ಮೈಸೂರು,ಅ.5(ಆರ್‍ಕೆ)-`ನೀವೇನೂ ಜಂಬೂ ಸವಾರಿ ಮಾಡಿಸುತ್ತಿದ್ದೀರೋ ಅಥವಾ ಬೊಂಬೂ ಸವಾರಿ ಮಾಡಲು ಹೊರಟಿದ್ದೀರೋ’ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಜಿಲ್ಲಾಡಳಿತವನ್ನು ಪ್ರಶ್ನಿಸಿದರು.
ಮೈಸೂರಿನ ಜಿಲ್ಲಾ ಪಂಚಾಯಿತಿ ಸಭಾಂಗಣ ದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾ ಕರ್ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್-19 ನಿರ್ವ ಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ದಸರಾ ಜಂಬೂಸವಾರಿಯಲ್ಲಿ 2000 ಮಂದಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲು ನಿರ್ಧರಿಸಿ ರುವ ಜಿಲ್ಲಾಡಳಿತದ ಕ್ರಮವನ್ನು ಪ್ರಶ್ನಿಸಿದರು.
ಎರಡು ಸಾವಿರ ಮಂದಿಗೆ ಅವಕಾಶ ಕಲ್ಪಿಸಿದರೆ ಅರಮನೆ ಆವರಣದಲ್ಲಿ ಖಂಡಿತಾ ಹತ್ತು ಸಾವಿರ ಮಂದಿ ಸೇರಿಕೊಳ್ಳುತ್ತಾರೆ. ಅದರಿಂದ ಕೊರೊನಾ ವೈರಸ್ ಸೋಂಕು ಸ್ಫೋಟವಾಗುವುದಿಲ್ಲವೇ?. ಅದನ್ನು ತಡೆಯಲು ಅಥವಾ ನಿರ್ವಹಿಸಲು ಜಿಲ್ಲಾ ಡಳಿತಕ್ಕೆ ಸಾಮಥ್ರ್ಯವಿದೆಯಾ? ಈಗಾಗಲೇ ಮೈಸೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಮಾರಿ ಸೋಂಕು ವ್ಯಾಪಕವಾಗಿ ಹರಡಿದ್ದು, ಮೈಸೂರಿನ ಆಸ್ಪತ್ರೆಗಳಲ್ಲಿ ಹಾಸಿಗೆಯೇ ದೊರೆ ಯುತ್ತಿಲ್ಲ, ಇನ್ನು ಕೊರೊನಾ ಮಹಾಸ್ಫೋಟವಾದರೆ ಹೊಣೆ ಯಾರು? ಎಂದು ವಿಶ್ವನಾಥ್ ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ಸ್ಥಳೀಯವಾಗಿ ಸರಿಯಾದ ಮಾಹಿತಿಯಿಲ್ಲ. ದಸರಾ ಉತ್ಸ ವದ ಬಗ್ಗೆ ವಾಸ್ತವ ತಿಳಿಸಬೇಕು. ಮೈಸೂರಲ್ಲಿ ಒಂದು ಕೋತಿ ಕುಣಿಸಿದರೂ ಅದನ್ನು ನೋಡಲು ಸಾವಿರ ಮಂದಿ ಸೇರುತ್ತಾರೆ. ಹೀಗಿರುವಾಗ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮಾಡಿದರೆ. ಪರಿಸ್ಥಿತಿ ಏನಾಗ ಬೇಕು? ಊರಿನ ಎಲ್ಲಾ ರಸ್ತೆಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದರೆ ಅದನ್ನು ನೋಡಲು ಸಹಜವಾಗಿ ಜನರು ಬಂದೇ ಬರುತ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು, ಮಾಸ್ಕ್ ಧರಿಸದವರಿಗೆ 1000 ರೂ. ದಂಡ ವಿಧಿಸಬೇಕು ಎಂದು ಹೇಳುವ ನಾವು ಈ ರೀತಿ ಜನರನ್ನು ಸೇರಿಸಿ ದಸರಾ ಮಾಡಿದರೆ ಕೊರೊನಾ ನಿಯಂತ್ರಿಸಲು ಸಾಧ್ಯವೇ? ಆದ್ದರಿಂದ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿಗೆ ಪೂಜೆ ನಡೆಯಲಿ, ವಿಜಯದಶಮಿ ಮೆರವಣಿಗೆ ದಿನ ಅರಮನೆ ಆವರಣದಲ್ಲಿ ಅಂಬಾರಿಗೆ ಕೇವಲ ಪುಷ್ಪಾರ್ಚನೆ ಮಾಡಿದರೆ ಸಾಕು ಎಂದು ಸಲಹೆ ನೀಡಿದರು.