ಚಾಮುಂಡಿಬೆಟ್ಟಕ್ಕೆ ಬೆಂಕಿ: 50ರಿಂದ 60 ಎಕರೆ ಸಸ್ಯ, ಪ್ರಾಣಿ-ಪಕ್ಷಿ ನಾಶ
ಮೈಸೂರು

ಚಾಮುಂಡಿಬೆಟ್ಟಕ್ಕೆ ಬೆಂಕಿ: 50ರಿಂದ 60 ಎಕರೆ ಸಸ್ಯ, ಪ್ರಾಣಿ-ಪಕ್ಷಿ ನಾಶ

April 13, 2023

ಮೈಸೂರು,ಏ.12(ಎಸ್‍ಬಿಡಿ)-ಕಿಡಿಗೇಡಿಗಳಿಂದ ಚಾಮುಂಡಿಬೆಟ್ಟಕ್ಕೆ ಬೆಂಕಿ ಹೊತ್ತಿ, ಹತ್ತಾರು ಎಕರೆ ಅರಣ್ಯ ಪ್ರದೇಶದ ಗಿಡ-ಮರಗಳು ಸುಟ್ಟು ಹೋಗಿವೆ.
ಚಾಮುಂಡಿಬೆಟ್ಟದ ಪಾದ, ಮೆಟ್ಟಿಲು ಮಾರ್ಗದ ಬಲಭಾಗದಲ್ಲಿ ಗುರುವಾರ ಸಂಜೆ ಬೆಂಕಿ ಕಾಣಿಸಿ ಕೊಂಡಿದೆ. ಕೂಡಲೇ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಕೆಲ ಹೊತ್ತಿನಲ್ಲೇ ಬೆಂಕಿ ಕೆನ್ನಾಲಿಗೆ ಆವರಿಸಿದೆ. ಧಗ.. ಧಗ… ಉರಿ ಯುತ್ತಿದ್ದ ಬೆಂಕಿಗೆ ಸಾವಿರಾರು ಗಿಡಮರಗಳು ಅಗ್ನಿಗೆ ಆಹುತಿಯಾಗಿವೆ. ಬೆಂಕಿ ಜ್ವಾಲೆ ಹಾಗೂ ದಟ್ಟ ಹೊಗೆಯಿಂದಾಗಿ ಆ ಭಾಗದಲ್ಲಿದ್ದ ಸಣ್ಣ ಪುಟ್ಟ ಪ್ರಾಣಿ-ಪಕ್ಷಿಗಳು ಬಲಿಯಾಗಿವೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ಆರಂಭಿ ಸಿದರು. ಕಡಿದಾದ ಜಾಗದಲ್ಲಿ ಬೆಂಕಿ ವ್ಯಾಪಿಸಿದ್ದ ರಿಂದ ಕಾರ್ಯಾಚರಣೆ ನಡೆಸುವುದು ಸವಾಲಾ ಗಿತ್ತು. ಹತ್ತಿರ ಹೋಗುವುದಕ್ಕೂ ಅವಕಾಶವಿರದ ಕಾರಣ ಅವರು ಹರಸಾಹಸಪಟ್ಟರು. 4 ಫೈರ್ ಎಂಜಿನ್‍ಗಳ ಮೂಲಕ ಬೇರೆ ಬೇರೆ ಸ್ಥಳದಿಂದ ನೀರು ಹಾಕಿ, ಕೆನ್ನಾಲಿಗೆ ಮತ್ತಷ್ಟು ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಿದರು. ಮುಖ್ಯ ಅಗ್ನಿಶಾಮಕ ಅಧಿಕಾರಿ ಜಯರಾಮು, ಪ್ರಭಾರ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ.ಪಿ.ನವೀನ್ ಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು, ಅಗ್ನಿಶಾಮಕ ಠಾಣಾಧಿಕಾರಿ ನಾಗರಾಜೇ ಅರಸ್ ಸೇರಿದಂತೆ 25ಕ್ಕೂ ಹೆಚ್ಚು ಸಿಬ್ಬಂದಿ ಮೂರ್ನಾಲ್ಕು ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ, ಬೆಂಕಿಯನ್ನು ತಹಬದಿಗೆ ತಂದರು. ರಾತ್ರಿ 10 ಗಂಟೆ ವೇಳೆಗೆ ಬೆಂಕಿ ನಂದಿಸಿದರಾದರೂ ಮುಂಜಾಗ್ರತಾ ಕ್ರಮವಾಗಿ ಒಂದು ಫೈರ್ ಎಂಜಿನ್ ವಾಹನ ಹಾಗೂ ಸಿಬ್ಬಂದಿ, ಕೆಲ ಗಂಟೆಗಳ ಕಾಲ ಸ್ಥಳದಲ್ಲೇ ಇದ್ದು
ನಿಗಾ ವಹಿಸಿದ್ದರು. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾ ಚರಣೆಗೆ ಸಹಕರಿಸಿದರು. ಸಂಜೆ ಸುಮಾರು 5.45ರ ವೇಳೆಗೆ ಮೆಟ್ಟಿಲು ಮಾರ್ಗದ ಬಲಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತು. ಯಾರೋ ಒಣಗಿದ ಎಲೆಗಳನ್ನು ಸುಡುತ್ತಿರ ಬಹುದೆಂದು ಭಾವಿಸಿದೆವು. ಆದರೆ ಕೆಲಹೊತ್ತಿನಲ್ಲೇ ಬೆಂಕಿ ಹೆಚ್ಚು ವ್ಯಾಪಿಸಿದ್ದರಿಂದ ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದೆವು. ಕರೆ ಮಾಡಿ 10-15 ನಿಮಿಷದಲ್ಲೇ ಸ್ಥಳಕ್ಕೆ ಧಾವಿಸಿದ ಅವರು, ನಾಲ್ಕು ವಾಹನಗಳೊಂದಿಗೆ ಕಾರ್ಯಾಚರಣೆ ಆರಂಭಿಸಿ ದರು. ಯಾರೂ ಹೋಗಲಾಗದ ಸ್ಥಳವಾಗಿದ್ದರೂ ನಿರಂತರ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿದರು. ಪೊಲೀಸರೂ ತುಂಬಾ ಸಹಕಾರ ನೀಡಿದರು. ತ್ವರಿತ ಕ್ರಮ ಕೈಗೊಳ್ಳದಿದ್ದರೆ ಖಂಡಿತ ಬೆಟ್ಟದ ಭಾಗಾರ್ಧಕ್ಕೆ ಬೆಂಕಿ ಆವರಿಸಿ, ಅನಾಹುತವಾಗುತ್ತಿತ್ತು ಎಂದು ಬೆಟ್ಟದ ಪಾದದ ನಿವಾಸಿ ಸವಿತಾ ಘಾಟ್ಕೆ ತಿಳಿಸಿದರು.

ಕಿಡಿಗೇಡಿಗಳ ದುಷ್ಕøತ್ಯ: ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಹೆಚ್ಚು ಸಂಭವಿಸುತ್ತವೆ. ಒಂದೆಡೆ ಆಕಸ್ಮಿಕವಾಗಿ ನಡೆದರೆ ಮತ್ತೊಂದೆಡೆ ಕಿಡಿಗೇಡಿಗಳು ಕಿಡಿ ಹೊತ್ತಿಸುತ್ತಾರೆ. ಬೆಂಕಿಯಿಟ್ಟು ಮಜಾ ತೆಗೆದುಕೊಳ್ಳುವ ಇಂತಹ ವಿಚಿತ್ರ ವ್ಯಕ್ತಿಗಳಿಂದ ಹಚ್ಚಸಿರು ನಾಶವಾಗುವುದರ ಜೊತೆಗೆ ಅನೇಕ ಪ್ರಾಣಿ-ಪಕ್ಷಿಗಳು ಬಲಿಯಾಗುತ್ತವೆ. ಒಣ ಹುಲ್ಲು ಅಥವಾ ಎಲೆಗಳ ರಾಶಿಗೆ ಬೆಂಕಿ ಇಡುವುದು, ಬೀಡಿ-ಸಿಗರೇಟು ಸೇದಿ, ಬೆಂಕಿ ನಂದಿಸದೆ ಎಲ್ಲೆಂದರಲ್ಲಿ ಬಿಸಾಡುವುದು ಕೆಲವರಿಗೆ ಖಯ್ಯಾಲಿಯಾಗಿದೆ. ಇಂದು ಚಾಮುಂಡಿಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿರುವುದೂ ಇದೇ ಕಾರಣದಿಂದ. ಹೀಗೆ ಕೇಡು ಮಾಡುವುದರಿಂದ ಏನನ್ನೂ ಸಾಧಿಸಲಾಗದು. ಒಂದಲ್ಲ ಒಂದು ದಿನ ಅದು ತಿರುಗುಬಾಣವಾಗುತ್ತದೆ. ಯಾರೂ ಈ ರೀತಿ ಪೃಕೃತಿ ಒಡಲಿಗೆ ಬೆಂಕಿ ಹಚ್ಚುವ ದುಷ್ಕøತ್ಯವೆಸಗಬಾರದು.

Translate »