ಪ್ರಾಣಿ ತ್ಯಾಜ್ಯದಿಂದ ಮೀನಿನ ಆಹಾರ, ಬಯೋಗ್ಯಾಸ್, ಕಾಂಪೋಸ್ಟ್  ತಯಾರಿಕೆ
ಮೈಸೂರು

ಪ್ರಾಣಿ ತ್ಯಾಜ್ಯದಿಂದ ಮೀನಿನ ಆಹಾರ, ಬಯೋಗ್ಯಾಸ್, ಕಾಂಪೋಸ್ಟ್ ತಯಾರಿಕೆ

May 9, 2019

ಮೈಸೂರು: ಕಸದಿಂದ ಕಾಸು ಮಾಡುವ ಮಹತ್ವದ ಯೋಜನೆಗೆ ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ.

ಮೈಸೂರು ನಗರದ ಮಾಂಸ, ಕೋಳಿ ಹಾಗೂ ಮೀನಿನ ಅಂಗಡಿಗಳಲ್ಲಿ ಉತ್ಪತ್ತಿಯಾಗುವ ಪ್ರಾಣಿ ತ್ಯಾಜ್ಯ ಬಳಸಿ ಬಯೋಗ್ಯಾಸ್, ಕಾಂಪೋಸ್ಟ್ ಹಾಗೂ ಅಕ್ವಾಫೀಡ್ (ಮೀನಿನ ಆಹಾರ) ತಯಾರಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಗೊಳಿ ಸಲು ಮೈಸೂರು ಮಹಾನಗರ ಪಾಲಿಕೆ ಚಿಂತನೆ ನಡೆಸಿದೆ. ಮೈಸೂರು ನಗರದಲ್ಲಿರುವ ಸಾವಿರಾರು ಮಾಂಸ, ಕೋಳಿ ಹಾಗೂ ಮೀನು ಮಾರಾಟ ಮಳಿಗೆಗಳಿಂದ ಪ್ರತೀ ದಿನ ಸುಮಾರು 10 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಅದನ್ನು ಅಂಗಡಿ ಯವರು ಈ ಹಿಂದೆ ಎಲ್ಲೆಂದರಲ್ಲಿ ಸಾರ್ವಜನಿಕ ಖಾಲಿ ಸ್ಥಳಗಳಲ್ಲಿ ಸುರಿಯುತ್ತಿದ್ದು, ವಾತಾವರಣ ಹಾಳಾಗುತ್ತಿತ್ತು ಎಂದು ಮೈಸೂರು ಮಹಾನಗರ ಪಾಲಿಕೆ ಪಶುಪಾಲನಾ ಶಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ಸಿ.ಸುರೇಶ್ ತಿಳಿಸಿದ್ದಾರೆ.

2012ರಿಂದೀಚೆಗೆ ಪ್ರತಿ ಅಂಗಡಿಗೇ ಹೋಗಿ ಪ್ರಾಣಿ ತ್ಯಾಜ್ಯ ಸಂಗ್ರಹಿಸಿ ಪ್ರತೀ ದಿನ ಕೆಸರೆಯ ಲ್ಲಿರುವ ಪಾಲಿಕೆ ಜಾಗದಲ್ಲಿ 15 ಅಡಿ ಆಳಕ್ಕೆ ಜೆಸಿಬಿ ಯಿಂದ ಗುಂಡಿ ತೆಗೆದು ಹೂಳುತ್ತಿದ್ದೇವೆ. ಇದಕ್ಕಾಗಿ 8 ಲಾರಿ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಪಾಲಿಕೆಗೆ ಅಧಿಕ ವೆಚ್ಚ ತಗುಲುತ್ತದೆಯೇ ಹೊರತು ಮೂಲ ಆದಾಯ ಬರುತ್ತಿಲ್ಲ ಎಂದು ತಿಳಿಸಿದರು.

ಅದಕ್ಕಾಗಿ ಒಂದು ವರ್ಷದ ಹಿಂದೆಯೇ ತ್ಯಾಜ್ಯ ದಿಂದ ಮರು ಬಳಕೆಯಾಗುವ ವಸ್ತು ತಯಾರಿಸ ಬಹುದೇ ಎಂಬುದರ ಬಗ್ಗೆ ಅಧ್ಯಯನ ಮಾಡಿದಾಗ ಚೆನ್ನೈನಲ್ಲಿ ಅತ್ಯಾಧುನಿಕ ರೀತಿ ಪ್ರಾಣಿ ತ್ಯಾಜ್ಯ ಸಂಸ್ಕರಿಸಿ ಅದರಿಂದ ಬಯೋಗ್ಯಾಸ್, ಕಾಪೋಸ್ಟ್ ಗೊಬ್ಬರ ಹಾಗೂ ಅಕ್ವಾ ಫೀಡ್ ತಯಾರಿಕಾ ಘಟಕ ಸ್ಥಾಪಿಸಲಾಗಿರುವುದು ತಿಳಿಯಿತು ಎಂದು ಡಾ.ಸುರೇಶ್ ಹೇಳಿದರು. ತಿರುಪತಿ-ಚೆನ್ನೈ ರಸ್ತೆಯಲ್ಲಿ ಸುಮಾರು 10 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ರೆಂಡರಿಂಗ್ ಪ್ಲಾಂಟ್‍ಗೆ ಭೇಟಿ ನೀಡಿ ಪರಿಶೀಲಿಸಿದಾಗ ಮೈಸೂರಲ್ಲೂ ಈ ಮಾದರಿಯ ಘಟಕ ಸ್ಥಾಪಿಸುವ ಕ್ರಿಯಾ ಯೋಜನೆ ತಯಾರಿಸಿ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆದು, ಯೋಜನೆಗಾಗಿ ಬಜೆಟ್‍ನಲ್ಲಿ 5 ಕೋಟಿ ರೂ. ಅನುದಾನಕ್ಕೂ ಅವಕಾಶ ಮಾಡಿ ಕೊಡಲಾಗಿದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮಂಗಳೂರು ಮೂಲದ ಪ್ರಗತಿ ಬ್ರಾಯ್ಲರ್ಸ್ ಸಂಸ್ಥೆಯ ಜೀವನ್‍ದಾಸ್ ರೈ ಎಂಬುವರು ಚೆನ್ನೈ ನಲ್ಲಿ ಅತ್ಯಾಧುನಿಕ ರೆಂಡರಿಂಗ್ ಪ್ಲಾಂಟ್ ನಡೆಸುತ್ತಿದ್ದು, ತ್ಯಾಜ್ಯದಿಂದ ಉಪಯುಕ್ತ ವಸ್ತುಗಳನ್ನು ಉತ್ಪಾದಿಸುತ್ತಿರುವುದರಿಂದ ಮೈಸೂರಲ್ಲೂ ಪ್ಲಾಂಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಡಾ.ಸುರೇಶ್ ತಿಳಿಸಿದರು. ಈ ಉದ್ದೇಶಕ್ಕೆ ಮೈಸೂರಿನ ರಾಯನಕೆರೆ ಹಾಗೂ ವಿದ್ಯಾರಣ್ಯಪುರಂನಲ್ಲಿ ತಲಾ 5 ಎಕರೆ ಪಾಲಿಕೆ ಜಾಗವನ್ನು ಗುರ್ತಿಸಲಾಗಿದೆ. ಆರೋಗ್ಯ ಸಮಿತಿಯಿಂದ ಒಪ್ಪಿಗೆ ಪಡೆದು ಡಿಪಿಆರ್(ಸಮಗ್ರ ಯೋಜನಾ ವರದಿ) ತಯಾರಿಸಿದ ನಂತರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನು ಮೋದನೆ ಪಡೆದುಕೊಂಡು
ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಮುಗಿಯುತ್ತಿದ್ದಂತೆಯೇ ಪ್ರಗತಿ ಬ್ರಾಯ್ಲರ್ಸ್ ಕಂಪನಿ ಪ್ರತಿನಿಧಿಗಳನ್ನು ಕರೆಸಿ ಪವರ್ ಪಾಯಿಂಟ್ ಪ್ರೆಸಂಟೇಷನ್ ಮೂಲಕ ಪ್ಲಾಂಟಿನ ಸ್ವರೂಪ, ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ಕಾರ್ಪೋ ರೇಟರ್‍ಗಳಿಗೂ ವಿವರಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಒಂದು ವರ್ಷದ ಹಿಂದೆಯೇ ಈ ಯೋಜನೆ ಬಗ್ಗೆ ಪ್ರಸ್ತಾಪಿಸಿ, ಮಾಹಿತಿ ಸಂಗ್ರಹಿಸಿದ್ದ ಪಾಲಿಕೆ ಅನುಷ್ಠಾನಗೊಳಿಸಲು ಪ್ರಕ್ರಿಯೆ ಆರಂಭಿಸದ ಕಾರಣ ವಿಳಂಬವಾಗುತ್ತಿದ್ದು, ಈಗಲೂ ನಿರ್ಲಕ್ಷ್ಯ ವಹಿಸಿದರೆ ಕಸದಿಂದ ಕಾಸು ತೆಗೆಯುವ ಕಾರ್ಯ ನೆನೆಗುದಿಗೆ ಬೀಳುವುದರಲ್ಲಿ ಸಂಶಯವಿಲ್ಲ ಎಂದರು.

Translate »