ರಾಜ್ಯದ ಬಾಕಿ 14 ಲೋಕಸಭಾ ಕ್ಷೇತ್ರಗಳಲ್ಲೂ ಶಾಂತಿಯುತ ಶೇ.68 ಮತದಾನ
ಮೈಸೂರು

ರಾಜ್ಯದ ಬಾಕಿ 14 ಲೋಕಸಭಾ ಕ್ಷೇತ್ರಗಳಲ್ಲೂ ಶಾಂತಿಯುತ ಶೇ.68 ಮತದಾನ

April 24, 2019

ಬೆಂಗಳೂರು: ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರ ಗಳಿಗೆ ಇಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಸಣ್ಣಪುಟ್ಟ ಘಟನೆ ಹೊರತು ಪಡಿಸಿ, ಶಾಂತಿಯುತ ಶೇ. 68ರಷ್ಟು ಮತ ದಾನವಾಗಿದೆ. ಮೊದಲ ಹಂತದಲ್ಲಿ ರಾಜ್ಯದಲ್ಲಿ ಶೇ. 69.58ರಷ್ಟು ಮತದಾನವಾಗಿತ್ತು.

ಕಳೆದ 18 ರಂದು ಹಳೇ ಮೈಸೂರು ಭಾಗದ ಇಷ್ಟೇ ಪ್ರಮಾಣದ ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಆ ಸಂದರ್ಭದ ಲ್ಲಿಯೂ ಯಾವುದೇ ಅಹಿತಕರ ಘಟನೆ ಗಳು ನಡೆದಿರಲಿಲ್ಲ. ಉತ್ತರಾರ್ಧ ಭಾಗದ ಮತದಾರರೂ ಕೂಡಾ ಶಾಂತಿಯುತ ವಾಗಿ ಮತ ಚಲಾಯಿಸಿದ್ದಾರೆ.

ಈ ಭಾಗದ ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ, ರಾಯ ಚೂರು, ಗುಲ್ಬರ್ಗ, ಬಳ್ಳಾರಿ, ವಿಜಾಪುರ, ಬಾಗಲಕೋಟೆ, ಚಿಕ್ಕೋಡಿ, ಬೆಳಗಾವಿ, ಧಾರವಾಡ ಹಾಗೂ ಹಾವೇರಿ ಲೋಕ ಸಭಾ ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಒಟ್ಟಾರೆ ಶೇ.68 ಮತದಾನವಾಗಿದೆ.

14 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನಡುವೆ ನೇರ ಹಣಾಹಣಿ ನಡೆದಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗ್ಡೆ, ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರೂ ಆದ ಶಾಸಕ ಈಶ್ವರ್ ಖಂಡ್ರೆ ಸೇರಿದಂತೆ ಘಟಾನುಘಟಿಗಳ ಭವಿಷ್ಯ ವನ್ನು ಮತದಾರರು ನಿರ್ಧರಿಸಿದ್ದಾರೆ. ಉತ್ತರ ಕರ್ನಾಟಕ ಮತದಾರರು ಕೂಡ ತಮ್ಮ ಆಯ್ಕೆಯ ಫಲಿತಾಂಶಕ್ಕಾಗಿ ಮೇ 23 ರವರೆಗೂ ಕಾಯಬೇಕಾಗಿದೆ. ಎಂದಿನಂತೆ ಈ ಭಾಗ ದಲ್ಲಿ ನಡೆದ ಮತದಾನದ ಸಂದರ್ಭ ದಲ್ಲೂ ಮತಯಂತ್ರಗಳು ಕೆಟ್ಟಿರುವುದು, ಇದರಿಂದ ಮತದಾನ ವಿಳಂಬ, ಪಕ್ಷದ ಕಾರ್ಯಕರ್ತರಲ್ಲೇ ಸಣ್ಣಪುಟ್ಟ ಘರ್ಷಣೆ ಗಳು ನಡೆದಿವೆ.

ಬೀದರ್ ದಕ್ಷಿಣ ಕ್ಷೇತ್ರದ ಸುಲ್ತಾನಪುರ(ಜೆ) ಗ್ರಾಮದಲ್ಲಿ ಕಳೆದ ಅನೇಕ ವರ್ಷದಿಂದ ಬೀದರ್ ನಗರದ ಕಸ ಹಾಕುವುದರಿಂದ ಗಂಭೀರ ಸಮಸ್ಯೆ ಉಂಟಾಗುತ್ತಿದೆ. ಅನೇಕ ಬಾರಿ ಅಧಿಕಾಗಳಿಗೆ ದೂರು ನೀಡಿದರು ಕೂಡ ಯಾರೂ ಸ್ಪಂದಿಸಿಲ್ಲ. ರಾಜ ಕಾರಣಿಗಳು ಕೂಡ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಮತದಾನ ದಿಂದ ದೂರ ಉಳಿಯಲು ಮುಂದಾಗಿದ್ದರು. ಇದೇ ರೀತಿ ಮೂಲಭೂತ ಸೌಲಭ್ಯ ವಂಚಿತ ಹಿನ್ನೆಲೆಯಲ್ಲಿ ದಾವಣಗೆರೆ ತಾಲೂಕಿನ ಬೋರಗೊಂಡನಹಳ್ಳಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ, ಅಧಿಕಾರಿಗಳ ಮಧ್ಯಸ್ಥಿಕೆ ನಂತರ ಮತ ಚಲಾವಣೆ ಮಾಡಿದರು. ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನಾರ್ಥವಾಗಿ ರಾಯಚೂರಿನ ಶಕ್ತಿನಗರದ ಯುವಕರು ಕಪ್ಪು ಬಟ್ಟೆ ಕಟ್ಟಿ ಕೊಂಡು ಮತದಾನ ಮಾಡಿದ ಘಟನೆ ನಡೆದಿದ್ದಲ್ಲದೆ, ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ಆಗ್ರಹಿಸಿದರು. ಕಾರವಾರದಲ್ಲಿ ಜೆಡಿಎಸ್ ಕಾರ್ಯಕರ್ತರ ವಿರುದ್ಧ ನಡುರಸ್ತೆಯಲ್ಲೇ ಬಿಜೆಪಿ ಶಾಸಕಿ ರೂಪಾಲಿ ನಾಯ್ಕ ಕಾದಾಟಕ್ಕಿಳಿದ ಘಟನೆಯೂ ನಡೆದಿದೆ. ಚಿಕ್ಕೋಡಿಯ ಹುಕ್ಕೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಕಂದಾಯ ಇಲಾಖೆ ಗ್ರಾಮ ಸಹಾಯಕ ಸುರೇಶ್ ಭೀಮಪ್ಪ ಹೃದಯಾಘಾತದಿಂದ ಸಾವನ್ನಪ್ಪಿದರೆ, ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮತದಾನ ಮಾಡಿ ಮನೆಗೆ ಬಂದ ತಕ್ಷಣ ಕುಸಿದು, ಮಹಾದೇವಿ ಮಹಾದೇವಪ್ಪ ಸಿಂದಖೇಡ ಮಹಿಳೆ ಕೊನೆಯುಸಿರೆಳೆದಿದ್ದಾರೆ.

Translate »