದೆ. ಸೋಮವಾರಪೇಟೆ ಮತ್ತು ದಕ್ಷಿಣ ಕೊಡಗಿನ ವಿವಿಧ ಕಡೆಗಳಲ್ಲಿ ಅಂಗನವಾಡಿ ಮತ್ತು ಶಾಲಾ ಕಾಲೇಜುಗಳಿಗೆ ಆಡಳಿತ ಮಂಡಳಿಗಳು ರಜೆ ನೀಡಿರುವ ಕುರಿತು ವರದಿಯಾಗಿದೆ.

ಮಡಿಕೇರಿ-ಚೆಟ್ಟಳ್ಳಿ ರಸ್ತೆಯಲ್ಲಿ ಭೂ ಕುಸಿತವಾಗಿದ್ದು, ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಅರಣ್ಯ ಇಲಾಖೆ ಮರ ತೆರವು ಮಾಡಿದ್ದು, ಸ್ಥಳೀಯ ಆಡಳಿತ ಮಣ್ಣನ್ನು ತೆರವುಗೊಳಿಸಿದೆ. ಗಾಳಿಬೀಡು ರಸ್ತೆ ಜಂಕ್ಷನ್ ಬಳಿ ಬೃಹತ್ ಗಾತ್ರದ ಮರಗಳು ಬಿದ್ದಿವೆ. ಮಡಿಕೇರಿ- ಸೋಮವಾರಪೇಟೆ ರಸ್ತೆ ಹಾಗೂ ಶನಿವಾರಸಂತೆ ವ್ಯಾಪ್ತಿ, ಭಾಗಮಂಡಲ, ತಲಕಾವೇರಿ ರಸ್ತೆಯಲ್ಲೂ ಮರಗಳು ಧರೆಗುರುಳಿವೆ. ಮರಗಳು ಬಿದ್ದು ಹಲವು ಮನೆಗಳಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ.
ಗಾಳಿಬೀಡು ಗ್ರಾಮ, ಮಡಿಕೇರಿಯ ಗದ್ದಿಗೆ, ಕನ್ನಂಡಬಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಪೆರಾಜೆ ಗ್ರಾಮದ ಕುಂದಲ್ಪಾಡಿ ಪ್ರದೇಶದಲ್ಲಿ ಬರೆ ಕುಸಿದು ಟ್ರಾನ್ಸ್‍ಫಾರ್ಮರ್ ಮುರಿದು ಬಿದ್ದಿದ್ದು, ಬೇರೆ ಮಾರ್ಗದ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಭಾಗಮಂಡಲ-ಅಯ್ಯಂಗೇರಿ ರಸ್ತೆಯಲ್ಲಿ ಮತ್ತೆ ಪ್ರವಾಹ ನೀರು ಹರಿಯುತ್ತಿದೆ. ಈ ರಸ್ತೆಯ ಮೇಲೆ ಅಡಿ ಅಡಿಗೂ ಹೆಚ್ಚು ಕಾವೇರಿ ನದಿ ಪ್ರವಾಹ ನೀರು ಹರಿಯುತ್ತಿದ್ದು ವಾಹನ ಸಂಚಾರ ಬಂದ್ ಮಾಡಲಾಗಿದೆ. ಸಾರ್ವಜನಿಕರ ಸಂಚಾರಕ್ಕಾಗಿ ಬೋಟ್‍ಗಳನ್ನು ಬಳಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ರಸ್ತೆಯ ಮೇಲೆ 1 ಅಡಿ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗಿಲ್ಲ. ಸ್ಥಳದಲ್ಲಿ ಗೃಹ ರಕ್ಷಕ ದಳದ ನುರಿತ ಈಜುಗಾರರನ್ನು ನಿಯೋಜಿಸಲಾಗಿದೆ. ಕಾವೇರಿ ಸೇರಿದಂತೆ ಜಿಲ್ಲೆಯ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದ್ದು, ನದಿ ತೀರ ಹಾಗೂ ಬೆಟ್ಟ ಗುಡ್ಡಗಳ ವ್ಯಾಪ್ತಿಯ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಈಗಾಗಲೇ ಸೂಚಿಸಲಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರೀ ಮಳೆಗೆ 1 ಮನೆಗೆ ಬಹುತೇಕ ಹಾನಿಯಾಗಿ ದ್ದರೆ, 15 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ವಿಕೋಪ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳಿಂದ ಕಳೆದ 24 ಗಂಟೆಗಳ ಅವಧಿಯಲ್ಲಿ 20 ಕುಟುಂಬಗಳ 95 ಮಂದಿಯನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಡಿಕೇರಿ ರೆಡ್ ಕ್ರಾಸ್ ಕಟ್ಟಡದಲ್ಲಿ 5 ಕುಟುಂಬಗಳ 17 ಮಂದಿ ಆಶ್ರಯ ಪಡೆದಿದ್ದಾರೆ. ವಿರಾಜಪೇಟೆಯ ತೋಮರ ಸರಕಾರಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರದಲ್ಲಿ 15 ಕುಟುಂಬಗಳ 36 ಮಂದಿ, ಸಂತ ಅಣ್ಣಮ್ಮ ಶಾಲೆಯಲ್ಲಿ 10 ಕುಟುಂಬಗಳ 35 ಮಂದಿ ಆಶ್ರಯ ಪಡೆದಿದ್ದಾರೆ. ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಪೊನ್ನತ್‍ಮೊಟ್ಟೆ ಸರಕಾರಿ ಶಾಲೆಯಲ್ಲಿ 7 ಕುಟುಂಬಗಳ 29 ಮಂದಿ ಆಶ್ರಯ ಪಡೆದಿದ್ದಾರೆ. ಗಾಳಿಗೆ ಮುರಿದು ಬಿದ್ದ ಮರಗಳಿಂದ 36 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಚೆಸ್ಕಾಂಗೆ 1.30 ಲಕ್ಷ ರೂ. ಹಾನಿಯಾಗಿದೆ ಎಂದು ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ.

Translate »