ಸ್ಮಶಾನದಲ್ಲಿರುವ ಗೋರಿಗಳನ್ನು ತೆರವು ಮಾಡುವಂತೆ ಮನವಿ
ಮೈಸೂರು

ಸ್ಮಶಾನದಲ್ಲಿರುವ ಗೋರಿಗಳನ್ನು ತೆರವು ಮಾಡುವಂತೆ ಮನವಿ

April 24, 2021

ಮೈಸೂರು,ಏ.23-ಮೈಸೂರಿನ ಚಾಮುಂಡಿಬೆಟ್ಟ ತಪ್ಪಲಿನಲ್ಲಿರುವ ಸ್ಮಶಾನದಲ್ಲಿ ದಶಕಗಳ ಹಿಂದೆ ನಿರ್ಮಿಸಲಾದ ಗೋರಿಗಳು ಭವಿಷ್ಯದ ದಿನಗಳಲ್ಲಿ ಮೈಸೂರಿನ ಜನತೆಯ ಅಂತಿಮ ಸಂಸ್ಕಾರಕ್ಕೆ ಅವಕಾಶವನ್ನೇ ನೀಡ ದಿರುವ ಸಾಧ್ಯತೆ ಇದೆ. ಆದ ಕಾರಣ ಬೆಟ್ಟದ ತಪ್ಪಲಿನ ಸ್ಮಶಾನ ಸೇರಿದಂತೆ ಮೈಸೂರಿನ ಎಲ್ಲಾ ಸ್ಮಶಾನಗಳಲ್ಲಿರುವ ಗೋರಿಗಳನ್ನು ತೆರವು ಮಾಡುವ ಮೂಲಕ ಮುಂದಿನ ದಿನಗಳಲ್ಲಿ ಮೈಸೂರಿನ ಜನತೆಗೆ ನೆಮ್ಮದಿಯ ಅಂತಿಮ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೈಸೂರಿನ ನಿರ್ಮಾತೃ ಶ್ರೀ ನಾಲ್ವಡಿ ಒಡೆಯರ್ ಅವರ ದೂರದೃಷ್ಟಿತ್ವದ ಫಲವಾಗಿ ರೂಪುತಳೆದ ವ್ಯವಸ್ಥಿತ ಮೈಸೂರು ನಗರ ತನ್ನದೇ ಆದ ಇತಿಹಾಸ ಹೊಂದಿದೆ. ಆದರೆ, ನಾಲ್ವಡಿಯವರ ಕನಸಿನ ಮೈಸೂ ರಿಗೆ ಕಂಟಕ ಎದುರಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಸಾವಿಗೀಡಾದ ವ್ಯಕ್ತಿಯನ್ನು ಗೌರವಯುತವಾಗಿ ಬೀಳ್ಕೊಡುವ ವ್ಯವಸ್ಥೆ ಇಲ್ಲದಂತಹ ಪರಿಸ್ಥಿತಿಯನ್ನು ಇಂದು ಬೆಂಗಳೂರಿನಂತಹ ಮೆಟ್ರೋಪಾಲಿಟನ್ ಸಿಟಿ ಎದುರಿಸುತ್ತಿರುವುದು ನಮ್ಮ ಕಣ್ಣ ಮುಂದಿರುವ ಈ ಹೊತ್ತಿನಲ್ಲಿ ಮೈಸೂರಿಗೆ ಈ ಪರಿಸ್ಥಿತಿ ಬಾರದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಮನವಿ ಮಾಡಿದ್ದಾರೆ.

 

Translate »