ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿದ ಕೂಗು
ಮೈಸೂರು

ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿದ ಕೂಗು

June 29, 2022

ಮೈಸೂರು, ಜೂ.28(ಆರ್‍ಕೆ)- ಮಲೈ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮಾದರಿಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ಸಂರಕ್ಷಣೆಗಾಗಿ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬ ಕೂಗು ಹೆಚ್ಚುತ್ತಿದೆ.

ಕಾಂಕ್ರೀಟ್ ಕಾಡಿನ ಹೊರತಾಗಿ ನೈಸರ್ಗಿಕ ವಾಗಿಯೇ ಚಾಮುಂಡಿಬೆಟ್ಟ ಉಳಿಸಿಕೊಳ್ಳುವ ಜೊತೆಗೆ ಅಧಿದೇವತೆ ಚಾಮುಂಡೇಶ್ವರಿ ದೇವಸ್ಥಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗ ಬೇಕೆಂದು ಸೋಮವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಆಷಾಢ ಶುಕ್ರವಾರ ಸಂಬಂಧ ಚಾಮುಂಡಿಬೆಟ್ಟದಲ್ಲಿ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮ ಪೂರ್ವಸಿದ್ಧತಾ ಸಭೆಯಲ್ಲಿ ಉಪಸ್ಥಿತ ರಿದ್ದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ವಿಷಯ ಪ್ರಸ್ತಾಪಿಸಿದ್ದಾರೆ.

ಅದೇ ಸಂದರ್ಭ ದಸರಾ ಆಚರಣೆಗೂ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕೆಂಬ ಬೇಡಿಕೆ ಹಲವು ವರ್ಷ ಗಳಿಂದ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ನಿರ್ಧಾರ ಕೈಗೊಳ್ಳಬೇಕೆಂದು ಜಿ.ಟಿ.ದೇವೇ ಗೌಡರು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಒತ್ತಾಯಿಸಿದರು.

ಅವರ ಅಭಿಪ್ರಾಯವನ್ನು ಆಲಿಸಿದ ಸಚಿವರು ಎರಡೂ ಪ್ರಾಧಿಕಾರ ರಚನೆ ಕುರಿತು ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿ ಮುಂದಿನ ತಿಂಗಳು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸ ಲಾಗುವುದು ಎಂದು ಭರವಸೆ ನೀಡಿದರು.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿ ಸಿದ ಜಿ.ಟಿ.ದೇವೇಗೌಡರು, ಚಾಮುಂಡಿಬೆಟ್ಟವನ್ನು ನೈಸರ್ಗಿಕ ತಾಣವಾಗಿಯೇ ಉಳಿಸಬೇಕು. ಅರಣ್ಯ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಕಟ್ಟಡ ನಿರ್ಮಿಸುವುದನ್ನು ತಡೆಯಲು ಪ್ರಾಧಿಕಾರ ರಚನೆಯಾಗಬೇಕು ಎಂದರು.

ಮೇಯರ್ ಬೆಂಬಲ: ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ದಸರಾ ಪ್ರಾಧಿಕಾರ ರಚನೆಯ ಜಿ.ಟಿ. ದೇವೇಗೌಡರ ಅಭಿಪ್ರಾಯಕ್ಕೆ ಬೆಂಬಲ ನೀಡಿರುವ ಮೇಯರ್ ಸುನಂದ ಪಾಲನೇತ್ರ, ಪ್ರಾಧಿಕಾರ ರಚನೆಯಾದಲ್ಲಿ ಚಾಮುಂಡಿಬೆಟ್ಟದ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದಂತಾಗುತ್ತದೆಯಲ್ಲದೆ, ಭಕ್ತಾದಿಗಳು, ಪ್ರವಾಸಿಗರ ಅನುಕೂಲಕ್ಕೆ ದೇವಸ್ಥಾನವನ್ನೂ ಅಭಿವೃದ್ಧಿಪಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಅದೇ ರೀತಿ 2018 ರಿಂದಲೇ ದಸರಾ ಪ್ರಾಧಿಕಾರಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ ಸಾಕಾರವಾಗಿಲ್ಲ. ಇದೀಗ ಮುಂದಿನ ವಾರ ಕ್ಯಾಬಿನೆಟ್‍ನಲ್ಲಿ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ನೀಡಿರುವುದರಿಂದ ಮೈಸೂರಿಗೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೇವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ: ಈ ಕುರಿತು ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಮನಬಂದಂತೆ ಕಟ್ಟಡ ಕಟ್ಟುವುದು, ಮನೆಗಳ ಒಳಚರಂಡಿ ನೀರನ್ನು ಎಲ್ಲೆಂದರಲ್ಲಿ ಬಿಡುತ್ತಿರುವುದರಿಂದ ಚಾಮುಂಡಿಬೆಟ್ಟದ ನೈಸರ್ಗಿಕ ಸೌಂದರ್ಯ ಹಾಳಾಗುತ್ತಿದೆ. ಪ್ರತ್ಯೇಕ ಪ್ರಾಧಿಕಾರ ರಚನೆಯಾದಲ್ಲಿ ಬೆಟ್ಟವನ್ನು ಪರಿಸರ ಸ್ನೇಹಿಯಾಗಿ ಉಳಿಸಬಹುದು ಎಂದರು.

ದಸರೆ ಬಂತೆಂದರೆ ಅಧಿಕಾರಿಗಳು ಮೂರು ತಿಂಗಳು ಯಾವುದೇ ಕೆಲಸ ಮಾಡುವು ದಿಲ್ಲ. ದಸರಾ ನೆಪದಲ್ಲಿ ಕಾಲಹರಣ ಮಾಡಿ ಕಡೆ ಘಳಿಗೆಯಲ್ಲಿ ತರಾತುರಿ ಕಾಮಗಾರಿ ಮಾಡುವುದರಿಂದ ಗುಣಮಟ್ಟ ಹಾಳಾಗುತ್ತದೆ. ಅದರ ಬದಲು ವರ್ಷಪೂರ್ತಿ ತಯಾರಿ ಮಾಡಲು ದಸರಾ ಪ್ರಾಧಿಕಾರ ರಚನೆಯಾಗಬೇಕೆಂಬ ಅಭಿಪ್ರಾಯ ಸೂಕ್ತವಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು. ಈ ಸಂಬಂಧ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹಾಗೂ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ, ಈ ಎರಡೂ ಪ್ರಾಧಿಕಾರ ರಚನೆ ಸಂಬಂಧ ನಮ್ಮಿಂದ ಅಧಿಕೃತವಾಗಿ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಮೌಖಿಕವಾದ ಚರ್ಚೆ ನಡೆದು ಸರ್ಕಾರದ ಮಟ್ಟದಲ್ಲಿಯೂ ಸಮಾಲೋಚನೆಗಳಾಗುತ್ತಿವೆ ಎಂದು ನುಡಿದರು.

Translate »