ಮೈಮುಲ್ ಖರೀದಿಸುವ ಹಾಲಿನ ದರ ಕಡಿತ ಮಾಡುವ ಅನಿವಾರ್ಯತೆ
ಮೈಸೂರು

ಮೈಮುಲ್ ಖರೀದಿಸುವ ಹಾಲಿನ ದರ ಕಡಿತ ಮಾಡುವ ಅನಿವಾರ್ಯತೆ

May 10, 2020

ಮೈಸೂರು, ಮೇ 9(ಎಸ್‍ಬಿಡಿ)- ಮೈಸೂರು ಜಿಲ್ಲಾ ಹಾಲು ಒಕ್ಕೂಟ (ಮೈಮುಲ್) ಖರೀದಿಸುವ ಹಾಲಿನ ದರ ದಲ್ಲಿ ಕಡಿತವಾಗುವ ಸಾಧ್ಯತೆ ಇದೆ.

ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರದಲ್ಲಿ ಎರಡೂವರೆ ರೂ. ಕಡಿತ ಗೊಳಿಸಿದ್ದು, ಸದ್ಯ ಲೀಟರ್ ಹಾಲಿಗೆ 27.50 ರೂ. ನೀಡಲಾಗುತ್ತಿದೆ. ಆದರೆ ಕಳೆದ 10 ದಿನಗಳಲ್ಲಿ ಜಿಲ್ಲೆಯಲ್ಲಿ 60 ಸಾವಿರ ಲೀಟರ್ ಹಾಲು ಉತ್ಪಾದನೆ ಹೆಚ್ಚಾಗಿದ್ದು, ಒಟ್ಟು 5.50 ಲಕ್ಷ ಲೀಟರ್‍ಗೂ ಹೆಚ್ಚು ಹಾಲು ಸಂಗ್ರಹವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖರೀದಿ ದರವನ್ನು ಮತ್ತಷ್ಟು ಕಡಿತಗೊಳಿಸುವುದು ಅನಿವಾರ್ಯ ಎನ್ನಲಾ ಗಿದ್ದು, ಈ ಬಗ್ಗೆ ಮೇ 12ರಂದು ಆಡಳಿತ ಮಂಡಳಿ ಸಭೆ ನಡೆಸಿ, ತೀರ್ಮಾನಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಡಿ.ಅಶೋಕ್, ಕಳೆದ 10 ದಿನಗಳಲ್ಲಿ ಸುಮಾರು 60 ಸಾವಿರ ಲೀ. ಹಾಲು ಹೆಚ್ಚಿದ್ದು, ನಿತ್ಯವೂ ಇದರ ಪ್ರಮಾಣ ಏರಿಕೆಯಾಗುತ್ತಿದೆ. ಅಲ್ಲದೆ ಬೇಸಿಗೆಯಲ್ಲಿ ಖರೀದಿ ದರವನ್ನು ಕಡಿತಗೊಳಿಸುವ ವಾಡಿಕೆಯಿದೆ. ಈ ಕಾರಣಗಳಿಂದ ಮಾತ್ರವಲ್ಲದೆ ಹಾಲು ಉತ್ಪಾದಕರಿಗೆ ಸರಿಯಾದ ಸಮಯಕ್ಕೆ ಹಣ ನೀಡುವ ಉದ್ದೇಶದಿಂದ ದರ ಕಡಿತಗೊಳಿಸಬಹುದು. ಆದರೆ ಈ ಬಗ್ಗೆ ಆಡಳಿತ ಮಂಡಳಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಆಡಳಿತ ಮಂಡಳಿ ನಿರ್ದೇಶಕ ಎಸ್.ಟಿ.ಅಶೋಕ್ ಪ್ರತಿಕ್ರಿಯಿಸಿ, ಕಳೆದ ವರ್ಷ ಮೇ ತಿಂಗಳಲ್ಲಿ ಲೀಟರ್ ಹಾಲಿಗೆ 26 ರೂ. ದರವಿತ್ತು. ಪ್ರಸ್ತುತ 27.50 ರೂ. ನೀಡಲಾಗುತ್ತಿದೆ. 10 ದಿನಗಳಲ್ಲಿ 60 ಸಾವಿರ ಲೀ. ಪ್ರಮಾಣ ಹೆಚ್ಚಿದ್ದರಿಂದ ಖರೀದಿ ದರ ಕಡಿತ ಗೊಳಿಸಬೇಕಾಗು ತ್ತದೆ. ಹೀಗೆಯೇ ಹಾಲಿನ ಪ್ರಮಾಣ ಕಡಿಮೆ ಯಾದಾಗ ಬೆಲೆ ಹೆಚ್ಚಿಸಲಾಗಿದೆ. ಹಾಲಿನ ಪ್ರಮಾಣ ಹೆಚ್ಚಾಗಿದೆ ಎಂಬ ಕಾರಣಕ್ಕೆ ರೈತರಿಗೆ ರಜೆ ನೀಡಲು ಅಥವಾ ಪ್ರಮಾಣವನ್ನು ನಿಗದಿಗೊಳಿಸಿ ಖರೀದಿಸುವ ಮೂಲಕ ಅವರಿಗೆ ನಷ್ಟ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೊಳ್ಳುವ ಬೆಲೆಯಲ್ಲೇ ಕಡಿತಗೊಳಿಸುವುದು ಅನಿವಾರ್ಯ ವಾಗುತ್ತದೆ ಎಂದು ತಿಳಿಸಿದರು.

ಲಾಕ್‍ಡೌನ್ ಸಂದರ್ಭದಲ್ಲಿ ಹಣ್ಣು, ತರ ಕಾರಿ, ಹೂ ಬೆಳೆದ ರೈತರು ಸಂಕಷ್ಟಕ್ಕೀಡಾದರು. ಆದರೆ ಹಾಲು ಉತ್ಪಾದನೆ ಅವರ ಕೈ ಹಿಡಿದಿದೆ. ರಾಜ್ಯದಲ್ಲಿ ಎಲ್ಲಿಯೂ ಹಾಲು ವ್ಯರ್ಥವಾಗದಂತೆ ಒಕ್ಕೂಟಗಳು ಖರೀದಿಸಿವೆ. ಸದ್ಯ ಎಲ್ಲಾ ಜಿಲ್ಲೆ ಯಲ್ಲೂ ಹಾಲು ಉತ್ಪಾದನೆ ಹೆಚ್ಚಾಗಿದೆ. ಹಾಗಾಗಿ ನಮ್ಮ ಮೈಮುಲ್ ನಿಂದ ಹೊರ ಜಿಲ್ಲೆಗಳಿಗೆ ಕಳುಹಿಸಲು ಅವಕಾಶವಿಲ್ಲ. ಹೆಚ್ಚುವರಿ ಹಾಲನ್ನು ಪೌಡರ್ ಮಾಡಿ, ಹೊರ ರಾಜ್ಯಗಳಿಗೆ ರಫ್ತು ಮಾಡ ಬೇಕಾಗುತ್ತದೆ. ಇದಕ್ಕೆ ಹೆಚ್ಚು ವ್ಯಯವಾಗುತ್ತದೆ. ಈ ಕಾರಣದಿಂ ದಾಗಿ ಖರೀದಿ ದರ ಕಡಿತಗೊಳಿಸಲಾಗುತ್ತದೆ. ರಜೆ ನೀಡುವ ಬದಲು ಬೆಲೆ ಕಡಿತ ಮಾಡಿದರೆ ರೈತರಿಗೂ ನಷ್ಟವಾಗುವುದಿಲ್ಲ ಎಂದರು.

ಈ ಹಿಂದೆ ಜಾನುವಾರು ಆಹಾರ(ಕ್ಯಾಟ್ಲ್ ಫೀಡ್) ಬೇಡಿಕೆ ಯಷ್ಟು ಪೂರೈಕೆಯಾಗುತ್ತಿರಲಿಲ್ಲ. ಸದ್ಯ ಪ್ರಸ್ತುತ ಇದರ ಸಮಸ್ಯೆ ಯಿಲ್ಲ. ಸುಮಾರು 3 ಸಾವಿರ ಟನ್‍ನಷ್ಟು ಮಾರಾಟವಾಗುತ್ತಿದೆ. ಹಾಲಿನ ಹಣ ನೇರವಾಗಿ ಉತ್ಪಾದಕರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುವುದರಿಂದ ಯಾವುದೇ ಗೊಂದಲವಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಹಾಲು ಉತ್ಪಾದಕರ ಸಂಘದಲ್ಲೂ ಸಾಮಾಜಿಕ ಅಂತರ, ಇನ್ನಿತರ ಮುಂಜಾಗ್ರತೆ ಕ್ರಮ ವಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು

Translate »