ಹಾಸನ: ಆಲೂಗಡ್ಡೆ ಬಿತ್ತನೆ ಬೀಜ ವಿತರಣಾ ವ್ಯವಸ್ಥೆ ಯಲ್ಲಿ ಲೋಪ ಉಂಟಾಗಿ, ಗೋಲಿಬಾರ್ ಏನಾದರೂ ಆದರೆ, ಅದಕ್ಕೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರೇ ನೇರ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚುನಾ ವಣೆ ಮುಗಿದು ಹಲವು ದಿನ ಕಳೆದರೂ ರೈತರ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗೆ ಸಮಯ ಇಲ್ಲ. ಬರ ಪರಿಹಾರ ಕಾಮಗಾರಿ ಗಾಗಿ ಸರ್ಕಾರ ಜಿಲ್ಲೆಗೆ 8 ಕೋಟಿ ಬಿಡು ಗಡೆ ಮಾಡಿದೆ. ಅದರಲ್ಲಿ 5 ಕೋಟಿ ಕುಡಿ ಯುವ ನೀರಿಗೆ. ಆದರೆ, ಇವರು ಒಂದು ಬಿಡಿಗಾಸು ಬಿಡುಗಡೆ ಮಾಡಿಲ್ಲ.
ಹಿಂದಿನ ಜಿಲ್ಲಾಧಿಕಾರಿ ನಡೆಸಿರುವ ಸಭೆಯನ್ನು ನೋಡಿ ಕೆಲಸ ಮಾಡಲಿ. ಕೆಲಸ ಮಾಡಲು ಆಗ ದಿದ್ದರೆ ರಜೆ ಹಾಕಿ ಹೋಗಲಿ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ. ಬರ ಪರಿಹಾರ ಕಾಮಗಾರಿ ಪರಿಶೀಲನಾ ಸಭೆ ನಡೆಸಲು ನೀತಿ ಸಂಹಿತೆ ಸಡಿಲಿಸಿದ್ದರೆ ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ಸ್ಪಷ್ಟ ಸೂಚನೆ ನೀಡಬೇಕು. ಬರ ನಿರ್ವಹಣೆಗೆ ಮೊದಲ ಆದ್ಯತೆ ನೀಡುವಂತೆ ಬಿಜೆಪಿಯವರು ಟೀಕಿಸುತ್ತಾರೆ. ಮತ್ತೊಂದು ಕಡೆ ನೀತಿ ಸಂಹಿತೆ ಮುಗಿ ಯವವರೆಗೂ ಸಭೆ ನಡೆಸಲು ಅನುಮತಿ ನೀಡಬಾರದು ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತಾರೆ. ಆಯೋಗ ಅನುಮತಿ ನೀಡದಿದ್ದರೆ ಸಭೆ ನಡೆಸುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ದೇವೇಗೌಡರ ಕುಟುಂಬದವರು ಟೆಂಪಲ್ ರನ್ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ದೇವಸ್ಥಾನಕ್ಕೆ ಭೇಟಿ ನೀಡಬಾರದು ಎಂಬ ನಿಯಮ ಇದೆಯೇ? ಪ್ರಧಾನಿ ನರೇಂದ್ರ ಮೋದಿ ಅವರೇ ಹತ್ತತ್ತು ಪೂಜಾರಿಗಳನ್ನು ಇಟ್ಟುಕೊಂಡು ಪೂಜೆ ಮಾಡುವುದನ್ನು ಟಿವಿಗಳಲ್ಲಿ ತೋರಿಸಲಿಲ್ಲವೇ? ಎಂದು ಜಗದೀಶ್ ಶೆಟ್ಟರ್ ಆರೋಪಕ್ಕೆ ತಿರುಗೇಟು ನೀಡಿದರು.