ಸರ್ಕಾರಿ ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕನಿಗೆ 10 ವರ್ಷ ಜೈಲು
ಮೈಸೂರು

ಸರ್ಕಾರಿ ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಕಾಮುಕನಿಗೆ 10 ವರ್ಷ ಜೈಲು

April 24, 2021

ಮೈಸೂರು, ಏ.23-ಬಾಲಕರ ಬಾಲ ಮಂದಿರದಲ್ಲೇ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾಮುಕನಿಗೆ 10 ವರ್ಷ ಜೈಲು ಮತ್ತು 11 ಸಾವಿರ ರೂ. ದಂಡ ವಿಧಿಸಿ ಮೈಸೂರಿನ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾ ಧೀಶರಾದ ಶ್ರೀಮತಿ ಬಿ.ಎಸ್.ಜಯಶ್ರೀಯವರು ತೀರ್ಪು ನೀಡಿದ್ದಾರೆ.

ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರ ದಲ್ಲಿ ಆಶ್ರಯ ಪಡೆದಿದ್ದ ದರ್ಶನ್ (19) ಎಂಬಾತನೇ ಅಲ್ಲಿನ ಮೂವರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಶಿಕ್ಷೆಗೆ ಗುರಿಯಾದ ಕಾಮುಕ. ಈತ 2019ರ ಮೇ 23ರಂದು ರಾತ್ರಿ ಬಾಲಕರ ಬಾಲಮಂದಿರದಲ್ಲಿ ಆಶ್ರಯ ಪಡೆದಿದ್ದ 10, 11 ಮತ್ತು 14 ವರ್ಷದ ಮೂವರು ಬಾಲಕರನ್ನು ಬಾಲಮಂದಿರದ ಕಚೇರಿ ಕೊಠಡಿ ಮತ್ತು ಸ್ನಾನದ ಗೃಹಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸಿಡಿಪಿಓ ಅವರು ಬಾಲಮಂದಿರದ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಬಾಲಕರು ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಅವರಿಗೆ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿಡಿಪಿಓ ಅವರು ನೀಡಿದ ದೂರನ್ನು ದಾಖಲಿಸಿಕೊಂಡ ವಿಜಯನಗರ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಎಸ್.ಡಿ.ಸುರೇಶ್‍ಕುಮಾರ್ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕಾಮುಕ ದರ್ಶನ್‍ಗೆ ಶಿಕ್ಷೆ ವಿಧಿಸಿದ್ದಲ್ಲದೆ, ದೌರ್ಜನ್ಯಕ್ಕೊಳಗಾದ ಮೂವರು ಬಾಲಕರಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದರು. ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಎಂಎಸ್.ಮಂಜುಳಾ ವಾದ ಮಂಡಿಸಿದ್ದರು.

Translate »