ಕಾನೂನು ತಜ್ಞ  ಸಿಕೆಎನ್ ರಾಜಾ ಇನ್ನಿಲ್ಲ
ಮೈಸೂರು

ಕಾನೂನು ತಜ್ಞ ಸಿಕೆಎನ್ ರಾಜಾ ಇನ್ನಿಲ್ಲ

April 13, 2023

ಮೈಸೂರು, ಏ.12- ಕಾನೂನು ತಜ್ಞ ಡಾ.ಸಿ.ಕೆ.ಎನ್.ರಾಜಾ(91) ಅವರು ವಯೋ ಸಹಜ ಅನಾರೋಗ್ಯದಿಂದ ಬುಧವಾರ ಜೆಎಸ್‍ಎಸ್ ಆಸ್ಪತ್ರೆಯಲ್ಲಿ ನಿಧನರಾದರು.

ಮೂಲತಃ ನಂಜನಗೂಡಿನವರಾದ ಇವರು ಮೈಸೂರಿನ ಲಕ್ಷ್ಮೀಪುರಂನಲ್ಲಿ ನೆಲೆಸಿದ್ದರು. ಪತ್ನಿ ಶ್ರೀಮತಿ ಮೀನಾಕ್ಷಿ ರಾಜಾ, ಪುತ್ರ ಆರ್.ಶ್ರೀಕಂಠಪ್ರಸಾದ್, ಸೊಸೆಯಂದಿರಾದ ಡಾ.ಗಾಯತ್ರಿ ಪ್ರಸಾದ್, ಸಂಧ್ಯಾ, ಮೊಮ್ಮಕ್ಕಳಾದ ಆದಿತ್ಯ, ಅವಿನಾಶ್ ಸೇರಿದಂತೆ ಅಪಾರ ಬಂಧು-ಬಳಗ, ಸ್ನೇಹಿ ತರು, ಶಿಷ್ಯರನ್ನು
ಅಗಲಿದ್ದಾರೆ. ರಾಜಾ ಅವರ ಮತ್ತೋರ್ವ ಪುತ್ರ, ಮಕ್ಕಳ ತಜ್ಞ ಡಾ.ಆರ್.ಕೇಶವ್ ಅವರು ನಿಧನರಾಗಿದ್ದಾರೆ. ಚಾಮುಂಡಿಬೆಟ್ಟ ತಪ್ಪಲಿನ ಸ್ಮಶಾನದಲ್ಲಿ ಡಾ. ಸಿ.ಕೆ.ಎನ್.ರಾಜಾ ಅವರ ಅಂತ್ಯ ಸಂಸ್ಕಾರವನ್ನು ಇಂದು ಸಂಜೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಂದೆ ಸಿ.ಕೆ.ನಾಗಪ್ಪ ಹಾಗೂ ತಾತ ಅವರೂ ವಕೀಲರಾಗಿದ್ದರಿಂದ ಡಾ.ಸಿ.ಕೆ.ಎನ್.ರಾಜಾ ಅವರಿಗೆ ಬಾಲ್ಯದಿಂದಲೂ ಕಾನೂನು ವಿಷಯದಲ್ಲಿ ಆಸಕ್ತಿ ಇತ್ತು. ಕಾನೂನು ವಿಷಯದಲ್ಲಿ ಪಿಹೆಚ್.ಡಿ ಪಡೆದ ದಕ್ಷಿಣ ಭಾರತದ ಮೊದಲಿಗರು ಎಂಬ ಕೀರ್ತಿಗೆ ಪಾತ್ರರಾಗಿದ್ದ ರಾಜಾ ಅವರು, ಸಾಂವಿಧಾನಿಕ ಕಾನೂನು ಮತ್ತು ಅಂತರರಾಷ್ಟ್ರೀಯ ಕಾನೂನು ಪರಿಣಿತರಾಗಿದ್ದರು. 1953ರಿಂದ 58 ರವರೆಗೆ ವಕೀಲರಾಗಿ ಅಭ್ಯಾಸ ಮಾಡಿ, ಸುದೀರ್ಘ 60 ವರ್ಷಗಳ ಕಾಲ ಬೋಧಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು.

ಶಾರದಾವಿಲಾಸ ಕಾನೂನು ಕಾಲೇಜು, ಧಾರವಾಡ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ಮೈಸೂರು ವಿವಿ ಕಾನೂನು ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಡೀನ್, ಫ್ಯಾಕಲ್ಟಿಯಾಗಿ, ಸಿಂಡಿಕೇಟ್, ಸೆನೆಟ್ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ನಿವೃತ್ತಿ ನಂತರವೂ ಎಸ್‍ಬಿಆರ್‍ಆರ್ ಮಹಾಜನ ಕಾನೂನು ಕಾಲೇಜು ಹಾಗೂ ಜೆಎಸ್‍ಎಸ್ ಕಾನೂನು ಕಾಲೇಜಿನಲ್ಲೂ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು. ಇಳಿವಯಸ್ಸಿನವರೆಗೂ ಕಾನೂನು ಬೋಧಿಸುತ್ತಿದ್ದ ಅವರು 2 ವರ್ಷಗಳಿಂದೀಚೆಗಷ್ಟೇ ವಿಶ್ರಾಂತ ಜೀವನದಲ್ಲಿದ್ದರು.

ಅಲ್ಲದೆ ಭಾರತೀಯ ಕಾನೂನು ಸಂಸ್ಥೆ, ಭಾರತೀಯ ಸಾರ್ವಜನಿಕ ಆಡಳಿತ ಸಂಸ್ಥೆ, ಇಂಡಿಯನ್ ಸೊಸೈಟಿ ಆಫ್ ಕ್ರಿಮಿನಾಲಜಿ, ಅಖಿಲ ಭಾರತ ಕಾನೂನು ಉಪನ್ಯಾಸಕರ ಸಂಘದ ಸದಸ್ಯರಾಗಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್‍ನ ನಿರ್ದೇ ಶಕರಾಗಿ ಕೆಲಸ ಮಾಡಿದ್ದರು. ಎನ್‍ಐಇ ವಿದ್ಯಾಸಂಸ್ಥೆ ನಿರ್ದೇಶಕರಾಗಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಮೈಸೂರಿನ ಅನಾಥಾಲಯ ಆಡಳಿತ ಮಂಡಳಿ, ಎಲ್‍ಐಸಿಯ ಪಾಲಿಸಿ-ಹೋಲ್ಡರ್ಸ್ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಾ ಅವರು ಕಾನೂನಿಗೆ ಸಂಬಂಧಿಸಿದ 25 ಪುಸ್ತಕಗಳು, ಪ್ರಮುಖ ನಿಯತಕಾಲಿಕೆಗಳಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು, 2 ಕಾದಂಬರಿ ಗಳನ್ನು ಹೊರತಂದಿದ್ದರು. ಅಲ್ಲದೆ ಸುಧಾ, ಮಯೂರ, ಕಸ್ತೂರಿ ಮ್ಯಾಗ್ಸಿನ್‍ಗಳಲ್ಲಿ ಕನ್ನಡದ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು. ಇವರ ವಿಡಂಬನಾತ್ಮಕ ಲೇಖನಗಳ ಸಂಕಲನ `ಯಾರ್ರೀ ಅರ್ಜೆಂಟ್ ಬೆಂಗ್ಳೂರ್’ ಪುಸ್ತಕ ಪ್ರಸಿದ್ಧಿ ಪಡೆದಿದೆ.

Translate »