ಮೈಸೂರು, ಮೇ7(ಆರ್‍ಕೆ)- ಜುಬಿಲಂಟ್ ಕಾರ್ಖಾನೆಯ ಪ್ರಥಮ ರೋಗಿ ಪಿ-52 ಅವರಿಗೆ ಕೊರೊನಾ ವೈರಸ್ ಸೋಂಕು ಹೇಗೆ ಹರಡಿತೆಂಬುದರ ಬಗ್ಗೆ ಮೂಲ ಪತ್ತೆ ಮಾಡುವಂತೆ ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಬಿ.ಎ.ಶಿವಶಂಕರ್, ಕಾರ್ಖಾನೆ ನೌಕರರಾದ ಪಿ-52 ವ್ಯಕ್ತಿಯಿಂದ 73 ಮಂದಿಗೆ ಸೋಂಕು ಹರಡಿದ್ದರೂ, ರೋಗ ಹರಡಿದ್ದು ಹೇಗೆ ಎಂಬುದನ್ನು ಈವರೆಗೆ ಬಹಿರಂಗಪಡಿಸದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಈ ಬಗ್ಗೆ ಸಿಬಿಐನಿಂದ ತನಿಖೆಗೊಳಪಡಿಸಿ ಸೋಂಕು ಹರಡಿದ ಮೂಲ ಪತ್ತೆ ಮಾಡಿ ನಿರ್ಲಕ್ಷ್ಯತೆ ವಹಿಸಿದವರ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸಬೇಕೆಂದೂ ಅವರು ಒತ್ತಾಯಿಸಿದ್ದಾರೆ.
