ಸೋಂಕಿತನ ಸಂಪರ್ಕ: ನಂ.ಗೂಡು ಗ್ರಾಮಾಂತರ ಠಾಣೆಯಲ್ಲಿ ಎಚ್ಚರ!
ಮೈಸೂರು

ಸೋಂಕಿತನ ಸಂಪರ್ಕ: ನಂ.ಗೂಡು ಗ್ರಾಮಾಂತರ ಠಾಣೆಯಲ್ಲಿ ಎಚ್ಚರ!

June 18, 2020

ನಂಜನಗೂಡು, ಜೂ.17(ರವಿ)-ಕೊರೊನಾ ಪ್ರಥಮ ಸಂಪರ್ಕ ಹೊಂದಿದ್ದ ವ್ಯಕ್ತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಸ್ಯಾನಿ ಟೈಸ್ ಮಾಡಿ, ಸಾರ್ವಜನಿಕರು ಅನಗತ್ಯವಾಗಿ ಠಾಣೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ. ಕೊರೊನಾ ಸೋಂಕಿತ ವ್ಯಕ್ತಿ ಠಾಣೆಗೆ ಭೇಟಿ ನೀಡಿರಲಿಲ್ಲ ಎಂದು ಸ್ಪಷ್ಟಪಡಿಸಿದ ಡಿವೈ ಎಸ್‍ಪಿ ಪ್ರಭಾಕರರಾವ್ ಶಿಂಧೆ, ಆದರೆ ಸೋಂಕಿತನ ಜೊತೆ ಕಳೆದ 2 ದಿನಗಳ ಹಿಂದೆ ಪಾರ್ಟಿ ಮಾಡಿದ್ದ ವ್ಯಕ್ತಿಗಳಲ್ಲಿ ಓರ್ವ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಎಂಬ ಮಾಹಿತಿ ಬಂದಿದೆ. ನಮಗೆ ಬಂದಿರುವ ಮಾಹಿತಿ ಖಚಿತವಾಗಿಲ್ಲ ವಾದರೂ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿವರ: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಬಿಎಂಟಿಸಿ ನೌಕರ ತಾಲೂಕಿನ ಹುರಾ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಸತಿ ಗೃಹದಲ್ಲಿರುವ ಪತ್ನಿ ಮನೆಗೆ ಕಳೆದ ಗುರುವಾರ ಬಂದು ತಂಗಿದ್ದ. ಆತನಿಗೆ ಭಾನುವಾರ ವಿಪರೀತ ಜ್ವರ ಕಾಣಿಸಿಕೊಂಡಿದ್ದು, ಸೋಮ ವಾರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಆ ವೇಳೆ ವೈದ್ಯರು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದರು. ಈ ಬಿಎಂಟಿಸಿ ನೌಕರನಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ಈತ ಹುರಾ ಗ್ರಾಮದಲ್ಲಿ ಅಡ್ಡಾ ಡಿದ್ದಲ್ಲದೆ, ತನ್ನ ಸ್ನೇಹಿತರ ಜೊತೆ ಪಾರ್ಟಿ ಮಾಡಿದ್ದ ಎಂದು ಹೇಳಲಾಗಿದೆ. ಸೋಂಕು ದೃಢಪಡುತ್ತಿದ್ದಂತೆಯೇ ಅಧಿಕಾರಿಗಳು ಆತನ ಮೊಬೈಲ್‍ಗೆ ಕರೆ ಮಾಡಿದಾಗ ತಾನು ಎಲ್ಲಿದ್ದೇನೆ ಎಂಬುದರ ಬಗ್ಗೆ ನಿಖರವಾಗಿ ತಿಳಿಸಲು ಸತಾಯಿಸಿದ ಆತ, ಎರಡು ಗಂಟೆ ಬಳಿಕ ಹುಲ್ಲಹಳ್ಳಿ ರಸ್ತೆಯ ಬಸವೇಶ್ವರ ದೇವಾಲಯದ ಬಳಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಈ ಮಧ್ಯೆ ಸೋಂಕಿತನ ಜೊತೆ ಪಾರ್ಟಿ ಮಾಡಿದ್ದ ವ್ಯಕ್ತಿಯೋರ್ವ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. ಸೋಂಕಿತನ ಪ್ರಥಮ ಸಂಪರ್ಕದ ವ್ಯಕ್ತಿ ಠಾಣೆಗೆ ಭೇಟಿ ನೀಡಿ ರುವುದು ಖಚಿತವಾಗಿಲ್ಲವಾದರೂ, ಠಾಣೆಯನ್ನು ಸ್ಯಾನಿಟೈಸ್ ಮಾಡಿ ಸಾರ್ವಜನಿಕರು ಅನಗತ್ಯವಾಗಿ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂದಿಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

Translate »