ತನಿಖೆ ಎಂಬುದು ನಿರಂತರ ಪ್ರಕ್ರಿಯೆ
ಮೈಸೂರು

ತನಿಖೆ ಎಂಬುದು ನಿರಂತರ ಪ್ರಕ್ರಿಯೆ

October 6, 2020

ಮೈಸೂರು, ಅ.5(ಆರ್‍ಕೆ)-ಆರ್ಥಿಕ ಅಪರಾಧಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಗಳು ಕಾಲ ಕಾಲಕ್ಕೆ ತನಿಖೆ ನಡೆಸುವುದು ನಿರಂತರ ಪ್ರಕ್ರಿಯೆ ಯಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದು ಹೊಸತೇನಲ್ಲ ಎಂದು ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಮಾರ್ಮಿಕವಾಗಿ ನುಡಿದಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಈ ದಾಳಿಯ ಬಗ್ಗೆ ನಾನು ಕಾಮೆಂಟ್ ಮಾಡುವುದಿಲ್ಲ. ಅದರ ಬಗ್ಗೆ ನನಗೇನು ಗೊತ್ತೂ ಇಲ್ಲ. ಈ ತನಿಖೆಯನ್ನು ಎದುರಿಸುವ ಶಕ್ತಿ ಡಿ.ಕೆ.ಶಿವಕುಮಾರ್‍ಗೆ ಇದೆ. ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿದ್ದೇವೆ, ಅವರ ಶಕ್ತಿ ಏನೆಂಬುದು ನನಗೆ ಗೊತ್ತು. ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಿಬಿಐ ದಾಳಿ ರಾಜಕೀಯ ಪ್ರೇರಿತ ಹಾಗೂ ಆಡಳಿತ ಪಕ್ಷದ ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. ಅವರು ಹಾಗೆ ಹೇಳಿದ ಮಾತ್ರಕ್ಕೆ ಅದು ವೇದವಾಕ್ಯ ಅಲ್ಲ ಎಂದು ನುಡಿದರು.

ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹಾಗೂ ಆರ್ಥಿಕ ಅಪರಾಧಗಳ ಮೇಲೆ ನಿಗಾ ಇಡಲು ಒಂದು ಇಲಾಖೆ ಇದೆ. ಅದು ಕಾಲಕಾಲಕ್ಕೆ ಎಲ್ಲವನ್ನೂ ನಡೆಸುತ್ತದೆ. ಡಿ.ಕೆ.ಶಿವಕುಮಾರ್ ಅವರಿಗೆ ಇದು ಹೊಸತೇನಲ್ಲ, ಯಾರು ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿದರೂ ವಿಚಾರಣೆ ನಡೆಸುವ ಅಧಿಕಾರ ಅಂತಹ ಸ್ವಾಯತ್ತ ಸಂಸ್ಥೆಗಳಿಗೆ ಇದೆ ಎಂದಷ್ಟೇ ಹೇಳಿ ಎ.ಹೆಚ್.ವಿಶ್ವನಾಥ್ ನಿರ್ಗಮಿಸಿದರು.

Translate »