ಮೈಸೂರು, ಅ.5(ಆರ್‍ಕೆ)-ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮೈಸೂರು ದಸರಾ ಉತ್ಸವವನ್ನು ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿ ಸುವ ಅವಶ್ಯಕತೆ ಇದೆ ಎಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪಂಚಾಯಿತಿ ಕಚೇರಿ ಬಳಿ ಸುದ್ದಿಗಾರರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಮಹಾಮಾರಿ ಸೋಂಕು ಹರಡಿ ಸಾವು ಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅದನ್ನು ನಿರ್ವಹಿಸಲು ಇಡೀ ರಾಜ್ಯವೇ ಹೋರಾಡುತ್ತಿದೆ. ಹೀಗಿರುವಾಗ ದಸರಾ ಜಂಬೂ ಸವಾರಿಯನ್ನು ಅತ್ಯಂತ ಸರಳವಾಗಿ ಆಚರಿ ಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಎಲ್ಲಾ ಜನಪ್ರತಿನಿಧಿಗಳು ನೀಡಿದ್ದಾರೆ. ನಾನೂ ಸಹ ಮುಖ್ಯ ಮಂತ್ರಿಗಳ ಜೊತೆ ಮತ್ತೊಮ್ಮೆ ಮಾತನಾಡಿ, ಹಲವು ಮಾರ್ಪಾಡುಗಳನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದರು. ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ ದಂತೆ ನಿಯಂತ್ರಣ ಮಾಡಿದ್ದ ಕೇರಳ ರಾಜ್ಯದಲ್ಲಿ ಓಣಂ ಹಬ್ಬದ ನಂತರ ಈಗ ದಿನಕ್ಕೆ ಸಾವಿರಾರು ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲಿಯೂ ಸಹ ಸಾವಿರಾರು ಮಂದಿ ಸೇರಿಸಂತಸದಿಂದ ಓಣಂ ಆಚರಿಸಿದರು. ಆದರೆ ತದನಂತರ ಅವರು ಅನುಭವಿಸುತ್ತಿರುವ ಸಮಸ್ಯೆಯನ್ನು ಗಮನಿಸಿದರೆ, ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಅರಮನೆ ಆವರಣದಲ್ಲಿ 2000 ಸಾವಿರ ಮಂದಿಗೆ ಅವಕಾಶ ನೀಡುವುದರ ಬಗ್ಗೆ ಈಗಾಗಲೇ ಸ್ಥಳೀಯ ಜನಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೊತೆ ಸಭೆ ನಡೆಸಿ ಹಲವಾರು ಮಾರ್ಪಾಡುಗಳನ್ನು ಮಾಡಲಾಗುವುದು. ಇನ್ನು ಅಂತಿಮವಾಗಿ ದಸರಾ ಯಾವ ರೀತಿ ಇರಬೇಕು, ಎಷ್ಟು ಮಂದಿಗೆ ಪಾಲ್ಗೊಳ್ಳಲು ಅವಕಾಶ ನೀಡಬೇಕೆಂಬುದರ ಬಗ್ಗೆ ಮುಖ್ಯಮಂತ್ರಿಗಳು ಅಂತಿಮವಾಗಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದೂ ಡಾ. ಸುಧಾಕರ್ ತಿಳಿಸಿದರು.