ನೆರೆ ನೀರು ಬಳಕೆಗೆ  ನೂತನ ಜಲ ನೀತಿ
News

ನೆರೆ ನೀರು ಬಳಕೆಗೆ ನೂತನ ಜಲ ನೀತಿ

August 13, 2022

ಬೆಂಗಳೂರು, ಆ. 12 (ಕೆಎಂಶಿ)- ನೆರೆ ಬಂದ ಸಂದರ್ಭದಲ್ಲಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಮರು ಬಳಕೆ ಮಾಡಿ ಕೊಳ್ಳುವ ನೂತನ ಜಲ ನೀತಿಗೆ ರಾಜ್ಯ ಸಚಿವ ಸಂಪುಟ ಅನು ಮೋದನೆ ನೀಡಿರುವುದಲ್ಲದೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ನಿಗದಿಯಾಗಿದ್ದ ವಯೋಮಿತಿ ಸಡಿಲಿಸಿದೆ.
ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧು ಸ್ವಾಮಿ, ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ, ಅದನ್ನು ವ್ಯವಸ್ಥಿತವಾಗಿ ಹಾಗೂ ಮಿತವ್ಯಯ ದಲ್ಲಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಿ, ಹೊಸ ನೀತಿಗೆ ಅನುಮತಿ ನೀಡ ಲಾಗಿದೆ. ಚಾಲ್ತಿಯಲ್ಲಿರುವ ನೀರಾವರಿ ಯೋಜನೆ ಗಳನ್ನು ಪೂರ್ಣಗೊಳಿಸಲು ಮತ್ತು ನೀರಾವರಿ ಸಾಮಥ್ರ್ಯ, ಸೃಷ್ಟಿ ಹಾಗೂ ಅವುಗಳ ಬಳಕೆ ನಡುವೆ ಇರುವ ಅಂತರವನ್ನು ನಿವಾರಿಸುವುದು. ಸಾಧ್ಯವಿರುವ ಕಡೆಗಳಲ್ಲಿ ಸೂಕ್ಷ್ಮ ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು, ನೀರಾವರಿ ವ್ಯವಸ್ಥೆಯಲ್ಲಿ ಕಾಲುವೆ ಯಾಂತ್ರೀಕರಣದ ಬಳಕೆ ಕಡ್ಡಾಯಗೊಳಿಸಿ, ತೂಬುಗಳಲ್ಲಿ ನಿಗದಿತ ಹರಿಯುವಿಕೆ ದೃಢಿಕರಿಸಲಾಗಿದೆ.

ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ನೀರಿನ ನಿರ್ವಹಣೆಯ ಸಹಭಾಗಿತ್ವ ಜಾರಿಗೆ ತರಬೇಕು. ಅಂತರ್ಜಲ ಮಟ್ಟ ಕುಸಿಯುವಿಕೆ ಮತ್ತು ಹೆಚ್ಚುತ್ತಿರುವ ಅಂತರ್ಜಲ ಮಲೀನತೆಯು ಕಳವಳಕಾರಿಯಾಗಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಪಂಚಾಯತ್ ಮಟ್ಟದ ಅಂತರ್ಜಲ ಬಜೆಟ್ ಹಾಗೂ ಅಂತರ್ಜಲ, ಕೆರೆ, ಜಲಾನಯನ ನಿರ್ವಹಣೆಯ ಸಹಭಾಗಿತ್ವ ಅಳವಡಿಸಿಕೊಳ್ಳುವುದು, ಈ ನೀತಿಯಲ್ಲಿ ಸೇರಿದೆ ಎಂದರು. ಕೈಗಾರಿಕೆ ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಅಂತರ್ಜಲ ಬಳಕೆಗಾಗಿ ಮೀಟರಿಂಗ್ ಆಧರಿಸಿ, ನೀರಿನ ದರ ವಿಧಿಸಬೇಕು.

ನಗರ ಮತ್ತು ಗ್ರಾಮೀಣ ನೀರು ಉತ್ಪಾದಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು, ಭಾರೀ ಮಳೆ ಅವಧಿಯಲ್ಲಿ ಸಮಯೋಜಿತ ಮೇಲ್ವಿಚಾರಣೆ ಮುನ್ಸೂಚನೆ ಮತ್ತು ತಂತ್ರಜ್ಞಾನಗಳಿಂದ ಪ್ರವಾಹ ನಿಯಂತ್ರಣ ಒದಗಿಸುವುದರೊಂದಿಗೆ ಅಣೆಕಟ್ಟು ವ್ಯವಸ್ಥಾಪಕರು ಹಾಗೂ ಪ್ರವಾಹ ನಿಯಂತ್ರಣ ಆಡಳಿತದ ನಡುವೆ ಪರಿಣಾಮಕಾರಿ ಸಂವಹನದ ಮೂಲಕ ಪ್ರವಾಹ ಅಪಾಯಗಳನ್ನು ನಿಯಂತ್ರಿಸಬೇಕೆಂಬುದು ಅಡಕವಾಗಿದೆ.

ಸಮುದ್ರ ಸೇರುವುದಕ್ಕೂ ಮುನ್ನ ಭಾರೀ ನೆರೆಯಿಂದ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತಿದೆ. ಇದನ್ನು ತಡೆಗಟ್ಟುವ ಉದ್ದೇಶದಿಂದಲೇ ಹರಿಯುವ ನೀರನ್ನು ತಡೆದು, ಮರು ಬಳಕೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬರಲಾಗಿದೆ ಎಂದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ನೇಮಕಾತಿಗೆ ಅರ್ಹರು ದೊರೆಯದ ಕಾರಣ ವಯೋಮಿತಿಯಲ್ಲಿ ಸಡಿಲಿಕೆ ಮಾಡಲು ಸಭೆ ಸಮ್ಮತಿಸಿದೆ ಎಂದರು. ಕೋವಿಡ್-19 ಕಾರಣದಿಂದ ಎರಡು ವರ್ಷಗಳ ಕಾಲ ನೇಮಕಾತಿಯಾಗಿಲ್ಲ. ಈ ಸಂದರ್ಭದಲ್ಲಿ ಅರ್ಹತೆ ಇದ್ದರೂ, ಈಗ ಅರ್ಜಿ ಸಲ್ಲಿಸಲು ಅವಕಾಶ ಇಲ್ಲದ ಕಾರಣ ವಯೋಮಿತಿ ಸಡಲಿಕೆ ಮಾಡಲಾಗಿದೆ. ಅದರಂತೆ ಪರಿಶಿಷ್ಟ ಜಾತಿ ವರ್ಗದವರಿಗೆ 47 ವರ್ಷ, ಹಿಂದುಳಿದ ವರ್ಗ-45, ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 42 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ ಎಂದರು. 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಿದ್ದು, ಇದರ ಜತೆಗೆ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಅರ್ಹತಾ ಪರೀಕ್ಷೆಗೆ ನಿಗದಿಯಾಗಿದ್ದ ಶೇ.60ರಷ್ಟು ಅಂಕಗಳನ್ನು ಸಡಿಲಿಕೆ ಮಾಡಿ ಶೇ.50 ಅಂಕಕ್ಕೆ ನಿಗದಿಪಡಿಸಲಾಗಿದೆ. ಇನ್ನು ರಾಜ್ಯದಲ್ಲಿ 128 ಮಹಿಳಾ ಸ್ವಾಸ್ಥ್ಯ ಕೇಂದ್ರಗಳನ್ನು 22.4ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಸಭೆ ಅನುಮತಿ ನೀಡಿದೆ.

300 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಅದರ ಮೊದಲ ಹಂತದಲ್ಲಿ 128 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇದನ್ನು ಸ್ಥಾಪಿಸಲಾಗುವುದು. ಈ ಕೇಂದ್ರಗಳಲ್ಲಿ ಮಹಿಳೆಯರಿಗೆ ನುರಿತ ಸರ್ಜನ್‍ಗಳು ಅಗತ್ಯವಾದ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿಕೊಡಲಿದ್ದಾರೆ ಎಂದು ಹೇಳಿದರು.

Translate »