ಮೈಸೂರು, ನ.5(ಎಂಟಿವೈ)- ಕೇಂದ್ರ ಸರ್ಕಾರ ಐಟಿ, ಇಡಿ, ಸಿಬಿಐ ಸಂಸ್ಥೆಗಳನ್ನು ದುರುಪಯೋಗಪಡಿಸಿ ಕೊಳ್ಳು ತ್ತಿದ್ದು, ಅಧಿಕಾರಿಗಳು ಪಕ್ಷದ ಏಜೆಂಟರ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಕಿಡಿಕಾರಿದರು.
ಮೈಸೂರಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ. ವಿನಯ್ ಕುಲಕರ್ಣಿ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಅನ್ನೋ ವಿಶ್ವಾಸ ನಮಗಿದೆ. ಈ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಯಬೇಕು. ಕೇಂದ್ರದ ಮೋದಿ ಸರ್ಕಾರ ಕೇಂದ್ರ ಸ್ವಾಮ್ಯದ ಸ್ವಾಯತ್ತ ತನಿಖಾ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ಇದರಿಂದಾಗಿ ರಾಜ ಕೀಯ ವಿರೋಧಿಗಳನ್ನು ಬಗ್ಗು ಬಡಿಯಲು ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸಂಗತಿ ಜಗಜ್ಜಾಹೀರಾಗಿದೆ. ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾದ ಈ ತನಿಖಾ ಸಂಸ್ಥೆ ಗಳನ್ನು ರಾಜಕೀಯ ವಿರೋಧಿಗಳ ಹತ್ತಿಕ್ಕಲು ಬಳಸಿಕೊಳ್ಳುತ್ತಿರು ವುದು ಪ್ರಜಾಪ್ರಭುತ್ವಕ್ಕೆ ಗಂಡಾಂತರ ತರಲಿದೆ ಎಂದರು.
ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ಸಂದರ್ಭ ಅವರಿಗೆ ಬಿಜೆಪಿ ಸೇರ್ಪಡೆಗೊಳ್ಳು ವಂತೆ ಒತ್ತಡಗಳು ಕೇಳಿ ಬಂದಿತ್ತು. ಆದರೆ, ಅವರು ಒತ್ತಡಗಳಿಗೆ ಮಣಿಯದೆ ಇದ್ದಾಗ ಮತ್ತೆ ಅವರ ಮನೆ ಮೇಲೆ ಐಟಿ ದಾಳಿ ನಡೆಸಲಾಯಿತು. ಕೇಂದ್ರ ಸರ್ಕಾರ ಈ ರೀತಿ ಸರ್ಕಾರಿ ಸಂಸ್ಥೆ ಗಳನ್ನು ಗುರುತಿಸಿ ಬೆದರಿಕೆ ಒಡ್ಡುತ್ತಿರುವುದು ಖಂಡನೀಯ ಎಂದರು.