ಮೈಸೂರು, ಚಾಮರಾಜನಗರದಲ್ಲಿ ಜಪಾನಿನ ಸುಜುಕಿ, ಹಿಟಾಚಿ ಸೇರಿದಂತೆ ಹಲವು ಬೃಹತ್ ಕಂಪನಿ ಸ್ಥಾಪನೆ
News

ಮೈಸೂರು, ಚಾಮರಾಜನಗರದಲ್ಲಿ ಜಪಾನಿನ ಸುಜುಕಿ, ಹಿಟಾಚಿ ಸೇರಿದಂತೆ ಹಲವು ಬೃಹತ್ ಕಂಪನಿ ಸ್ಥಾಪನೆ

August 13, 2022

ಬೆಂಗಳೂರು, ಆ.12(ಕೆಎಂಶಿ)-ಜಪಾನ್ ಮೂಲದ ಸುಜುಕಿ ಮೋಟಾರ್ಸ್, ಹಿಟಾಚಿ ಸೇರಿದಂತೆ ಬೃಹತ್ ಕಂಪನಿಗಳು ಮೈಸೂರು, ಚಾಮರಾಜನಗರದಲ್ಲಿ ಸ್ಥಾಪಿತಗೊಳ್ಳಲಿವೆ.

ಈ ಸಂಸ್ಥೆಗಳಲ್ಲದೆ, ಜಪಾನಿನ 9 ಕಂಪನಿ ಗಳು, ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ಸ್ಥಾಪನೆ ಆಗಲಿವೆ. ಸುಮಾರು 60 ರಿಂದ 80 ಸಾವಿರ ಕೋಟಿ ರೂ. ಬಂಡವಾಳ ಹೂಡಲಿದ್ದು, ಇವರಿಗೆ ಅಗತ್ಯವಾದ ಭೂಮಿ ಮತ್ತು ಇತರೆ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಇಂದಿಲ್ಲಿ ತಿಳಿಸಿದ್ದಾರೆ.

ನವೆಂಬರ್ 2 ರಿಂದ 4ರವರೆಗೆ ರಾಜಧಾನಿಯಲ್ಲಿ ನಡೆಯ ಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್‍ಶೋನ ಭಾಗವಾಗಿ ಜಪಾನ್ ಪ್ರವಾಸ ಯಶಸ್ವಿಯಾಗಿದೆ. ಮೂರು ದಿನಗಳ ರೋಡ್‍ಶೋ ವೇಳೆ ಹಲವು ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿ, ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ ನೀಡಿ ದ್ದೇನೆ ಎಂದಿದ್ದಾರೆ. ಟೋಕಿಯೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಟೊಯೊಟಾ, ಸುಜುಕಿ ಮೋಟಾರ್ ಕಾಪೆರ್Ç ರೇಷನ್, ಮಿಟ್ಸುಯಿ, ಮೆರ್ಕರಿ, ಜೆಟ್ರೊ, ಹಿಟಾಚಿ, ಎನ್‍ಇಸಿ ಕಾರ್ಪ್‍ನ ಪ್ರತಿನಿಧಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಬಂಡವಾಳ ಹೂಡಲು ಆಸಕ್ತಿ ತೋರಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಬೃಹತ್ ಕೈಗಾರಿಕಾ ಸ್ಥಾಪನೆಗೆ ಭೂಮಿಯ ಕೊರತೆ ಇರುವ ಕಾರಣ
ರಾಜಧಾನಿ ಬಿಟ್ಟು ಹೊರಗಿನ ಎರಡು ಮತ್ತು ಮೂರನೇ ನಗರದಲ್ಲಿ ಈ ಸಂಸ್ಥೆಗಳು ತಲೆ ಎತ್ತಲಿವೆ. ಮೈಸೂರು ಮತ್ತು ಚಾಮರಾಜನಗರದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ, ಇನ್ನೂ 1500 ಎಕರೆಯಷ್ಟು ಭೂಮಿಯನ್ನು ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ. ಈ ನಗರಗಳಿಗೆ ರಸ್ತೆ, ರೈಲು ಮತ್ತು ವಿಮಾನದ ಸಂಪರ್ಕ ಇರುವುದರಿಂದ ಉದ್ಯಮಿದಾರರು ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ ಎಂದರು.

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಜಪಾನ್ ಸಂಸ್ಥೆಗಳಿಗೆ ಮನವರಿಕೆ ಮಾಡಿದ ನಂತರ ಅವರು ಬಂಡವಾಳ ಹೂಡಲು ಆಸಕ್ತಿ ತೋರಿದ್ದಾರೆ. ರಾಜ್ಯ ಸರ್ಕಾರ ಕೈಗಾರಿಕೆಗಳ ಬೆಳವಣಿಗೆ ಮತ್ತು ಉತ್ತೇಜನಕ್ಕೆ ಜಾರಿ ಮಾಡಿರುವ 2020-25ರ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿಯಾಗಿದ್ದು, ವಿಶ್ವದ ಮುಂಚೂಣಿ ಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದರು.

ರಕ್ಷಣೆ, ಆಹಾರ ಸಂಸ್ಕರಣೆ, ಬಾಹ್ಯಾಕಾಶ, ಐಟಿಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡುವ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಿದೆ ಎಂದು ಉದ್ದಿಮೆದಾರರಿಗೆ ಅಭಯ ನೀಡಲಾಗಿದೆ ಎಂದು ತಿಳಿಸಿದರು.
ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮವಾಗಿದೆ. ವಿಶೇಷವಾಗಿ, ಜಪಾನ್‍ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸ ಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದು ನಿರಾಣಿ ಮಾಹಿತಿ ನೀಡಿದರು. ಅತೀ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.42 ರಷ್ಟಿದೆ. ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಗೆ, ಧಾರವಾಡ, ಕಲಬುರಗಿ ಅದೇ ರೀತಿ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂದು ಉದ್ಯಮಿಗಳಿಗೆ ರಾಜ್ಯ ನಿಯೋಗ ಆಶ್ವಾಸನೆ ನೀಡಿದೆ ಎಂದರು.

ಜೆಟ್ರೊದ ಗ್ಲೋಬಲ್ ಸ್ಟ್ರಾಟಜಿ, ನೈಋತ್ಯ ಏಷ್ಯಾದ ಹಿರಿಯ ನಿರ್ದೇಶಕರಾದ ಕಝುಹಿಕೊ ಒಬಾಮಾ ಮತ್ತು ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಕಝುಯಾ ನಕಾಜೊ ಅವರನ್ನು ಭೇಟಿ ಮಾಡಿ ಮಾತುಕತೆ ಮಾಡಿದ್ದೇವೆ.

Translate »