ಶಿರಾಡಿಘಾಟ್ ರಸ್ತೆ ಸಂಚಾರ ಇನ್ನೂ 6 ತಿಂಗಳು ಅಸಾಧ್ಯ
ಹಾಸನ

ಶಿರಾಡಿಘಾಟ್ ರಸ್ತೆ ಸಂಚಾರ ಇನ್ನೂ 6 ತಿಂಗಳು ಅಸಾಧ್ಯ

August 30, 2018

ಹಾಸನ:  ತೀವ್ರ ಮಳೆಯಿಂದಾಗಿ ಶಿರಾಡಿಘಾಟ್ ರಸ್ತೆ ಬಹುತೇಕ ಹಾಳಾಗಿದ್ದು, ಇನ್ನು 6 ತಿಂಗಳು ಸಂಚಾರ ಅಸಾಧ್ಯ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದರು.

ಖಾಸಗಿ ಹೋಟೆಲೊಂದರಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಎರಡುವರೆ ತಿಂಗಳಿನಿಂದ ನಿರಂತರ ವಾಗಿ ಮಳೆ ಸುರಿಯುತ್ತಿದ್ದು, ಅಪೂರ್ಣಗೊಂಡಿರುವ ಶಿರಾಡಿ ಘಾಟ್ ರಸ್ತೆ ಕಾಮಗಾರಿ ಪ್ರಾರಂಭಿಸಲು ಸಾಧ್ಯವಿಲ್ಲ. ಮಳೆ ನಿಲ್ಲುವವರೆಗೂ ಮಡಿಕೇರಿ-ಮಂಗಳೂರು ಹಾಗೂ ಶಿರಾಡಿ ಮಾರ್ಗದಲ್ಲಿ ಯಾವ ವಾಹನ ಸಂಚರಿಸಲು ಸಾಧ್ಯವಾಗುವುದಿಲ್ಲ ಎಂದರು.

ಅಪಾರ ಮಳೆಗೆ ಜಿಲ್ಲೆಯಲ್ಲಿ ಕಾಫಿ, ಭತ್ತ, ಆಲೂಗಡ್ಡೆ ಸಂಪೂರ್ಣ ನಷ್ಟ ವಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕಳೆದ ಮೇಲೆ ಸೂಕ್ತಪರಿಹಾರಕ್ಕೆ ಚಿಂತನೆ ನಡೆಸಲಾಗುವುದು. ಸಕಲೇಶಪುರ ಬೇಲೂರು, ಅರಕಲಗೂಡು ಭಾಗದಲ್ಲಿ ಹೆಚ್ಚು ಹಾನಿಯಾಗಿದೆ.

ಮಳೆಯಿಂದ ರಸ್ತೆಗಳು, ಸೇತುವೆಗಳಿಗೆ ಹಾನಿಯಾಗಿದ್ದು, 7,000 ಹೆಕ್ಟೇರ್ ಪ್ರದೇಶದ ಬೆಳೆನಷ್ಟವಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಮಳೆ ಕೊರತೆ ಕಾಡುತ್ತಿದ್ದು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಕ್ರಮ ವಹಿಸಲಾಗುವುದು. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಏಳು ಜಿಲ್ಲೆಗಳಲ್ಲಿ ಮಳೆಯಿಂದ ತೀವ್ರ ಹಾನಿಗೀಡಾಗಿವೆ ಬಿಸಿಲೆ ರಸ್ತೆ ದುರಸ್ತಿಗೆ ಕನಿಷ್ಠ 2 ವರ್ಷ ಕಾಲ ಸಮಯ ಅಗತ್ಯವಿದೆ. ಸಕಲೇಶಪುರ. ಸೋಮವಾರಪೇಟೆ ರಸ್ತೆ ದುರಸ್ತಿಗೆ ಸಾಕಷ್ಟು ಸಮಯ ಅಗತ್ಯವಿದ್ದು, ಪರ್ಯಾಯ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಕಲೇಶಪುರ ತಾಲೂಕಿನ ಯಡಕುಮಾರಿ ಹಾಗೂ ಕಡವರಹಳ್ಳಿಯ ಬಳಿ ಹೆಚ್ಚಿನ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ತಡರಾತ್ರಿಯೂ ಕೂಡ ಒಂದೆರಡು ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ. ರೈಲ್ವೆ ಇಲಾಖೆ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ರೈಲ್ವೆ ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿದೆ. ರೈಲು ಸಂಚಾರ ಆರಂಭಿಸುವ ಮುನ್ಸೂಚನೆ ನೀಡುವ ಮುನ್ನವೇ ಮತ್ತೆ ತಡರಾತ್ರಿ ಗುಡ್ಡ ಕುಸಿತವಾಗಿರುವುದರಿಂದ ಮತ್ತಷ್ಟು ದಿನ ಬೆಂಗಳೂರು- ಮಂಗಳೂರು ರೈಲು ಸಂಚಾರ ವಿಳಂಬವಾಗಲಿದೆ. ಹವಮಾನ ಸಹಕರಿಸಿದರೆ ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಬಿಜೆಪಿ ಮುಖಂಡರು ಭಾಷಣ ಬಿಗಿಯುವುದು ಬಿಟ್ಟು ಇಲ್ಲಿನ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆಯಲಿ ಎಂದು ರೇವಣ್ಣ, ಬಿಜೆಪಿ ಶಾಸಕರು, ಜಿಲ್ಲಾಧ್ಯಕ್ಷರ ಆರೋಪಕ್ಕೆ ಉತ್ತರ ನೀಡಲು ಹೋದರೇ ನಾವು ಪೊಳ್ಳಾಗುತ್ತೆವೆ ಎಂದು ತಿರುಗೇಟು ನೀಡಿದರು.

Translate »