ಭೂಮಿ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಅದರೊಂದಿಗಿನ ನಮ್ಮ ಸಂಬAಧ ಗಟ್ಟಿಗೊಳ್ಳುವುದು ಅಗತ್ಯ
ಮೈಸೂರು

ಭೂಮಿ ಯೋಗಕ್ಷೇಮ ಕಾಪಾಡುವ ನಿಟ್ಟಿನಲ್ಲಿ ಅದರೊಂದಿಗಿನ ನಮ್ಮ ಸಂಬAಧ ಗಟ್ಟಿಗೊಳ್ಳುವುದು ಅಗತ್ಯ

June 6, 2022

ಮೈಸೂರು,ಜೂ.೫(ಪಿಎಂ)- ಭೂಮಿಯ ಆರೋಗ್ಯ ಮತ್ತು ಯೋಗಕ್ಷೇಮ ಕಾಪಾಡಬೇಕು. ಈ ನಿಟ್ಟಿನಲ್ಲಿ ಭೂಮಿಯೊಂದಿಗೆ ನಮ್ಮ ಸಂಬAಧ ಗಟ್ಟಿಗೊಳ್ಳುವುದು ಅತ್ಯಗತ್ಯ ಎಂದು ಸಾವಯವ ಕೃಷಿಕರೂ ಆದ ಪರಿಸರ ತಜ್ಞೆ ಜೂಲಿ ಕಾರ್ಯಪ್ಪ ಅಭಿಪ್ರಾಯಪಟ್ಟರು.

ಮೈಸೂರು ರಂಗಾಯಣ ಆವರಣದ ಕುಟೀರದ ಅಂಗಳದಲ್ಲಿ ಭಾನುವಾರ ರಂಗಾಯಣ ವತಿಯಿಂದ `ರಂಗ ಹೊನ್ನಾರು-೩’ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಭೂಮಿ ತಾಯಿ ಸ್ವರೂಪಿಣ . ಅಂತಹ ಭೂದೇವಿ ಯೊಂದಿಗೆ ನಮ್ಮ ಸಂಬAಧ ಗಟ್ಟಿಗೊಳ್ಳಬೇಕು. ಇಂದು ನಮ್ಮ (ಮಾನವನ) ಪ್ರವೃತ್ತಿಗಳಿಂದ ಭೂದೇವಿಯಿಂದ ದೂರ ಆಗುತ್ತಿದ್ದೇವೆ. ಭೂಮಿ ತಾಯಿಯನ್ನು ವಿಷಪೂರಿತಗೊಳಿಸಿದರೆ, ನಮ್ಮ ನಾಶ ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗೂ ಉಳಿಗಾಲ ವಿಲ್ಲ. ಭೂಮಿ ತಾಯಿ ಅನುಭವಿಸುತ್ತಿರುವ ನೋವಿನ ಪರಿಣಾಮ ನಮ್ಮ ಮೇಲೂ ಆಗುತ್ತಿದೆ. ಏರುತ್ತಿರುವ ತಾಪಮಾನ, ನೈಸರ್ಗಿಕ ವಿಕೋಪ, ಹವಾಮಾನ ಬದಲಾವಣೆಯೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ನಾವು ಹೆಚ್ಚು ಆರೋಗ್ಯಕರ ಸಂಬAಧವನ್ನು ಭೂಮಿ ಯೊಂದಿಗೆ ಹೊಂದಬೇಕು. ಭೂತಾಯಿ ನಮಗಾಗಿ ಬಹಳಷ್ಟು ಕಾಯ್ದಿರಿಸಿದ್ದಾಳೆ. ನಾವು ಎಷ್ಟೇ ವಿದ್ಯಾವಂತ ರಾಗಿದ್ದರೂ ಭೂತಾಯಿಗಿಂತ ನಮಗೆ ಹೆಚ್ಚು ತಿಳಿದಿಲ್ಲ. ಹೀಗಾಗಿ, ಪ್ರಕೃತಿಯ ಮುಂದೆ ವಿನಮ್ರವಾಗಿ ತಲೆಬಾಗ ಬೇಕು. ಅದರಿಂದ ನಾವು ಪ್ರೀತಿ, ಸಹಾನುಭೂತಿ, ಸೌಂದರ್ಯ ಪ್ರಜ್ಞೆಯನ್ನು ಕಲಿಯುತ್ತೇವೆ ಎಂದರು.
ನಾನು ಮೈಸೂರಿನ ಮಗಳು. ನಾನಿಲ್ಲಿ ೧೯೬೫ರಲ್ಲಿ ಜನಿಸಿದೆ. ಆಗ ನಮ್ಮ ತಂದೆಯವರು ಸಿಎಫ್‌ಟಿಆರ್‌ಐನಲ್ಲಿ ನಿರ್ದೇ ಶಕರಾಗಿದ್ದರು. ಅಂದು ಆ ಸಂಸ್ಥೆಯ ಆವರಣ ಇಂದಿಗಿAತ ಇನ್ನು ಹೆಚ್ಚಿನ ಹಸಿರಿನಿಂದ ಕೂಡಿತ್ತು. ಅಂತೆಯೇ ಅಂದಿನ ಮೈಸೂರು ಇಂದಿಗಿAತ ಹಸಿರುಮಯ ವಾಗಿತ್ತು ಎಂದು ತಮ್ಮ ಬಾಲ್ಯ ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ೨೦೨೦ರ ಜನವರಿಯಲ್ಲಿ ರಂಗಾಯಣಕ್ಕೆ ನಿರ್ದೇಶಕನಾಗಿ ನಾನು ಬಂದಾಗ, ಇಲ್ಲಿನ ಆವರಣದಲ್ಲಿ ಒಂದು ಸುತ್ತು ಹಾಕಿದೆ. ಆಗ ಸಹಜ ವಾಗಿಯೇ ನನ್ನಲ್ಲಿದ್ದ ಕೊಡಗಿನ ಸಸ್ಯ ಪ್ರೀತಿ ಜಾಗೃತ ಗೊಂಡಿತು. ಬಳಿಕ ಇದನ್ನು ಹಸಿರು ರಂಗಾಯಣ ಮಾಡಬೇಕೆಂದು ಅಂದೇ ನಿರ್ಧಾರ ಮಾಡಿದೆ. ಪ್ರತಿ ಬಾರಿ ಕೊಡಗಿಗೆ ಹೋದಾಗ, ಅಲ್ಲಿಂದ ಗಿಡಗಳನ್ನು ತಂದು ಇಲ್ಲಿ ನೆಡುತ್ತಿದ್ದೆ ಎಂದು ಹೇಳಿದರು.

ಗಿಡಗಳನ್ನು ನೆಡುತ್ತ ಈಗ ರಂಗಾಯಣ ಆವರಣ ಹಸಿರೀಕರಣಗೊಂಡಿದೆ. ಹಸಿರು ಮತ್ತು ಸ್ವಚ್ಛ ರಂಗಾಯಣ ನನ್ನ ಉದ್ದೇಶವಾಗಿತ್ತು. ಅದನ್ನೀಗ ಸಾಧಿಸಿ, ಇಂದು ಮೂರನೇ ರಂಗ ಹೊನ್ನಾರು ಕಾರ್ಯಕ್ರಮಕ್ಕೆ ಬಂದಿದ್ದೇವೆ ಎಂದರು.
ರಾಜ್ಯದಲ್ಲಿ ಎಷ್ಟೋ ಗಿಡಗಳನ್ನು ನೆಡಲಾಗುತ್ತದೆ. ಆದರೆ ಅವುಗಳನ್ನು ಪೋಷಣೆ ಮಾಡಿ ಬೆಳೆಸುವಲ್ಲಿ ವಿಫಲವಾಗುತ್ತಿದ್ದೇವೆ. ನಾವು ನೆಟ್ಟ ಗಿಡಗಳಲ್ಲಿ ಒಂದು ಗಿಡವೂ ಸಾಯಲ್ಲಿಲ್ಲ, ಕಾರಣ ಸಾಯಲು ನಾವು ಬಿಡಲಿಲ್ಲ. ಇಲ್ಲಿನ ಮರಗಳಿಂದ ಉದುರುವ ಎಲೆಗಳನ್ನು ಗುಡಿಸಿ ಬಿಸಾಡುವುದನ್ನು ನಿಲ್ಲಿಸಿ, ಅವುಗಳನ್ನು ಒಂದು ರಾಶಿ ಹಾಕಲು ಪ್ರಾರಂಭಿಸಿ, ಅವುಗಳನ್ನು ಮರಗಳ ಬುಡಕ್ಕೆ ಹಾಕಲು ಶುರು ಮಾಡಲಾಯಿತು. ಅದೀಗ ಸಾವಯವ ಗೊಬ್ಬರ ವಾಗಿ ಬಳಕೆಯಾಗುತ್ತಿದೆ ಎಂದು ತಿಳಿಸಿದರು.

ನಮ್ಮ ಕೊಡಗಿನಲ್ಲಿ ಗ್ರಾಮವೊಂದಕ್ಕೆ ದೇವರ ಕಾಡು ಇರುತ್ತದೆ. ಆ ಗ್ರಾಮದ ಎತ್ತರ ಪ್ರದೇಶದಲ್ಲಿ ದೇವರ ಕಾಡು ನಿರ್ಮಾಣ ಮಾಡುತ್ತೇವೆ. ದೇವರ ಕಾಡಿನಲ್ಲಿ ದೇವಸ್ಥಾನ ಗಳನ್ನು ಕಟ್ಟುತ್ತಿರಲಿಲ್ಲ. ಅಲ್ಲಿ ಒಂದು ಕಲ್ಲು ನೆಟ್ಟು ಅದನ್ನೇ ಮಹಾದೇವ ಎಂದು ಕರೆಯುತ್ತಿದ್ದರು. ಈಗ ಅಲ್ಲಿ ದೊಡ್ಡ ಕಟ್ಟಡ ಕಟ್ಟಿ ದೇವಾಲಯ ನಿರ್ಮಿಸುವ ಪ್ರವೃತ್ತಿ ಶುರುವಾಗಿದೆ. ಅಲ್ಲಿರುವ ಮರಗಳನ್ನು ಕಡಿದು ದೇವಸ್ಥಾನ ಕಟ್ಟುವುದು ಅವೈಜ್ಞಾನಿಕವಲ್ಲವೇ? ಎಂದು ಪ್ರಶ್ನಿಸಿದರು.

ಕಲಾಮಂದಿರ ಅಲಂಕಾರಕ್ಕೆ ಸೀಮಿತ: ರಂಗಾ ಯಣ ಆವರಣದಲ್ಲಿ ಗಿಡ ನೆಟ್ಟ ಸಂದರ್ಭದಲ್ಲಿ ಕಲಾಮಂದಿರ ಆವರಣದಲ್ಲೂ ೬೦೦ ಗಿಡ ನೆಡಲಾಯಿತು ಎಂದ ಅವರು, ನಾವು ಎಲ್ಲವನ್ನೂ ನೋಡಿಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರಲ್ಲದೆ, ಅಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಗಿಡಗಳು ಸಾವನ್ನಪ್ಪಿದವು. ಅಲ್ಲಿ ಕೇವಲ ಬಣ್ಣ ಹೊಡೆಯೋದು, ಅಲಂಕಾರ ಮಾಡಿಕೊಳ್ಳುವುದು ಮಾತ್ರವೇ ಆಗುತ್ತಿದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ವಿವಿಧ ಅಕಾಡೆಮಿಗಳ ಪ್ರಶಸ್ತಿ ಪುರಸ್ಕೃತ ರಾದ ರಂಗಾಯಣದ ಸಂತೋಷ್‌ಕುಮಾರ್ ಕುಸನೂರು (ನಾಟಕ ಅಕಾಡೆಮಿ), ಸರೋಜಾ ಹೆಗಡೆ (ನಾಟಕ ಅಕಾಡೆಮಿ) ಮತ್ತು ಆಲೂರು ದೊಡ್ಡನಿಂಗಪ್ಪ (ಸಾಹಿತ್ಯ ಅಕಾಡೆಮಿ) ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ ರಂಗಾಯಣ ಆವರಣದಲ್ಲಿ ಜೂಲಿ ಕಾರ್ಯಪ್ಪ ಮತ್ತು ಮತ್ತೊಬ್ಬ ಅತಿಥಿ ಪರಿಸರ ಸೇವಕ ಕೆ.ಆರ್.ಗುರುಕಾರ್ ಒಂದೊAದು ಗಿಡ ನೆಟ್ಟು ನೀರೆರೆದರು. ಅಲ್ಲದೆ, ಜೂಲಿ ಕಾರ್ಯಪ್ಪ ಬಿ.ವಿ.ಕಾರಂತ ಶಿಲ್ಪವನ ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಬಳಿಕ ಇಲ್ಲಿನ ಭೂಮಿಗೀತ ಸಭಾಂಗಣದಲ್ಲಿ ಬಹುರೂಪಿಗಳ ತಾಯಿ `ಬಹುರೂಪಿ’ ನಾಟಕೋತ್ಸವದ ೩೦ ನಿಮಿಷಗಳ ಸಾಕ್ಷö್ಯಚಿತ್ರ ಬಿಡುಗಡೆಗೊಳಿಸಿ, ಪ್ರದರ್ಶಿಸಲಾಯಿತು.

Translate »