ಕೆಆರ್‍ಎಸ್‍ನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ
ಮಂಡ್ಯ

ಕೆಆರ್‍ಎಸ್‍ನಿಂದ 85 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

July 15, 2022

ಶ್ರೀರಂಗಪಟ್ಟಣ, ಜು.14- ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶ ದಲ್ಲಿ ವ್ಯಾಪಕ ಮಳೆಯಾಗುತ್ತಿರುವುದ ರಿಂದ ಕೆಆರ್‍ಎಸ್ ಜಲಾಶಯಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 85 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ, ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ತಾಲೂಕಿನ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ಪ್ರವಾಸಿ ತಾಣ ಗಳು ಜಲಾವೃತವಾಗಿರುವುದರಿಂದ ಪ್ರವಾಹದ ಭೀತಿ ಉಂಟಾಗಿದೆ. ಪ್ರವಾಸಿ ಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನದಿ ದಂಡೆಗಳಿಗೆ ಭೇಟಿ ನೀಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮುಂದಿನ ಆದೇಶದವರೆಗೆ ಎಲ್ಲಾ ಪ್ರವಾಸಿ ತಾಣಗಳಿಗೆ ಸಾರ್ವ ಜನಿಕರ ಪ್ರವೇಶವನ್ನು ನಿರ್ಬಂಧಿಸಿ ತಹ ಸೀಲ್ದಾರ್ ಶ್ವೇತಾ ಆದೇಶ ಹೊರಡಿಸಿದ್ದಾರೆ.

ವೆಲ್ಲೆಸ್ಲಿ ಸೇತುವೆ ಬಂದ್: ಜಲಾಶಯ ದಿಂದ ನದಿಗೆ ಯಾವುದೇ ಸಂದರ್ಭ ದಲ್ಲಿಯೂ 1.5 ಲಕ್ಷ ಕ್ಯೂಸೆಕ್‍ಗೂ ಹೆಚ್ಚು ನೀರು ಬಿಡುಗಡೆ ಮಾಡುವ ಸಾಧ್ಯತೆ ಇರುವುದರಿಂದ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯಲ್ಲಿ ಜನರ ಓಡಾಟವನ್ನು ನಿರ್ಬಂಧಿಸಲಾಗಿದ್ದು, ಸೇತುವೆಯ ಒಂದು ತುದಿಯನ್ನು ಕಾಂಕ್ರೀಟ್ ಗೋಡೆಯಿಂದ ಮತ್ತೊಂದು ತುದಿಯನ್ನು ಬ್ಯಾರಿಕೇಡ್‍ಗಳ ಮೂಲಕ ಬಂದ್ ಮಾಡಲಾಗಿದೆ.

ಒಳಹರಿವು ಹೆಚ್ಚಳ: ಕೆಆರ್‍ಎಸ್ ಜಲಾಶಯಕ್ಕೆ ಗುರುವಾರ ಸಂಜೆ 71,203 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಸುರಕ್ಷತಾ ದೃಷ್ಟಿಯಿಂದ 85,859 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 123.49 ಅಡಿ ನೀರು ಸಂಗ್ರಹವಾಗಿದೆ.

Translate »