ಕೆ.ಆರ್. ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣಾ ಕೇಂದ್ರ ಆರಂಭ
ಮೈಸೂರು

ಕೆ.ಆರ್. ಆಸ್ಪತ್ರೆಯಲ್ಲಿ ಪ್ರಾಥಮಿಕ ತಪಾಸಣಾ ಕೇಂದ್ರ ಆರಂಭ

June 23, 2020

ಮೈಸೂರು, ಜೂ. 22(ಆರ್‍ಕೆ)- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮೈಸೂರಿನ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಪ್ರಾಥಮಿಕ ತಪಾಸಣಾ ಕೇಂದ್ರ ((Primary Screening- (Q))ವನ್ನು ಆರಂಭಿಸಲಾಗಿದೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಕಚೇರಿ ಮತ್ತು ಹೊರರೋಗಿ ವಿಭಾಗದ ಮಧ್ಯೆ ಇರುವ ಗಣಪತಿ ದೇವಸ್ಥಾನದ ಹಿಂಭಾಗ ಈ ವಿನೂತನ ಟ್ರಿಯೇಜ್ ಪದ್ಧತಿಯನ್ನು ಅನುಷ್ಠಾನಗೊಳಿಸಲಾಗಿದ್ದು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಯೂ ಮೊದಲು ಈ ಪ್ರಾಥಮಿಕ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಬೇಕು.

ಅಲ್ಲಿ ಹೊರ ರೋಗಿ ನೋಂದಣಿ ಚೀಟಿ ನೀಡಲು, ಒಳರೋಗಿಯಾಗಿ ದಾಖಲು ಮಾಡಿಕೊಳ್ಳಲು ಕೌಂಟರ್‍ಗಳನ್ನು ತೆರೆಯಲಾಗಿದೆ. ಸ್ಥಳದಲ್ಲಿ ವೈದ್ಯರು ಹಾಗೂ ನರ್ಸಿಂಗ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮೊದಲು ರೋಗಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ ಮುಂದೆ ಯಾವ ವಿಭಾಗಕ್ಕೆ ತೋರಿಸಬೇಕೆಂದು ಸಲಹೆ ನೀಡಲಾಗುವುದು. ಪ್ರಸ್ತುತ ಹೊರರೋಗಿ ವಿಭಾಗದಲ್ಲಿ ಒಮ್ಮೆಲೆ ಚೀಟಿ ಪಡೆಯಲು, ಉಚಿತ ಸೀಲ್ ಹಾಕಿಸಿಕೊಳ್ಳಲು ಹಾಗೂ ಮೆಡಿಸಿನ್, ಸರ್ಜರಿ, ಆರ್ಥೋ, ಯೂರಾಲಜಿ, ನ್ಯೂರಾಲಜಿ ಹಾಗೂ ಅಪಘಾತ ತುರ್ತು ವಿಭಾಗಕ್ಕೆ ರೋಗಿಗಳು ಭೇಟಿ ನೀಡುವುದ ರಿಂದ ಗುಂಪುಗೂಡಿ ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಅಲ್ಲಿ ಜನಸಂದಣಿ ತಪ್ಪಿಸುವ ಸಲುವಾಗಿ ವಿನೂತನ ಟ್ರಿಯೇಜ್ ಪದ್ಧತಿಯನ್ನು ಜಾರಿಗೊಳಿಸಲಾಗಿದೆ. ಈ ಕೇಂದ್ರದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇರಿಸಿದ್ದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಅಲ್ಲಿನ ಭದ್ರತಾ ಸಿಬ್ಬಂದಿ ರೋಗಿಗಳಿಗೆ ಸಲಹೆ ನೀಡುತ್ತಾರೆ. ಗುರುವಾರ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಪಿ.ನಂಜರಾಜ್ ಕೇಂದ್ರವನ್ನು ಉದ್ಘಾಟಿಸಿದರು. ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಎನ್.ನಂಜುಂಡಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್, ಸರ್ಜರಿ ವಿಭಾಗದ ಮುಖ್ಯಸ್ಥ ಡಾ.ದಿನೇಶ್, ಸೆಕ್ಯೂರಿಟಿ ಸೂಪರ್ ವೈಸರ್ ಎಂ.ಮಹದೇವು, ಮಹದೇವಸ್ವಾಮಿ ಇತರರು ಈ ಸಂದರ್ಭ ಪಾಲ್ಗೊಂಡಿದ್ದರು.

 

 

 

Translate »