ಮಹಾರಾಣಿ ಕಾಮರ್ಸ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ
ಮೈಸೂರು

ಮಹಾರಾಣಿ ಕಾಮರ್ಸ್ ಕಾಲೇಜಿನಲ್ಲಿ ಮತ ಎಣಿಕೆಗೆ ಸಿದ್ಧತೆ

April 13, 2023

ಮೈಸೂರು, ಏ.12(ಆರ್‍ಕೆ)-ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಮೈಸೂರು ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಮೈಸೂ ರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಸರ್ಕಾರಿ ಮಹಿಳಾ ಕಾಮರ್ಸ್ ಅಂಡ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಮೇ 13ರಂದು ನಡೆಯಲಿದೆ.

ಮತ ಎಣಿಕಾ ಕೇಂದ್ರದಲ್ಲಿ ವಿಧಾನಸಭಾ ಕ್ಷೇತ್ರವಾರು ಸ್ಟ್ರಾಂಗ್ ರೂಂಗಳನ್ನು ಸಿದ್ಧಪಡಿಸಲಾಗಿದ್ದು, ಇವಿಎಂ ಮತ್ತು ವಿವಿ ಪ್ಯಾಟ್ ಇರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಟ್ರಾಂಗ್ ರೂಂ ಕಿಟಕಿಗಳಿಗೆ ಪ್ಲೈವುಡ್ ಶೀಟ್‍ಗಳನ್ನು ಅಳವಡಿಸಿ ಬಂದ್ ಮಾಡಲಾಗಿದ್ದು, ಮತಯಂತ್ರಗಳ ನಂಬರ್ ಅನ್ನು ಮಾರ್ಕ್ ಮಾಡಿ ಸ್ಥಳ ಮೀಸಲಿರಿಸಲಾಗಿದೆ. ಆಯಾ ಚುನಾವಣಾಧಿಕಾರಿಗಳು ತರುವ ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣೆ ಮುಗಿದ ಬಳಿಕ ಮತ ಎಣಿಕಾ ಕೇಂದ್ರದ ಸ್ಟ್ರಾಂಗ್ ರೂಂಗಳಲ್ಲಿ ಭದ್ರಪಡಿಸಲು ಸಿದ್ಧತೆ ಮಾಡಲಾಗಿದ್ದು, ಈ ಪ್ರಕ್ರಿಯೆಯನ್ನು ವಿಡಿಯೋ ಸರ್ವೆಲನ್ಸ್ ಟೀಂ ಸಿಬ್ಬಂದಿ ರೆಕಾರ್ಡ್ ಮಾಡುವರು. ಮೇ 13ರಂದು ಬೆಳಗ್ಗೆ 8 ಗಂಟೆಗೆ ಚುನಾವಣಾ ವೀಕ್ಷಕರು, ಅಭ್ಯರ್ಥಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆದು ಮತಯಂತ್ರಗಳನ್ನು ಮತ ಎಣಿಕೆ ಹಾಲ್‍ಗೆ ಪೂರೈಸಲಾಗುವುದು.

ಸ್ಟ್ರಾಂಗ್ ರೂಂ, ಮತ ಎಣಿಕೆ ಸ್ಥಳ, ಮೀಡಿಯಾ ಸೆಂಟರ್, ಕಂಪ್ಯೂಟರ್ ರೂಂ ಸೇರಿದಂತೆ ಕೇಂದ್ರದ ಒಳ ಹಾಗೂ ಹೊರ ಆವರಣಗಳಲ್ಲಿ ಹೆಚ್ಚುವರಿ ಸಿಸಿ ಕ್ಯಾಮರಾ ಗಳನ್ನು ಅಳವಡಿಸಲಾಗಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ನಿಯೋಜಿಸಿ ಶಾಂತಿಯುತ ಮತ ಎಣಿಕೆಗೆ ಸರ್ವ ರೀತಿಯಲ್ಲಿ ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. ಅದೇ ರೀತಿ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಅಧೀನದಲ್ಲಿ ಒಂದೊಂದು ಸ್ಟ್ರಾಂಗ್ ರೂಂಗಳನ್ನು ಸಿದ್ಧಪಡಿಸಲಾಗಿದ್ದು, ಅಲ್ಲಿಂದಲೇ ಮೇ 9ರಂದು ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮೇ 10ರಂದು ರಾತ್ರಿ ಮತಗಟ್ಟೆಗಳಿಂದ ಪೊಲೀಸ್ ಭದ್ರತೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಆಯಾ ಸ್ಟ್ರಾಂಗ್ ರೂಂಗಳಿಗೆ ತಂದು ದಾಖಲು ಮಾಡಿದ ಬಳಿಕ ಅದೇ ದಿನ ತಡರಾತ್ರಿ ಮಹಾರಾಣಿ ಕಾಮರ್ಸ್ ಕಾಲೇಜಿನ ಮತ ಎಣಿಕೆ ಕೇಂದ್ರದ ಸ್ಟ್ರಾಂಗ್ ರೂಂಗೆ ತಂದು ಭದ್ರಪಡಿಸಿ ಜಿಲ್ಲಾ ಚುನಾವಣಾಧಿಕಾರಿ ಸುಪರ್ದಿಗೆ ಒಪ್ಪಿಸಲಾಗುವುದು.

Translate »