ಆರ್ಥಿಕ ನೆರವಿಗಾಗಿ ಬ್ಯೂಟಿಪಾರ್ಲರ್ ಮಾಲೀಕರ ಒತ್ತಾಯ
ಮೈಸೂರು

ಆರ್ಥಿಕ ನೆರವಿಗಾಗಿ ಬ್ಯೂಟಿಪಾರ್ಲರ್ ಮಾಲೀಕರ ಒತ್ತಾಯ

May 10, 2020

ಮೈಸೂರು, ಮೇ9(ಎಂಟಿವೈ)- ಲಾಕ್ ಡೌನ್‍ನಿಂದಾಗಿ ನಗರದಲ್ಲಿ ಬ್ಯೂಟಿ ಪಾರ್ಲರ್ ಗಳನ್ನು 2 ತಿಂಗಳಿಂದ ಮುಚ್ಚಿದ್ದರಿಂದ ಮಾಲೀಕರು ಕಷ್ಟದಲ್ಲಿದ್ದು, ಆರ್ಥಿಕ ನೆರವಿಗಾಗಿ ಮೈಸೂರು ಬ್ಯೂಟಿಷಿಯನ್ಸ್ ಮತ್ತು ಬ್ಯೂಟಿಪಾರ್ಲರ್ ಮಾಲೀಕರ ಸಂಘ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ಮೈಸೂರಿನ ಬ್ಯೂಟಿಷಿಯನ್ಸ್ ಮತ್ತು ಬ್ಯೂಟಿಪಾರ್ಲರ್ ಮಾಲೀಕರ ಸಂಘದ ಪದಾಧಿಕಾರಿಗಳ ನಿಯೋಗ ಜಿಲ್ಲಾಧಿ ಕಾರಿ, ಮೇಯರ್ ಹಾಗೂ ಪಾಲಿಕೆ ಆಯುಕ್ತ ರಿಗೆ ಶನಿವಾರ ಮನವಿ ಸಲ್ಲಿಸಿತು. ಸಣ್ಣ ಪಾರ್ಲರ್‍ಗಳಲ್ಲಿ ತಿಂಗಳಿಗೆ 10-20 ಸಾವಿರ ರೂ. ಸಂಪಾದನೆಯಾಗುತ್ತದೆ. ಅಷ್ಟರಲ್ಲೇ ಬಾಡಿಗೆ ಕಟ್ಟಿ, ಕೆಲಸದವರಿಗೆ ಸಂಬಳ ನೀಡಿ ಪಾರ್ಲರ್ ಮಾಲೀಕರು ತಮ್ಮ ಕುಟುಂಬವನ್ನೂ ನಿರ್ವಹಣೆ ಮಾಡ ಬೇಕು. ಈಗ ಲಾಕ್‍ಡೌನ್ ವೇಳೆ ದುಡಿಮೆ ಇಲ್ಲದೇ 2 ತಿಂಗಳಿಂದ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಶೇ.50ರಷ್ಟು ಬಾಡಿಗೆ ವಿನಾಯಿತಿ ಕೊಡಿಸುವಂತೆ ಆಗ್ರಹಿಸಿದೆ. ಕೇಶಾಲಂಕಾರ, ಸೌಂದರ್ಯ ಸೇವೆಯೂ ಅಗತ್ಯ ಸೇವೆಗಳಲ್ಲಿ ಒಂದು. ಮಹಿಳೆಯರೇ ನಡೆಸುವ ಪಾರ್ಲರ್‍ಗಳಿಗೆ ಸರ್ಕಾರ ಆರ್ಥಿಕ ನೆರವು ನೀಡದಿರುವುದು ಮಹಿಳೆಯರಿಗೆ ಮಾಡಿದ ಅನ್ಯಾಯ. ಮೈಸೂರಲ್ಲಿ ಸಣ್ಣ ಹಾಗೂ ದೊಡ್ಡ ಪ್ರಮಾಣದ 600 ಬ್ಯೂಟಿ ಪಾರ್ಲರ್‍ಗಳಿದ್ದು, ಬಡ, ಮಧ್ಯಮ ವರ್ಗದ ಸಾವಿರಾರು ಮಹಿಳೆ ಯರು ದುಡಿಯುತ್ತಿದ್ದಾರೆ. ಪ್ರತಿ ಪಾರ್ಲ ರ್‍ಗೆ ತಿಂಗಳಿಗೆ ಕನಿಷ್ಠ 5 ಸಾವಿರ ರೂ. ಆರ್ಥಿಕ ನೆರವು ನೀಡುವಂತೆ ಸಂಘದ ಮುಖ್ಯಸ್ಥೆ ವೇದಾ ರೈ ಒತ್ತಾಯಿಸಿದ್ದಾರೆ.

ಮಹಿಳಾ ಸಣ್ಣ ಉದ್ಯಮಿಗಳ ಸಂಘದ ಜಂಟಿ ಕಾರ್ಯದರ್ಶಿ ಎಸ್.ಪದ್ಮಿನಿ ಮಾತನಾಡಿ, ವಿವಿಧ ಕಾರಣಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ, ಬೇರ್ಪ ಟ್ಟಿರುವ, ಪತಿಯನ್ನು ಕಳೆದುಕೊಂಡಿರುವ ಹಾಗೂ ಬಡ ಕುಟುಂಬದ ಮಹಿಳೆ ಯರೇ ಸಣ್ಣ ಪಾರ್ಲರ್ ತೆರೆದು ಜೀವನ ಸಾಗಿಸುತ್ತಿದ್ದಾರೆ. ಅದರ ಸಂಪಾದನೆ ಯಿಂದಲೇ ಮಕ್ಕಳಿಗೆ ಶಿಕ್ಷಣ, ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಈಗ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಸಹಾಯ ಹಸ್ತ ಚಾಚಬೇಕು. ಪಾರ್ಲರ್ ಪುನಾ ರಂಭಕ್ಕೆ ಅವಕಾಶ ಮಾಡಿಕೊಡಬೇಕು. ಸ್ಯಾನಿಟೈಸರ್ ಬಳಸಿ, ವೃತ್ತಿ ನಡೆಸುತ್ತೇವೆ ಎಂದು ಮನವಿ ಮಾಡಿದರು.

ಬ್ಯೂಟಿಪಾರ್ಲರ್‍ನವರಲ್ಲಿ ಬಹು ತೇಕರು ಬಾಡಿಗೆ ಮನೆಯಲ್ಲಿ ವಾಸ. ಮನೆ, ಮಳಿಗೆ ಎರಡೂ ಬಾಡಿಗೆ ಕಟ್ಟಲು ಈಗ ಸಾಧ್ಯವಾಗುತ್ತಿಲ್ಲ. ಹಲವರಿಗೆ ಮನೆಯಲ್ಲಿ ಊಟಕ್ಕೂ ಸಮಸ್ಯೆಯಾಗಿದೆ. ಇದರ ನಡುವೆ ಪಾರ್ಲರ್‍ಗಳಿಗೆ ದುಪ್ಪಟ್ಟು ವಿದ್ಯುತ್ ಬಿಲ್ ನೀಡಿದ್ದಾರೆ. 2 ತಿಂಗಳಿಂದ ಬಾಗಿಲು ತೆರೆಯದಿದ್ದರೂ ಕಟ್ಟಡದ ಮಾಲೀಕರು ವಿದ್ಯುತ್ ಬಿಲ್ ಕಟ್ಟುವಂತೆ ಒತ್ತಾಯಿಸು ತ್ತಿದ್ದಾರೆ. ಸರ್ಕಾರ ವಿದ್ಯುತ್ ಬಿಲ್‍ಗೆ ರಿಯಾ ಯಿತಿ ನೀಡಬೇಕು ಎಂದು ಪಾರ್ಲರ್ ಅಸೋಸಿಯೇಷನ್ ಸದಸ್ಯೆ ಸ್ವಪ್ನಾ ಹಿರಾ ಸ್ಕರ್ ಕೋರಿದರು. ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಸದಸ್ಯರಾದ ಮಂಜುಳಾ, ನಜ್ರಿನ್ ಇತರರಿದ್ದರು.

Translate »