ಮೈಸೂರು, ಅ.5(ಆರ್‍ಕೆ)- ಆ್ಯಂಟಿಜೆನ್ ಟೆಸ್ಟ್ ಕಿಟ್‍ಗಳ ಮೂಲಕ ಹೆಚ್ಚು ಹೆಚ್ಚು ಪರೀಕ್ಷೆ ನಡೆಸಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ನಿಯಂತ್ರಿಸಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ|| ಕೆ. ಸುಧಾಕರ್ ಅವರು ಇಂದಿಲ್ಲಿ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮೈಸೂರು ನಗರ ಮತ್ತು ಜಿಲ್ಲೆಯ ಕೋವಿಡ್-19 ಪರಿ ಸ್ಥಿತಿ, ನಿರ್ವಹಣೆ ಕುರಿತಂತೆ ಪ್ರಗತಿ ಪರಿ ಶೀಲನೆ ನಡೆಸಿದ ಅವರು ದಿನದಿಂದ ದಿನಕ್ಕೆ ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಹಲವರು ಸಾವನ್ನಪ್ಪುತ್ತಿರು ವುದು ಅಪಾಯಕಾರಿ ಎಂದರು.
ಜಿಲ್ಲೆಯ ಕೋವಿಡ್ ಪರಿಸ್ಥಿತಿ ಹಾಗೂ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ಮಾಹಿತಿ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಸಿಬ್ಬಂದಿ, ಆಕ್ಸಿಜನ್, ಬೆಡ್‍ಗಳ ಕೊರತೆಯಿಂದಾಗಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ತೊಂದರೆಯುಂಟಾ ಗುತ್ತಿದೆ ಎಂಬ ವಿಷಯವನ್ನು ಸಚಿವರ ಗಮನಕ್ಕೆ ತಂದರು.
ಮೈಸೂರು ನಗರದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ಆಧಾರದ ವೈದ್ಯರು, ನರ್ಸ್‍ಗಳು, ಲ್ಯಾಬ್ ಟೆಕ್ನಿಷಿಯನ್‍ಗಳು 12 ದಿನದಿಂದ ಮುಷ್ಕರ ನಡೆಸುತ್ತಿರುವುದರಿಂದ ನಮಗೆ ಸಿಬ್ಬಂದಿಗಳ ಕೊರತೆ ಎದುರಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಹೊರಗುತ್ತಿಗೆಯಲ್ಲಿ ನೇಮಿಸಿ: ಕೋವಿಡ್-19 ನಿರ್ವಹಣೆ ನಿರಂತರ ಹೋರಾಟವಾಗಿರು ವುದರಿಂದ ಹೊರಗುತ್ತಿಗೆ ಆಧಾರದಲ್ಲಿ ವೈದ್ಯರು, ಸಿಬ್ಬಂದಿಗಳನ್ನು ನೇಮಿಸಿಕೊಳ್ಳಿ. ಅದಕ್ಕೆ ಬೇಕಾಗುವ ಅನುದಾನ ಹಾಗೂ ಉಪಕರಣಗಳನ್ನು ಸರ್ಕಾರ ಪೂರೈಸಲಿದೆ ಎಂದು ಡಾ|| ಸುಧಾಕರ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಪರೀಕ್ಷೆ ಹೆಚ್ಚಿಸಿ: ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ಮಾಡಿ ಸೋಂಕಿನ ಲಕ್ಷಣ ಕಂಡು ಬಂದ ತಕ್ಷಣ ಅವರಿಗೆ ಚಿಕಿತ್ಸೆ, ಆರೈಕೆ ಮಾಡಿ, ಸೋಂಕು ಹರಡುವುದನ್ನು ತಪ್ಪಿಸುವ ಜೊತೆಗೆ ಸಾವುಗಳನ್ನೂ ತಪ್ಪಿಸಬೇಕು ಎಂದು ಸಚಿವರು ತಾಕೀತು ಮಾಡಿದರು.
ಆಕ್ಸಿಜನ್ ಬೆಡ್ ಪೂರೈಸಿ: ಈಗಾಗಲೇ ಕೆಆರ್, ಜಿಲ್ಲಾ ಕೋವಿಡ್ ಆಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್‍ಗಳಿಗೆ ಸರ್ಕಾರ ಆಕ್ಸಿಜನ್ ಪೂರೈಸಲು ಅನುದಾನ ನೀಡಿದೆ. ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳ ಮೂಲಕ ಆಸ್ಪತ್ರೆ ಹಾಸಿಗೆಗಳಿಗೆ ಆಕ್ಸಿಜನ್ ಪೈಪ್‍ಲೈನ್ ಹಾಗೂ ಉಪಕರಣ ಅಳವಡಿಸಿಕೊಂಡು ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಚಿಕಿತ್ಸೆ ನೀಡಿ ಅವರು ವೆಂಟಿಲೇಟರ್‍ಗೆ ಹೋಗದಂತೆ ನೋಡಿಕೊಳ್ಳಿ ಎಂದರು.
ಇಎಸ್‍ಐ ಆಸ್ಪತ್ರೆ ಸಮಸ್ಯೆ: ಇಎಸ್‍ಐ ಆಸ್ಪತ್ರೆಯಲ್ಲಿರುವ 100 ಹಾಸಿಗೆಗಳನ್ನೂ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಬಳಸುತ್ತಿರುವುದರಿಂದ ಪ್ರತೀ ತಿಂಗಳೂ ವಿಮೆ ಹಣ ಪಾವತಿಸು ತ್ತಿರುವ ಕಾರ್ಮಿಕರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲವಾದ್ದರಿಂದ 50 ಹಾಸಿಗೆ ಯನ್ನಾದರೂ ಕೋವಿಡ್ ಅಲ್ಲದ ರೋಗಿಗಳಿಗೆ (ಓoಟಿ-ಅoviಜ) ಬಿಟ್ಟುಕೊಡಬೇಕೆಂದು ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ|| ವೀರೇಶ್‍ಕುಮಾರ್ ಸಚಿವರಲ್ಲಿ ಮನವಿ ಮಾಡಿಕೊಂಡರು. ಸರ್ಕಾರವೇ ಶೇ.50ರಷ್ಟು ಹಾಸಿಗೆಗಳನ್ನು ಮಾತ್ರ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೀಡಬೇಕೆಂದು ಆದೇಶಿಸಿರುವುದರಿಂದ ಇಎಸ್‍ಐ ಆಸ್ಪತ್ರೆಯ 50 ಹಾಸಿಗೆಗಳನ್ನು ಕಾರ್ಮಿಕರಿಗಾಗಿ ಬಿಟ್ಟುಕೊಡಿ ಎಂದು ಡಾ|| ಸುಧಾಕರ್ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಸದಸ್ಯರಾದ ಎ.ಹೆಚ್.ವಿಶ್ವನಾಥ್, ಮರಿತಿಬ್ಬೇಗೌಡ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳ ಶ್ಯಾಂ, ಸಿಇಒ ಬಿ.ಭಾರತಿ, ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ಡಿಸಿಪಿ ಡಾ|| ಎ.ಎನ್. ಪ್ರಕಾಶ್‍ಗೌಡ, ಎಡಿಸಿ ಬಿ.ಎಸ್. ಮಂಜುನಾಥಸ್ವಾಮಿ ಹಾಗೂ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.