ಭಾರತೀಯ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಪಿ.ಸಿ.ತಿಮ್ಮಯ್ಯ
ಮೈಸೂರು

ಭಾರತೀಯ ಸೇನೆಯ ತರಬೇತಿ ವಿಭಾಗದ ಮುಖ್ಯಸ್ಥ ಹುದ್ದೆಯಿಂದ ನಿವೃತ್ತರಾದ ಪಿ.ಸಿ.ತಿಮ್ಮಯ್ಯ

May 4, 2020

ಶಿಮ್ಲಾ, ಮೇ 3- ಭಾರತೀಯ ಸೇನೆಯ ತರಬೇತಿ ವಿಭಾಗದ (ಎಆರ್‍ಟಿಆರ್‍ಈಸಿ) ಮುಖ್ಯಸ್ಥರಾದ ಲೆಫ್ಟಿನೆಂಟ್ ಜನರಲ್ ಪಿ.ಸಿ.ತಿಮ್ಮಯ್ಯ ಕಳೆದ ಏಪ್ರಿಲ್ 30ರಂದು ನಿವೃತ್ತಿ ಹೊಂದಿದರು. ಕೊಡಗು ಜಿಲ್ಲೆಯವರಾದ ಪಟ್ಟಚೆರುವಂಡ ಚೆಂಗಪ್ಪ ತಿಮ್ಮಯ್ಯ ನವೆಂಬರ್ 1, 2018ರಂದು ಈ ಹುದ್ದೆಗೇರಿದ್ದು ಕೊಡಗಿನ ಸೈನಿಕ ಪರಂಪರೆಗೆ ಮತ್ತೊಂದು ಗರಿ ಮೂಡಿದಂತಾಗಿತ್ತು.

ಏಪ್ರಿಲ್ 4, 1960ರಂದು ಕೊಡಗಿನ ವಿರಾಜಪೇಟೆ ತಾಲೂಕಿನ ಚೆಟ್ಟಳ್ಳಿಯಲ್ಲಿ ಜನಿಸಿದ ಲೆ.ಜ. ತಿಮ್ಮಯ್ಯ ಅವರು ಪಟ್ಟಚೆರುವಂಡ ಪೆÇನ್ನಪ್ಪ ಚೆಂಗಪ್ಪ ಹಾಗೂ ಗೌರು ಚೆಂಗಪ್ಪ ಅವರ ಪುತ್ರ. ಭುವನೇಶ್ವರದ ಸೈನಿಕ ಶಾಲೆ, ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಡೆಹ್ರಾಡೂನಿನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ ತಿಮ್ಮಯ್ಯ ಇಂಡಿಯನ್ ಮಿಲಿಟರಿ ಅಕಾಡೆಮಿಯ ಪ್ರತಿಷ್ಠಿತ ಸೋರ್ಡ್ ಆಫ್ ಆನರ್ ಪುರಸ್ಕೃತರಾಗಿದ್ದಾರೆ.

1981ರಲ್ಲಿ ಸೇನೆಯಲ್ಲಿ ವೃತ್ತಿ ಆರಂಭಿಸಿ ದೇಶದ ಪಶ್ಚಿಮ ಹಾಗೂ ಪೂರ್ವ ಸೇನಾ ವಲಯಗಳಲ್ಲಿ ಕಾರ್ಯನಿರ್ವಹಿಸಿರುವ ತಿಮ್ಮಯ್ಯ ಅವರು ಜನವರಿ 5, 2017ರಂದು ಲೆಫ್ಟಿನೆಂಟ್ ಜನರಲ್ ಹುದ್ದೆಗೇರಿದ ಬಳಿಕ ಬಾಂಗ್ಲಾದೇಶ ಹಾಗು ಅಂಗೋಲ ದೇಶಗಳಲ್ಲಿ ವಿಶ್ವಸಂಸ್ಥೆಯ ರಾಯಭಾರ ಮಂಡಳಿಯಲ್ಲಿ ಸೇವೆ ಸಲ್ಲಿಸಿದರು.

ಪರಮ ವಿಶಿಷ್ಟ ಸೇವಾ ಪದಕ ಮತ್ತು ವಿಶಿಷ್ಟ ಸೇವಾ ಪದಕಗಳನ್ನು ಪಡೆದಿರುವ ತಿಮ್ಮಯ್ಯ ತಮ್ಮ ನಿವೃತ್ತಿಯ ಬಳಿಕ ಮೈಸೂರಿನಲ್ಲಿ ನೆಲೆಗೊಳ್ಳುವ ಆಕಾಂಕ್ಷೆ ವ್ಯಕಪಡಿಸಿದ್ದಾರೆ. `ಮೈಸೂರು ಮಿತ್ರ’ದೊಂದಿಗೆ ಮಾತನಾಡಿದ ಮೈಸೂರಿನ ವಿ-ಕೇರ್ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷರಾದ ಮಂಡೆತಿರ ಸುಬ್ರಮಣಿ “ತಿಮ್ಮಯ್ಯ ಅವರು ಈಗ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದಾರೆ. ಮೈಸೂರಿನಲ್ಲಿಯೇ ಇದ್ದು ಮೈಸೂರು ಹಾಗೂ ಸುತ್ತಮುತ್ತಲಿನ ಊರುಗಳಲ್ಲಿರುವ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ನೆರವಾಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ” ಎಂದು ತಿಳಿಸಿದರು.

ನೀನಾ ತಿಮ್ಮಯ್ಯ ಅವರನ್ನು ವಿವಾಹವಾಗಿರುವ ತಿಮ್ಮಯ್ಯ ಅವರಿಗೆ ಇಬ್ಬರು ಮಕ್ಕಳಿದ್ದು. ಒಬ್ಬ ಮಗ ಅಕ್ಷಯ್ ಮಾಸ್ ಕಮ್ಯುನಿಕೇಷನ್ ಶಿಕ್ಷಣ ಪಡೆಯುತ್ತಿದ್ದು, ಮತ್ತೊಬ್ಬ ಮಗನಾದ ಅರ್ಜುನ್ ಭಾರತೀಯ ನೌಕಾಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Translate »