ಮುಂದುವರೆದ ಇನ್ಫೋಸಿಸ್ ಗಾರ್ಡ್‍ನ್ ಕಾರ್ಮಿಕರ ಪ್ರತಿಭಟನೆ
ಮೈಸೂರು

ಮುಂದುವರೆದ ಇನ್ಫೋಸಿಸ್ ಗಾರ್ಡ್‍ನ್ ಕಾರ್ಮಿಕರ ಪ್ರತಿಭಟನೆ

June 9, 2018

ಮೈಸೂರು:  ಇನ್ಫೋಸಿಸ್ ಸಂಸ್ಥೆ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಇನ್ಫೋಸಿಸ್ ಗಾರ್ಡನ್ ಕಾರ್ಮಿಕರು ಎಐಟಿಯುಸಿ ಆಶ್ರಯದಲ್ಲಿ ಗುರುವಾರ ಆರಂಭಿಸಿದ ಪ್ರತಿಭಟನೆ ಶುಕ್ರವಾರವೂ ಮುಂದುವರೆಯಿತು.
ಸಂಸ್ಥೆಯ 4ನೇ ಗೇಟ್ ಎದುರು ಜಮಾಯಿಸಿದ ನೂರಾರು ಕಾರ್ಮಿಕರು, ಗುತ್ತಿಗೆ ಬದಲಿಸುವ ನೆಪದಲ್ಲಿ ನಮ್ಮನ್ನು ಕೆಲಸದಿಂದ ತೆಗೆಯುವ ಪ್ರಯತ್ನವನ್ನು ಸಂಸ್ಥೆ ನಡೆಸುತ್ತಿದೆ. 10, 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನಮಗೆ ಈಗ ಇದ್ದಕ್ಕಿದ್ದಂತೆ ರಾಜೀನಾಮೆ ಕೊಡಲು ಒತ್ತಾಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು ಹಾಗೂ ಪುರುಷರು ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಗುತ್ತಿಗೆ ಆಧಾರದಲ್ಲಿ ಗಾರ್ಡನ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದೇವೆ. ಆದರೆ ಈಗ ಸಂಸ್ಥೆಯವರು ಗುತ್ತಿಗೆ ಬದಲಿಸುವ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ಟು ಮತ್ತೆ ಇನ್ನೊಂದು ಗುತ್ತಿಗೆ ಕಂಪನಿಯ ಮೂಲಕ ಕೆಲಸಕ್ಕೆ ನಿಯೋಜನೆ ಆಗಬೇಕು ಎನ್ನುತ್ತಿದ್ದಾರೆ. ಕಾರ್ಮಿಕ ಇಲಾಖೆ ಈ ಕೂಡಲೇ ನಮಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಕಾರ್ಮಿಕ ಮುಖಂಡರಾದ ಕುಮಾರ್, ಲಕ್ಷ್ಮಣ್, ಮಹದೇವು ಸೇರಿದಂತೆ ಬಹುತೇಕ ಎಲ್ಲಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »