ಮೈಸೂರು ಕೊರೊನಾ ವಾರಿಯರ್ಸ್‍ಗೆ ಅಂತರ ಜಿಲ್ಲಾ ಉಚಿತ ಟ್ಯಾಕ್ಸಿ ಸೇವೆ
ಮೈಸೂರು

ಮೈಸೂರು ಕೊರೊನಾ ವಾರಿಯರ್ಸ್‍ಗೆ ಅಂತರ ಜಿಲ್ಲಾ ಉಚಿತ ಟ್ಯಾಕ್ಸಿ ಸೇವೆ

May 26, 2020

ಮೈಸೂರು, ಮೇ 25(ಎಂಟಿವೈ)- ಮೈಸೂರು ಜಿಲ್ಲೆಯ ಕೊರೊನಾ ವಾರಿಯರ್ಸ್ ರಾಜ್ಯದ ಯಾವುದೇ ಜಿಲ್ಲೆಗೆ ಪ್ರಯಾಣಿಸಲು ಸೇಫ್ ವೀಲ್ಸ್ ಸಂಸ್ಥೆ ವತಿ ಯಿಂದ ಉಚಿತ ವಾಹನ ವ್ಯವಸ್ಥೆಗೆ ಶಾಸಕ ಎಸ್.ಎ. ರಾಮದಾಸ್ ಚಾಲನೆ ನೀಡಿದರು.

ಸರಸ್ವತಿಪುರಂನಲ್ಲಿರುವ ಸೇಫ್ ವೀಲ್ಸ್ ಕಚೇರಿ ಬಳಿ ಸೋಮವಾರ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ ಸೇವೆಗಾಗಿ ಕಾಯ್ದಿರಿಸಿದ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಸೇವೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿಶ್ವದ ಬಹುತೇಕ ರಾಷ್ಟ್ರಗಳನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ, ಸಾಂಸ್ಕøತಿಕ ನಗರಿ ಮೈಸೂರಿನ ಜನರನ್ನು ಭಯಭೀತ ಗೊಳಿಸಿತ್ತು. ಆರಂಭದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದ ಎರಡನೇ ಜಿಲ್ಲೆ ಎಂಬ ಅಪಖ್ಯಾತಿಗೆ ತುತ್ತಾಗಿದ್ದ ಮೈಸೂರು ಜಿಲ್ಲೆಯಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿ, ಜಿಲ್ಲಾಡಳಿತ, ಆಶಾ ಕಾರ್ಯ ಕರ್ತೆಯರು, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್‍ಗಳಾಗಿ ಅವಿರತ ಸೇವೆ ಸಲ್ಲಿಸಿದ ಪರಿಣಾಮ ಕೇವಲ 56 ದಿನದಲ್ಲಿಯೇ 90 ಸೋಂಕಿತರನ್ನು ಗುಣಪಡಿಸಿ, ಮೈಸೂರು ಜಿಲ್ಲೆ ಯನ್ನು ಕೊರೊನಾ ಮುಕ್ತ ಜಿಲ್ಲೆಯನ್ನಾಗಿ ಮಾರ್ಪಡಿಸಿ ದ್ದರು. ಆ ಮೂಲಕ ಕೊರೊನಾ ಸೋಂಕು ಸಮು ದಾಯಕ್ಕೆ ಹರಡುವುದನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿ ದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರ ಪರವಾಗಿ ಕೊರೊನಾ ವಾರಿಯರ್ಸ್‍ಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಜಿಲ್ಲೆಯನ್ನು ಜುಬಿಲಂಟ್ ಕಾರ್ಖಾನೆಯ ಸೋಂಕಿತ ನೌಕರರು ಹಾಗೂ ದೆಹಲಿಯ ತಬ್ಲಿಘಿಗೆ ಹೋಗಿದ್ದವರು ಆತಂಕ ಸೃಷ್ಟಿಸಿದ್ದರು. ಪತ್ತೆಯಾದ ಒಟ್ಟು 90 ಪ್ರಕರಣಗಳಿಂದ ಪ್ರಥಮ ಹಾಗೂ ದ್ವಿತೀಯ ಸಂಪರ್ಕಕ್ಕೆ ಒಳಗಾಗಿದ್ದ 4 ಸಾವಿರ ಮಂದಿಯನ್ನು ಕ್ವಾರಂಟೇನ್ ಮಾಡಲಾಗಿತ್ತು. ಕ್ವಾರಂಟೇನ್‍ನಲ್ಲಿದ್ದವರು ನಿಯಮ ಉಲ್ಲಂಘಿಸಿ ಮನೆ ಹಾಗೂ ಕ್ವಾರಂಟೇನ್ ಕೇಂದ್ರದಿಂದ ಹೊರಗೆ ಬರದಂತೆ ಕಟ್ಟೆಚ್ಚರ ವಹಿಸಿದ ಪರಿಣಾಮ ಇಂದು ಮೈಸೂರಲ್ಲಿ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ವಾರಿಯರ್ಸ್‍ಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಸೇಫ್ ವೀಲ್ಸ್ ಸಂಸ್ಥೆಯ ಬಿ.ಎಸ್.ಪ್ರಶಾಂತ್ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರಯಾಣಿಸಲು ಉಚಿತ ವಾಹನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ಈಗಾಗಲೇ ಸಮಾಜಮುಖಿಯಾಗಿ ಹಲವು ಸೇವಾಕಾರ್ಯ ಕೈಗೊಂಡಿರುವ ಸೇಫ್ ವೀಲ್ಸ್ ಸಂಸ್ಥೆ ಇದೀಗ ಕೊರೊನಾ ವಾರಿಯರ್ಸ್‍ಗೆ ವಾಹನದ ಸೇವೆ ಒದಗಿ ಸುತ್ತಿದ್ದು, ಅಗತ್ಯವುಳ್ಳ ಕೊರೊನಾ ವಾರಿಯರ್ಸ್ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸೇಫ್ ವ್ಹೀಲ್ಸ್ ಸಂಸ್ಥೆಯ ಮುಖ್ಯಸ್ಥ ಬಿ.ಎಸ್.ಪ್ರಶಾಂತ್ ಮಾತನಾಡಿ, ನಮ್ಮ ಸಂಸ್ಥೆಯಿಂದ ಮೇ 25ರಿಂದ 31ರವರೆಗೆ ಮೈಸೂರಿನ ಕೋವಿಡ್ -19 ವಾರಿಯರ್ಸ್‍ಗೆ ರಾಜ್ಯದ ಯಾವುದೇ ಜಿಲ್ಲೆಗೆ ಪ್ರಯಾ ಣಿಸಲು ಉಚಿತವಾಗಿ ವಾಹನ ನೀಡಲಾಗುತ್ತದೆ. ನಮ್ಮಲ್ಲಿ 30 ವಾಹನಗಳಿದ್ದು, ಅವುಗಳನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳ ಲಾಗುತ್ತದೆ. ವಾರಿಯರ್ಸ್, ಸಂಸ್ಥೆಯನ್ನು ಸಂಪರ್ಕಿಸಿ ವಾಹನ ಸೇವೆ ಪಡೆಯಬಹುದು. ಅವರು ಡೀಸೆಲ್ ಖರ್ಚು ಭರಿಸಬೇಕಷ್ಟೆ. ಹೊರ ರಾಜ್ಯಕ್ಕೆ ಹೋದರೆ ನಮ್ಮ ವಾಹ ನದ ಚಾಲಕರನ್ನು ಕ್ವಾರಂಟೇನ್‍ನಲ್ಲಿಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಸೇವೆಯನ್ನು ಅಂತರ ಜಿಲ್ಲೆಗಳಿಗಷ್ಟೇ ಸೀಮಿತಗೊಳಿಸಿದ್ದೇವೆ ಎಂದರು.

ಕೊರೊನಾ ವಾರಿಯರ್ಸ್‍ಗಳಾದ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ, ದಾದಿಯರು, ಪೊಲೀಸ್, ಆಶಾ ಕಾರ್ಯ ಕರ್ತೆಯರ ಕುಟುಂಬದ ಸದಸ್ಯರು ಲಾಕ್‍ಡೌನ್‍ನಿಂದ ಬೇರೆ ಬೇರೆ ರಾಜ್ಯದಲ್ಲಿ ಸಿಲುಕಿದ್ದರೆ, ಅಂತಹವರನ್ನು ಕರೆತರಲು, ಬೇರೆ ಜಿಲ್ಲೆಗೆ ಹೋಗಿ ಬರಲು ಈ ಸೌಲಭ್ಯ ಪಡೆದುಕೊಳ್ಳಬಹುದು. ಮೇ 31ರ ನಂತರ ಉಚಿತ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿದರು.

Translate »