ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ, ಪ್ರಜ್ವಲ್ ಕಾರಣ..!: ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರೀತಂ ಜೆ.ಗೌಡ ಆರೋಪ
ಹಾಸನ

ದೇವೇಗೌಡರ ಸೋಲಿಗೆ ರೇವಣ್ಣ, ಭವಾನಿ, ಪ್ರಜ್ವಲ್ ಕಾರಣ..!: ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರೀತಂ ಜೆ.ಗೌಡ ಆರೋಪ

May 26, 2019

ಹಾಸನ: ಗೌಡರ ಕುಟುಂಬದ ಕಿಚನ್ ಕ್ಯಾಬಿನೆಟ್‍ನಲ್ಲಿ ತೀರ್ಮಾನ ಮಾಡಿ, ದೇವೇಗೌಡರನ್ನು ತುಮಕೂರಿಗೆ ಕಳುಹಿಸಲಾಯಿತು. ದೇವೇಗೌಡರ ಸೋಲಿಗೆ ಸಚಿವ ಹೆಚ್.ಡಿ.ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಹಾಗೂ ನೂತನ ಸಂಸದರಾಗಿ ಆಯ್ಕೆಗೊಂಡಿರುವ ಪ್ರಜ್ವಲ್ ಅವರೇ ಕಾರಣ ಎಂದು ಶಾಸಕ ಪ್ರೀತಂ ಜೆ.ಗೌಡ ಆರೋಪಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಜನರು ದೇವೇಗೌಡರು ಸ್ಪರ್ಧಿಸಬೇಕು ಎಂದು ಆಸೆ ಪಟ್ಟಿದ್ದರು. ಆದರೆ, ಕುಟುಂಬ ರಾಜ ಕಾರಣ ವಿಸ್ತಾರ ಮಾಡುವುದಕ್ಕೆ ಹೋಗಿ ಯಡವಟ್ಟು ಮಾಡಿಕೊಂಡರು ಎಂದರು.

ಜೆಡಿಎಸ್ ರಾಜಕೀಯ ತಂತ್ರಗಾರಿಕೆ ಯಶಸ್ವಿಯಾಗಿದ್ದು, ನಮ್ಮ ತಂತ್ರಗಾರಿಕೆ ವಿಫಲವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನೂತನ ಸಂಸದರು ರಾಜೀನಾಮೆ ಕೊಡಬೇಕು ಎಂಬ ಆಸೆ ಏನಿದೆ ಅದಕ್ಕೆ ಮೊದಲು ಸಂಸದರಾಗಿ ವಾಡಿಕೆಯಂತೆ ಪ್ರಮಾಣ ವಚನ ಸ್ವೀಕರಿಸ ಬೇಕು. ಸ್ಪೀಕರ್ ಮುಂದೆ ರಾಜೀನಾಮೆ ಸಲ್ಲಿಸಬೇಕು. ಅದನ್ನು ಬಿಟ್ಟು ಮಾಧ್ಯಮದ ಮುಂದೆ, ಪಕ್ಷದ ನಾಯಕರ ಮುಂದೆ ರಾಜೀನಾಮೆ ಮಾತನಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ. ಅದು ಅವರ ಕುಟುಂಬದ ಆಂತರಿಕ ವಿಚಾರವಾಗು ವುದರಿಂದ ಅದಕ್ಕೆ ನಾನು ಹೆಚ್ಚು ಪ್ರತಿಕ್ರಿಯಿಸುವುದಿಲ್ಲ ಎಂದರು.

ಲೋಕಸಭೆ ಚುನಾವಣೆಯಲ್ಲಿ ಹೆಚ್.ಡಿ.ದೇವೇಗೌಡರು ಹಾಸನದಿಂದ ಸ್ಪರ್ಧೆ ಮಾಡಬೇಕು ಎಂಬುದು ಇಡೀ ಜಿಲ್ಲೆ ಜನದ ಆಸೆಯಾಗಿತ್ತು. ಇದರ ವಿರುದ್ಧವಾಗಿ ಕುಟುಂಬ ರಾಜಕಾರಣ ಕ್ಕಾಗಿ 3ನೇ ತಲೆಮಾರು ಸ್ಥಾಪನೆ ಮಾಡಬೇಕೆಂದು ಕಿಚನ್ ಪಾರ್ಲಿಮೆಂಟ್ ನಿರ್ಧರಿಸುತ್ತದೆ. ದೇವೇಗೌಡರು ವಲಸೆ ಹೋಗಬೇಕು ಎಂಬುದು. ಈ ತೀರ್ಮಾ ನಕ್ಕೆ ಕಾರ್ಯಕರ್ತರ ಮತ್ತು ನಾಯಕರ ಒಪ್ಪಿಗೆ ಇರುವುದಿಲ್ಲ. ಈ ಸಂಬಂಧ ಯಾವುದೇ ಸಭೆ ನಡೆದಿರುವುದಿಲ್ಲ. ದೇವೇಗೌಡರು ಎಂದರೇ ಒಂದು ಪಕ್ಷಕ್ಕೆ, ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ದೇಶದ, ರಾಜ್ಯದ ಮತ್ತು ಜಿಲ್ಲೆಯ ಆಸ್ತಿ. ಇಂತಹವರು ಎಲ್ಲಿ ನಿಲ್ಲಬೇಕು ಎಂಬುದನ್ನು ಅವರ ಕುಟುಂಬ ತೀರ್ಮಾನ ಮಾಡಿದೆ ಎಂದರೇ ಅತ್ಯಂತ ಅವಮಾನ ಕರವಾಗಿದೆ ಎಂದು ಜನತೆ ಹೇಳುತ್ತಿದ್ದಾರೆ. ನಾವು ಹೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸನದಲ್ಲಿ ಮಹಾಘಟಬಂಧನ್‍ಗೆ ಗೆಲುವು: ದೇಶದಲ್ಲಿ ಎಲ್ಲಿಯೂ ಮಹಾ ಘಟಬಂಧನ್ ಯಶಸ್ವಿಯಾಗಿಲ್ಲ. ಆದರೆ ಹಾಸನ ಕ್ಷೇತ್ರದಲ್ಲಿ ಅದರಿಂದ ಜೆಡಿಎಸ್‍ಗೆ ಲಾಭವಾಯಿತು. ಮೈತ್ರಿ ಪಕ್ಷಗಳ ನಾಯ ಕರು, ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಿದರು. ಹೀಗಾಗಿ ನಮಗೆ ಇಲ್ಲಿ ಸೋಲಾ ಯಿತು ಎಂದು ಪ್ರೀತಂ ವಿಶ್ಲೇಷಿಸಿದರು.

ಬಿಜೆಪಿ ಇಲ್ಲಿ ಸೋಲು ಕಂಡಿದ್ದರೂ ಮತಗಳಿಕೆಯಲ್ಲಿ ದಾಪುಗಾಲಿಟ್ಟಿದೆ. 2014ರ ಚುನಾವಣೆಯಲ್ಲಿ ದೇಶಾದ್ಯಂತ ಮೋದಿ ಅಲೆಯಿದ್ದ ಸಮಯದಲ್ಲಿಯೂ ಬಿಜೆಪಿ ಕೇವಲ 1.65 ಲಕ್ಷ ಮತ ಗಳಿಸಿತ್ತು. ಈ ಬಾರಿ 5.35 ಲಕ್ಷ ಮತ ಗಳಿಸಿದೆ. ಜಿಲ್ಲೆ ಯಲ್ಲಿ ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ನಡೆಸಿದೆ. ನಾವು ಪರಾಭವ ಗೊಂಡಿದ್ದರೂ ಹತಾಶರಾಗುವ ಫಲಿ ತಾಂಶವೇನೂ ಬಂದಿಲ್ಲ ಎಂದರು.

ದೇಶಾದ್ಯಂತ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಿ ನೋಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಹಾಸನವೂ ಹೊರತಾಗಿಲ್ಲ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕಳೆದು ಹೋಗಿತ್ತು. ಈ ಬಾರಿ ನಾಪತ್ತೆಯಾಗಿದೆ. ಕಳೆದು ಹೋದ ವರನ್ನು ಹುಡುಕಬಹುದು. ನಾಪತ್ತೆಯಾದ ವರನ್ನು ಎಲ್ಲಿಯೂ ಕಾಣಲು ಸಾಧ್ಯವಾಗು ವುದಿಲ್ಲ ಎಂದು ವ್ಯಂಗ್ಯವಾಡಿದರು.

ಆಪರೇಷನ್ ಬಗ್ಗೆ ಮಾತನಾಡಲ್ಲ: ಆಪ ರೇಷನ್ ಕಮಲ ಆಡಿಯೋ ವಿಚಾರ ನ್ಯಾಯಾಲಯದಲ್ಲಿದೆ. ಅದರಲ್ಲಿರುವ ಧ್ವನಿ ನನ್ನದಲ್ಲ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ, ನಿಂಬೆ ಹಣ್ಣು ಹಿಡಿದು ಶಾಸ್ತ್ರ ಹೇಳಲು ಜ್ಯೋತಿಷಿಯೂ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಹೆಚ್.ಎಂ.ಸುರೇಶ್ ಕುಮಾರ್, ಪ್ರಸನ್ನಕುಮಾರ್, ವೇಣು ಗೋಪಾಲ್, ಬಸವರಾಜು, ಸದಸ್ಯ ಪ್ರದೀಪ್, ಮೊಗಣ್ಣಗೌಡ ಇತರರು ಉಪಸ್ಥಿತರಿದ್ದರು.

ಮಂಡ್ಯ ಚುನಾವಣೆ: ರೇವಣ್ಣನಿಗೆ ಮ್ಯಾನ್ ಆಫ್ ದಿ ಮ್ಯಾಚ್

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಪಂದ್ಯದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಕೊಡಬೇಕು ಎಂದು ಪ್ರೀತಂ ಗೌಡ ವ್ಯಂಗ್ಯವಾಡಿದರು.

ಮಂಡ್ಯದಲ್ಲಿ ನಿಖಿಲ್ ಸೋಲಿಗೆ ರೇವಣ್ಣ ಕಾರಣ. ಸುಮಲತಾ ಅವರ ಗೆಲುವಿನಲ್ಲಿ ರೇವಣ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಉಡಾಫೆ ಮಾತನ್ನಾಡುವುದನ್ನು ಮೊದಲು ಕಡಿಮೆ ಮಾಡಬೇಕು. ಮೋದಿಯವರ ವಿಚಾರದಲ್ಲಿ ಅವರು ಮಾತನಾಡಿದ್ದಕ್ಕೆ ಬದ್ಧವಾಗಿರಬೇಕು. ಮೋದಿ ಗೆದ್ದರೆ ರಾಜಕೀಯ ಸನ್ಯಾಸತ್ವವನ್ನು ತೆಗೆದುಕೊಳ್ಳುತ್ತೇನೆ ಎಂದಿದ್ದರು. ಅದಕ್ಕಾಗಿ ನಾನು ಕಾಯುತ್ತಿದ್ದೇನೆ ಎಂದು ಪ್ರೀತಂ ಗೌಡ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ನಾಪತ್ತೆ

ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲಿದೆ ಅನ್ನೋದನ್ನು ಹುಡುಕಿ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನವರು ಕಳೆದುಹೋಗಿದ್ದರು. ಆದರೆ, ಈ ಚುನಾವಣೆಯಲ್ಲಿ ಅವರು ನಾಪತ್ತೆಯಾಗಿದ್ದಾರೆ ಎಂದು ಶಾಸಕ ಪ್ರೀತಂ ಗೌಡ ವ್ಯಂಗ್ಯವಾಡಿದ್ದಾರೆ.

ಕಳೆದು ಹೋದರೆ ಹುಡುಕಿಕೊಂಡು ಬರಬಹುದು. ಆದರೆ, ನಾಪತ್ತೆಯಾದವರನ್ನು ಹುಡುಕಲು ಸಾಧ್ಯವಿಲ್ಲ. ಹಾಸನದಲ್ಲೂ ಇದು ಹೊರತಾಗಿಲ್ಲ. ಹಾಸನದಲ್ಲಿ ಬಿಜೆಪಿ ವ್ಯವಸ್ಥಿತವಾಗಿ ಚುನಾವಣೆ ಮಾಡಿದೆ. ಜಿಲ್ಲೆಯಲ್ಲಿ ಹತಾಶವಾಗುವಂತಹ ಫಲಿತಾಂಶ ಬಂದಿಲ್ಲ. ದೇಶದಲ್ಲಿ ಅಭಿವೃದ್ಧಿಯಾಗಬೇಕು ಅಂದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯ. ಮಹಾ ಘಟಬಂಧನ್ ದೇಶದಲ್ಲಿ ವಿಫಲವಾಗಿದೆ. ಹಾಸನದಲ್ಲಿ ಮಾತ್ರ ಅದು ಸಫಲವಾಗಿದೆ. ಹೀಗಾಗಿ ಇಲ್ಲಿ ಜೆಡಿಎಸ್ ಗೆದ್ದಿದೆ ಎಂದು ತಿಳಿಸಿದರು.

Translate »