ಮೇಕ್ ಇನ್ ಇಂಡಿಯಾದಿಂದ ಮಾಹಿತಿ  ತಂತ್ರಜ್ಞಾನ ಪ್ರಗತಿಗೆ ನಾಂದಿ ಹಾಡಿದೆ
ಮೈಸೂರು

ಮೇಕ್ ಇನ್ ಇಂಡಿಯಾದಿಂದ ಮಾಹಿತಿ  ತಂತ್ರಜ್ಞಾನ ಪ್ರಗತಿಗೆ ನಾಂದಿ ಹಾಡಿದೆ

August 30, 2018
  •  ರಾಣೆ(ಮದ್ರಾಸ್) ಉಪಾಧ್ಯಕ್ಷ(ಕಾರ್ಯಾಚರಣೆ) ಸತೀಶ್‍ಕುಮಾರ್ ಅಭಿಮತ
  • ಇದು ತಳಮಟ್ಟದವರಿಗೆ ಉದ್ಯೋಗಾವಕಾಶವನ್ನು ಸ್ಥಾಪಿಸಿದೆ

ಮೈಸೂರು: – ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನವು ಸಮಾಜದ ತಳಮಟ್ಟದವರಿಗೆ ಉದ್ಯೋಗಾವಕಾಶ ದೊರೆಯುವಂತೆ ಮಾಡಿದ್ದು, ಅದೇ ರೀತಿ ಡಿಜಿಟಲ್ ಇಂಡಿಯಾ ಮಾಹಿತಿ ತಂತ್ರಜ್ಞಾನದ ಪ್ರಗತಿಗೆ ನಾಂದಿ ಹಾಡಿದೆ ಎಂದು ರಾಣೆ (ಮದ್ರಾಸ್) ಲಿಮಿಟೆಡ್ ಕಂಪನಿಯ ಕಾರ್ಯಾಚರಣೆ ವಿಭಾಗದ ಉಪಾಧ್ಯಕ್ಷ ಡಿ.ಸತೀಶ್ ಕುಮಾರ್ ಹೇಳಿದರು.

ಮೈಸೂರು ವಿವಿಯ ಸಾಮಾಜಿಕ ಹೊರಗುಳಿವಿಕೆ ಹಾಗೂ ಒಳಗೊಳ್ಳುವಿಕೆ ನೀತಿ ಅಧ್ಯಯನ ಕೇಂದ್ರದ (ಸಿಎಸ್‍ಎಸ್‍ಇಐಪಿ) ವತಿಯಿಂದ ವಿವಿಯ ವಿಜ್ಞಾನ ಭವನದ ಹಾಲ್‍ನಲ್ಲಿ `ಮೇಕ್ ಇನ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾ: ಒಳಗೊಳ್ಳುವ ಬೆಳವಣಿಗೆಗಾಗಿ ಸಬಲೀಕರಣ ಮತ್ತು ಪರಿವರ್ತನೆ’ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಿಂದ ಈ ಎರಡು ಕಾರ್ಯಕ್ರಮಗಳು ಚಾಲ್ತಿಯಲ್ಲಿದ್ದು, ಇದರ ಬಗ್ಗೆ ಪ್ರಚುರಪಡಿಸಲು ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನಿಸಿ ಯಶಸ್ವಿಯೂ ಆಗಿದೆ. ಮೇಕ್ ಇನ್ ಇಂಡಿಯಾದಿಂದ ಸಮಾಜದ ತಳಮಟ್ಟದವರಿಗೆ ಉದ್ಯೋಗ ದೊರೆಯಲು ಸಹಕಾರಿಯಾಗಿದೆ. ಅಂತೆಯೇ ಡಿಜಿಟಲ್ ಇಂಡಿಯಾದಿಂದ ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳಲು ಉತ್ತೇಜನ ದೊರೆತಿದೆ. ಆ ಮೂಲಕ ಅನೇಕ ಸೇವೆಗಳು ತ್ವರಿತಗತಿಯಲ್ಲಿ ಲಭ್ಯವಾಗಲು ಸಾಧ್ಯವಾಗಿದೆ. ದೇಶದ ಹಲವು ಗ್ರಾಮೀಣ ಪ್ರದೇಶದಲ್ಲೂ ತಂತ್ರಜ್ಞಾನದ ಛಾಪು ಮೂಡುವಂತೆ ಆಗಿದ್ದು, ಸಂಪರ್ಕ ಮತ್ತು ಮಾಹಿತಿ ವಿನಿಮಯದಲ್ಲಿ ಸುಧಾರಣೆ ಆಗಿದೆ ಎಂದು ನುಡಿದರು.

ಮೇಕ್ ಇನ್ ಇಂಡಿಯಾವು ಉತ್ಪಾದನಾ ವಲಯ ಸೇರಿದಂತೆ 25 ವಲಯಗಳಿಗೆ ವ್ಯಾಪಿಸುವಂತೆ ಮಾಡಲಾಗಿದೆ. ಈ ಕಾರ್ಯಕ್ರಮದಿಂದ ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಕ್ಕೂ ಕೈಗಾರಿಕೆಗಳ ಆರಂಭಕ್ಕೆ ನಾಂದಿ ಹಾಡಿದಂತಾಗಿದೆ. ಇದರಿಂದ ಉದ್ಯೋಗಾವಕಾಶಗಳು ತಳಮಟ್ಟದವರಿಗೆ ದೊರೆಯುತ್ತಿದ್ದು, ಆ ಮೂಲಕ ಅವರು ಸ್ವಾವಲಂಬನೆಗೆ ವೇದಿಕೆ ಕಲ್ಪಿಸಲಾಗಿದೆ. ನಿಜವಾದ ಅರ್ಥದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ವರಾಜ್ ಪರಿಕಲ್ಪನೆ ಇದೇ ಎನ್ನಬಹುದು ಎಂದು ಅಭಿಪ್ರಾಯಪಟ್ಟರು.

ವಿವಿಧ ಕ್ಷೇತ್ರದ ಕಂಪನಿಗಳು ಭಾರತದಲ್ಲಿ ತಮ್ಮ ಘಟಕಗಳನ್ನು ಆರಂಭಿಸಲು ಮೇಕ್ ಇನ್ ಇಂಡಿಯಾ ಕಾರಣವಾಗಿದ್ದು, ಸೌರಶಕ್ತಿ, ವಿದ್ಯುಚ್ಛಕ್ತಿ, ವಸ್ತ್ರಾಭರಣ ಸೇರಿದಂತೆ ಇನ್ನಿತರೆ ಕೈಗಾರಿಕೆಗಳು ಬೆಳವಣಿಗೆಯಾಗುತ್ತಿವೆ. ಜೊತೆಗೆ ಈ ಕಾರ್ಯಕ್ರಮದಡಿ ಮೊದಲ ಕೈಗಾರಿಕೆಗಳಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡಲು ಆದ್ಯತೆ ನೀಡಲಾಗಿದೆ. ಹೀಗಾಗಿ ವಾಸಸ್ಥಳದಿಂದ ನೂರಾರು ಕಿ.ಮೀ.ವರೆಗೆ ಪ್ರಯಾಣ ಮಾಡಬೇಕಿದ್ದ ಪರಿಸ್ಥಿತಿ ಹಂತ-ಹಂತವಾಗಿ ಕಡಿಮೆಯಾಗಲಿದೆ ಎಂದರು.

ಇದೇ ವೇಳೆ ಸನ್ಮಾನ ಸ್ವೀಕರಿಸಿದ ಸಿಎಸ್‍ಎಸ್‍ಇಐಪಿ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಮೈಸೂರು ವಿವಿ ಕಾನೂನು ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಮಾತನಾಡಿ, ಹೆಣ್ಣು ಮಕ್ಕಳ ನಾಪತ್ತೆ ಪ್ರಕರಣಗಳ ಸಂಬಂಧ ವರದಿ ಸಿದ್ಧಪಡಿಸಿ ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ ಕೀರ್ತಿಗೆ ಸಿಎಸ್‍ಎಸ್‍ಇಐಪಿ ಕೇಂದ್ರ ಭಾಜನವಾಗಿದೆ. ನಾನು ಈ ಕೇಂದ್ರದ ನಿರ್ದೇಶಕನಾಗಿ ಐದು ವರ್ಷಗಳು ಸೇವೆ ಸಲ್ಲಿಸಿದ್ದು, ಎಲ್ಲರ ಸಹಕಾರದಿಂದ ನಿರೀಕ್ಷಿತ ಮಟ್ಟಕ್ಕೆ ಕೇಂದ್ರ ಬೆಳೆದಿದೆ ಎಂದರು.

ಕೇಂದ್ರಕ್ಕೆ ಅಗತ್ಯ ನೆರವು ನೀಡಿ: ದೇಶದಲ್ಲಿ ಒಟ್ಟು 44 ಸಿಎಸ್‍ಎಸ್‍ಇಐಪಿ ಕೇಂದ್ರಗಳು ಇದ್ದು, ಇವುಗಳ ಪೈಕಿ ಮೈಸೂರು ವಿವಿ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಪ್ರಥಮ ಸ್ಥಾನದಲ್ಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಸಿಎಸ್‍ಎಸ್‍ಇಐಪಿ ಕೇಂದ್ರದ ಬಗ್ಗೆ ಯುಜಿಸಿ ಪ್ರಶಂಸೆ ವ್ಯಕ್ತಪಡಿಸಿದೆ. ಹೀಗಾಗಿ ಈ ಕೇಂದ್ರದ ಪ್ರಗತಿಗೆ ವಿಶ್ವವಿದ್ಯಾನಿಲಯ ಅಗತ್ಯ ನೆರವು ನೀಡಬೇಕೆಂದು ಮನವಿ ಮಾಡಿದರು.

ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗಿ: ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಕೌನ್ಸಿಲ್‍ನ ಅನುದಾನದಲ್ಲಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಮಹಾಜನ ಕಾಲೇಜು, ಜೆಎಸ್‍ಎಸ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ಎಂ.ಕಾಂ, ಎಂಬಿಎ ವಿದ್ಯಾರ್ಥಿಗಳು 100ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದೆ. ಮೈರಾ ಸ್ಕೂಲ್ ಆಫ್ ಬಿಸಿನೆಸ್‍ನ ಸಹಾಯಕ ಡೀನ್ ಡಾ.ಅಭಿನಂದನ್ ಸರ್ಕಾರ್, ಮೈಸೂರು ವಿವಿ ಕುಲಸಚಿವ (ಆಡಳಿತ) ಪ್ರೊ.ಆರ್.ರಾಜಣ್ಣ, ಕೇಂದ್ರದ ಪ್ರಭಾರ ನಿರ್ದೇಶಕ ಡಾ.ಡಿ.ಸಿ.ನಂಜುಂಡ ಮತ್ತಿತರರು ಹಾಜರಿದ್ದರು.

ಯುರೋಪ್ ದೇಶಗಳಲ್ಲಿ 10 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸಲ್ಲ
ಯುರೋಪ್‍ನ ಹಲವು ದೇಶಗಳಲ್ಲಿ ಉದ್ಯೋಗಸ್ಥರು ತಮ್ಮ ವಾಸಸ್ಥಳದಿಂದ ನೂರಾರು ಕಿ.ಮೀ. ಸಾಗಿ ಕೆಲಸ ಮಾಡುವ ಜಾಗ ತಲುಪುವ ಸನ್ನಿವೇಶವಿಲ್ಲ. 10 ಕಿ.ಮೀ.ಗಿಂತ ಹೆಚ್ಚು ಅವರು ಪ್ರಯಾಣಿಸುವುದಿಲ್ಲ. ಕಾರಣ ಅವರು ವಾಸಿಸುವ ಸ್ಥಳಕ್ಕೆ ಸಮೀಪವೇ ಕೈಗಾರಿಕೆಗಳು ಇರುತ್ತವೆ. ಇದಕ್ಕೆ ಕಾರಣ ಉದ್ದಿಮೆಗಳನ್ನು ಸ್ಥಾಪನೆ ಮಾಡುವ ಮುನ್ನ ವಸತಿ ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಸಜ್ಜುಗೊಳಿಸಲಾಗುತ್ತದೆ. ಅದೇ ರೀತಿ ಚೀನಾ ದೇಶವೂ ಮೂಲ ಸವಲತ್ತುಗಳನ್ನು ವ್ಯವಸ್ಥೆ ಮಾಡಿದ ಬಳಿಕವಷ್ಟೇ ಉದ್ದಿಮೆ ಸ್ಥಾಪನೆ ಮಾಡುವ ನೀತಿಯನ್ನು ಅಳವಡಿಸಿಕೊಂಡಿದೆ. ಇದೀಗ ಅದೇ ಮಾದರಿಯಲ್ಲಿ ಮೇಕ್ ಇನ್ ಇಂಡಿಯಾ ಮುನ್ನಡೆದಿದೆ.
-ಡಿ.ಸತೀಶ್ ಕುಮಾರ್

Translate »