ಮೈಸೂರು,ಫೆ.1(ಆರ್‍ಕೆ)-ಮೈಸೂರಿನ ಹೃದಯ ಭಾಗದಲ್ಲಿರುವ ಅತೀ ಹಳೆಯ ನಂಜ ರಾಜ ಬಹದ್ದೂರ್ ಛತ್ರದ ಆವರಣದ ಪೂರ್ವ ದಿಕ್ಕಿನಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಭಾನುವಾರ ಸಂಜೆ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ವ್ಯವಸ್ಥಾಪಕ ಸತೀಶ್‍ರಿಂದ ಮಾಹಿತಿ ಪಡೆದುಕೊಂಡರು. ಪಾರಂಪರಿಕ ಕಟ್ಟಡವಾದ್ದರಿಂದ ಕಲ್ಯಾಣ ಮಂಟಪದ ಆವರಣದಲ್ಲಿ ಎತ್ತರದ ಕಟ್ಟಡ ನಿರ್ಮಿಸಲಾಗದು. ಹಲವು ವರ್ಷಗಳಿಂದ ಆವರಣದ ಜಾಗ ಖಾಲಿ ಇರುವುದರಿಂದ ಬೇರೆ ಬೇರೆ ಇಲಾಖೆಯವರು ಬೇಡಿಕೆ ಸಲ್ಲಿಸುತ್ತಿರುವ ಕಾರಣ, ಅಲ್ಲಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ನೀಡಿದಲ್ಲಿ ಕಲ್ಯಾಣ ಮಂಟಪಕ್ಕೂ ಸಂಪನ್ಮೂಲ ಕ್ರೊಢೀಕರಣವಾಗುತ್ತದೆ ಎಂದು ಜಿಲ್ಲಾಧಿ ಕಾರಿಗಳು ಅಭಿಪ್ರಾಯಿಸಿದ್ದಾರೆ.
ಮಂಗಳೂರು ಗ್ಯಾರೇಜ್ ಕಡೆಯಿಂದ ನಂದಿನಿ ಬೂತ್‍ವರೆಗೆ ಶ್ರೀ ಅಮೃತೇಶ್ವರ ದೇವಸ್ಥಾನದೆದುರು ಸುಮಾರು 13 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಬಹುದಾಗಿದ್ದು, ಕಾಮಗಾರಿಗೆ ಅಂದಾಜುಪಟ್ಟಿ ತಯಾರಿಸಿ ವರದಿ ನೀಡುವಂತೆ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಸೂಚನೆ ನೀಡಿದ್ದಾರೆ. ಛತ್ರದ 9 ಎಕರೆ ವಿಸ್ತಾರ ಪ್ರದೇಶದಲ್ಲಿ ಈಗಾಗಲೇ ಮೂರು ಪೆಟ್ರೋಲ್ ಬಂಕ್, 1 ಕಾರ್ ಗ್ಯಾರೇಜ್, 1 ನಂದಿನಿ ಹಾಲಿನ ಕೇಂದ್ರ, ಕಿಂಗ್ಸ್ ಕೋರ್ಟ್ ಹೋಟೆಲ್, ಕೆಎಸ್‍ಟಿಡಿಸಿ ಕಚೇರಿ ಮತ್ತು ಮಯೂರ ಹೋಯ್ಸಳ ಹೋಟೆಲ್, ಪ್ರವಾ ಸೋದ್ಯಮ ಇಲಾಖೆ, ವಾರ್ತಾ ಇಲಾಖೆ ಕಚೇರಿ, ಸರ್ಕಾರಿ ನೌಕರರ ಸಂಘದ ಕಚೇರಿ, ಬ್ಯೂಟಿ ಪಾರ್ಲರ್, ವೇ ಬ್ರಿಡ್ಜ್, ಪಶುಸಂಗೋಪನಾ ಇಲಾಖೆ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಆವರಣದಲ್ಲಿ ಆದಾಯ ಬರುವಂತೆ ಮಾಡಿ ಅದರಿಂದ ನಂಜರಾಜ ಬಹದ್ದೂರ್ ಛತ್ರದ ಕಟ್ಟಡವನ್ನು ನಿರ್ವಹಿಸುವಂತೆ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಮಳಿಗೆಗಳನ್ನು ನಿರ್ಮಿ ಸಲು ಆಸಕ್ತಿ ತೋರಿದ್ದಾರೆ ಎಂದು ಮೂಲ ಗಳು ತಿಳಿಸಿವೆ. ಅದೇ ರೀತಿ ಕಲ್ಯಾಣ ಮಂಟಪದ ಕಟ್ಟಡವನ್ನು ರಿಪೇರಿ ಮಾಡಿ ಸುವ ಬಗ್ಗೆಯೂ ಅಂದಾಜು ಪಟ್ಟಿ ತಯಾರಿ ಸುವಂತೆ ನಿರ್ಮಿಸಿ ಕೇಂದ್ರದ ಅಧಿಕಾರಿ ಗಳಿಗೆ ಅವರು ನಿರ್ದೇಶನ ನೀಡಿದ್ದಾರೆ.