ತಕ್ಷಣಕ್ಕೆ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ
ಮೈಸೂರು

ತಕ್ಷಣಕ್ಕೆ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ

May 9, 2019

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿದರೆ, ಏನು ಮಾಡಕ್ಕಾಗುತ್ತೆ ಎಂದು ಪ್ರಶ್ನಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಅಡ ಗೂರು ಎಚ್. ವಿಶ್ವನಾಥ್, ಹಗಲುಗನಸು ಕಾಣುತ್ತಿರುವ ಸಿದ್ದರಾಮಯ್ಯ ಮಾತ್ರ ಮುಖ್ಯಮಂತ್ರಿ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಮಾನ ಮನಸ್ಕರು ಸೇರಿದರೂ ಕಾಂಗ್ರೆಸ್ 113ರ ಮ್ಯಾಜಿಕ್ ಸಂಖ್ಯೆ ಮುಟ್ಟಲ್ಲ ಎಂದರು. ಹಾಗಾಗಿ ತಕ್ಷಣಕ್ಕೆ ಸಿದ್ದ ರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ, ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವ್ಯಂಗ್ಯವಾಗಿ ನುಡಿದರು.

ದೋಸ್ತಿ ಫೈಟ್ ಲೋಕಸಭೆಗೆ ಮಾತ್ರ ಸೀಮಿತ, ಸ್ಥಳೀಯ ಸಂಸ್ಥೆ ಚುನಾವಣೆಗೆ ಇಲ್ಲ. ಮೊದಲ ಹಂತದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ನಾವು ಮೈತ್ರಿ ಮಾಡಿಕೊಳ್ಳಲಿಲ್ಲ. ಚುನಾವಣೆ ನಂತರ ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯ ಬಿದ್ದರೆ ಅಧಿಕಾರ ಹಂಚಿ ಕೊಳ್ಳುತ್ತೇವೆ ಎಂದು ಸ್ಪಷ್ಟ ಪಡಿಸಿದರು.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜೆಡಿಎಸ್, ಬಿಜೆಪಿಯ ‘ಬಿ’ ಟೀಂ ಎಂದು ನಿರಂತರವಾಗಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಆರೋಪ ಮಾಡಿದ್ದರಿಂದಲೇ ಬಿಜೆಪಿ 104 ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ಬಹಳ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿಶ್ವನಾಥ್, ಚುನಾವಣೆಯಲ್ಲಿ ಜೆಡಿಎಸ್ ಅನ್ನು ಮಣಿಸಲೇಬೇಕೆಂದು ಮಾಡಿದ ತಂತ್ರಗಳು ಬಿಜೆಪಿಗೆ ವರದಾನವಾ ಯಿತು, ಅದನ್ನು ಬಿಡಿಸಿ ಹೇಳಲೇ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಅವರು ರಾಜಕೀಯ ಮಾಡಿದ್ದು, ನಮ್ಮ ಮೇಲೆ ಗೂಬೆ ಕೂರಿಸುವುದಾದರೂ ಎಷ್ಟರ ಮಟ್ಟಿಗೆ ಸರಿ. ಮತ್ತೆ ಚುನಾವಣೆಗೆ ಬನ್ನಿ ಎಂದು ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ, ಅವರ ಪಕ್ಷ ಚುನಾವಣೆಗೆ ಸಜ್ಜಾಗುತ್ತಿರುವ ಬಗ್ಗೆಯೂ ಮಾಹಿತಿ ಇಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂದು ನಾನೂ ಸೇರಿದಂತೆ ಸಮಾನ ಮನಸ್ಕರೆಲ್ಲಾ ಹೋರಾಟ ನಡೆಸಿ ಫಲ ಕಂಡಿದ್ದೇವೆ. ಇದೇ ವೇಳೆಯಲ್ಲಿ ನಮ್ಮನ್ನು ಸೋಲಿಸಲು ಅವರು ಪ್ರಯತ್ನಿಸಿದ್ದರು. ಆದರೆ ಅದು, ಅವರಿಗೆ ಫಲ ನೀಡಲಿಲ್ಲ.

ಕೇಂದ್ರದ ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಮತ್ತು ನಾನು ಹಳೇ ಸ್ನೇಹಿತರು, ಪರಸ್ಪರ ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸುವುದು ತಪ್ಪೇ? ಈ ಸಮಯದಲ್ಲಿ ಸಹಜವಾಗಿ ರಾಜಕೀಯ ಚರ್ಚೆ ಮಾಡಿದೆವು. ನಾನು ಚಾಮರಾಜನಗರದಲ್ಲಿ ಈ ಬಾರಿ ಗೆಲ್ಲುತ್ತೇನೆ ಎಂದರು. ಇದನ್ನು ಬಿಟ್ಟು ಬೇರೆ ರಾಜಕೀಯ ಮಾತು ನಡೆದಿಲ್ಲ ಎಂದು ಹೇಳಿದರು.

ವಿಶ್ವನಾಥ್-ಪ್ರಸಾದ್ ರಹಸ್ಯ ಮಾತುಕತೆ

ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಮೈತ್ರಿ ಸರ್ಕಾರದ ಕೆಲವು ಶಾಸಕರು, ಮುಖಂಡರು ಸಿದ್ದರಾಮಯ್ಯನವರೇ ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗ ಹೇಳಿಕೆ ನೀಡತೊಡಗಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯನವರ ವಿರೋಧಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿಯಾಗಿ ರಹಸ್ಯ ಮಾತುಕತೆ ನಡೆಸಿರುವುದು ಮತ್ತಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮೇ 23ರ ನಂತರ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‍ನ ಕೆಲವು ಮುಖಂಡರು ಹೇಳುತ್ತಿರುವುದರ ಜೊತೆಗೆ ವಿಶ್ವನಾಥ್ ಅವರು ಬಿಜೆಪಿ ರಾಜ್ಯ ಉಪಾಧ್ಯಕ್ಷರ ಜೊತೆ ಚರ್ಚೆ ನಡೆಸಿರುವುದಕ್ಕೆ ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗಳು ಹೊರಬೀಳತೊಡಗಿದೆ.

ಮಂಗಳವಾರ ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಎಚ್.ವಿಶ್ವನಾಥ್ ಭೇಟಿ ನೀಡಿ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ.

Translate »