ವಿಜಯನಗರದಲ್ಲಿ ಭಾನುವಾರದ  ರೈತ ಸಂತೆ ನಾಳೆಯಿಂದ ಪುನಾರಂಭ
ಮೈಸೂರು

ವಿಜಯನಗರದಲ್ಲಿ ಭಾನುವಾರದ  ರೈತ ಸಂತೆ ನಾಳೆಯಿಂದ ಪುನಾರಂಭ

August 11, 2018

ಮೈಸೂರು: ಮುಡಾ ವತಿಯಿಂದ ಮೈಸೂರು ವಿಜಯನಗರ 2ನೇ ಹಂತದಲ್ಲಿ ನಿರ್ಮಿಸಿರುವ ಸಂತೆ ಕಟ್ಟಡದಲ್ಲಿ ಆ.12ರಂದು ಭಾನುವಾರದ ರೈತ ಸಂತೆ ಪುನಾರಂಭವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್.ಶರ್ಮಾ ಇಂದಿಲ್ಲಿ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಆ ದಿನ ಬೆಳಿಗ್ಗೆ 7 ಗಂಟೆಗೆ ಶಾಸಕ ಎಲ್.ನಾಗೇಂದ್ರ ಸಂತೆಗೆ ಚಾಲನೆ ನೀಡಲಿದ್ದು, ಎಪಿಎಂಸಿ ಕಾರ್ಯದರ್ಶಿ ಮಹೇಶ್ ಮತ್ತು ಮುಡಾ ಅಧಿಕಾರಿಗಳು ಭಾಗವಹಿಸು ವರು. ಭಾನುವಾರದ ರೈತ ಸಂತೆಯಲ್ಲಿ ಸಾವಯವ ಹಾಗೂ ನೈಸರ್ಗಿಕ ಉತ್ಪನ್ನಗಳು, ತಾಜಾ ತರಕಾರಿ ದೊರೆಯಲಿದ್ದು, ದಲ್ಲಾಳಿಗಳ ಹಾವಳಿ ಇಲ್ಲದೆ ರೈತರಿಂದ ಗ್ರಾಹಕ ರಿಗೆ ನೇರವಾಗಿ ತಲುಪಿಸಲು ಉತ್ತಮ ಅವಕಾಶವಾಗಿದೆ ಎಂದು ಹೇಳಿದರು.

ಮಳವಳ್ಳಿ ಸಾವಯವ ಕೃಷಿಕ ಮಂಜುನಾಥರೆಡ್ಡಿ ಮಾತನಾಡಿ, ರೈತರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದೇ ಕೊಳಚೆ ಪ್ರದೇಶದಲ್ಲಿ ಆಹಾರೋತ್ಪನ್ನಗಳನ್ನು ಮಾರಾಟ ಮಾಡುವ ದುಸ್ಥಿತಿ ಇಡೀ ರಾಜ್ಯಾದ್ಯಂತ ರೈತರು ಎದುರಿಸುತ್ತಿದ್ದಾರೆ. ಅಲ್ಲದೆ ದಲ್ಲಾಳಿಗಳ ಹಾವಳಿಯಿಂದಲೂ ರೈತರು ಸಾಲದ ಮಡುವಿನಲ್ಲಿ ಸಿಲುಕುವಂತಾಗಿದೆ. ಇದರಿಂದ ಹೊರ ಬರಲು ಸೂಕ್ತ ಮಾರುಕಟ್ಟೆ, ವೈಜ್ಞಾನಿಕ ಬೆಲೆ ಒದಗಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಗದ್ದಿಗೆಯ ಹೂಮಾಲೆ ಫಾರಂನ ಪ್ರಗತಿ ಪರ ಕೃಷಿಕ ಮಹಿಳೆ ವಿದ್ಯಾ ಕುಶಕುಮಾರ್ ಉಪಸ್ಥಿತರಿದ್ದರು.

Translate »