ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ
ಮೈಸೂರು

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ: ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ

October 6, 2020

ಮೈಸೂರು, ಅ.5(ಆರ್‍ಕೆ)- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರುವುದು ರಾಜಕೀಯ ಪ್ರೇರಿತವಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಸ್ಪಷ್ಟಪಡಿಸಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯತ್ ಕಚೇರಿ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಉಪ ಚುನಾವಣೆಗೂ ಸಿಬಿಐ ದಾಳಿಗೂ ಯಾವುದೇ ಸಂಬಂಧವಿಲ್ಲ. ಎಲ್ಲದಕ್ಕೂ ರಾಜಕೀಯ ಬೆರೆಸುವುದು ಕಾಂಗ್ರೆಸ್‍ನವರ ಹುಟ್ಟುಗುಣ. ಸಿಬಿಐ ದಾಳಿ ರಾಜಕೀಯ ಪ್ರೇರಿತವೆಂಬ ಅವರ ಆರೋಪದಲ್ಲಿ ಹುರುಳಿಲ್ಲ. ಒಂದು ವೇಳೆ ನಾವು ಎರಡೂ ಕ್ಷೇತ್ರಗಳಲ್ಲಿ ಸೋಲನ್ನ ನುಭವಿಸುತ್ತೇವೆ ಎಂದೇ ಭಾವಿಸೋಣ, ಏನಾಗುತ್ತದೆ. ನಾವು ಈಗಾಗಲೇ ಸುಭದ್ರ ಸರ್ಕಾರ ನಡೆಸುತ್ತಿದ್ದೇವೆ. ಬಿಜೆಪಿಗೆ ಸಂಪೂರ್ಣ ಬಹುಮತವಿದೆ. ಆದ್ದರಿಂದ ದಾಳಿಗೂ, ಉಪಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಸಿಬಿಐ, ಐಟಿ, ಇಡಿ ಸ್ವಾಯತ್ತ ಸಂಸ್ಥೆಗಳಾಗಿದ್ದು, ಭ್ರಷ್ಟಾಚಾರದ ಆರೋಪ ಕೇಳಿಬಂದಾಗ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಯಲು ಮಾಡುವುದು ಅವುಗಳ ಕರ್ತವ್ಯ. ಅವುಗಳನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ಶಿವಕುಮಾರ್ ಅವರು ಪ್ರಾಮಾಣಿಕರಾಗಿದ್ದರೆ, ತನಿಖೆಯಿಂದ ಸಾಬೀತಾಗಲಿ ಬಿಡಿ, ಅದನ್ನು ಬಿಟ್ಟು ಎಲ್ಲದಕ್ಕೂ ರಾಜಕೀಯ ಬೆರೆಸುವುದು ಸರಿಯಲ್ಲ ಎಂದ ಅವರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಬಹುದೊಡ್ಡ ನಾಯಕ, ಒಂದು ವೇಳೆ ಸಿಬಿಐ ಟಾರ್ಗೆಟ್ ಮಾಡಬೇಕೆಂದಿದ್ದರೆ, ಅವರ ಮನೆ ಮೇಲೂ ದಾಳಿ ಮಾಡಬಹುದಾಗಿತ್ತಲ್ಲ ಎಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಮಿತ್ ಶಾ ಮನೆ ಮೇಲೂ ದಾಳಿ ಮಾಡಲಾಗಿತ್ತು, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಅವರನ್ನೂ ಜೈಲಿಗೆ ಹಾಕಲಾಗಿತ್ತು, ಹಾಗಾದರೆ, ಅದೆಲ್ಲವನ್ನೂ ಕಾಂಗ್ರೆಸ್ ರಾಜಕೀಯ ಪ್ರೇರಿತ ಎನ್ನಬಹುದಾಗಿತ್ತಲ್ಲವೇ. ಯಾವುದೇ ಭ್ರಷ್ಟಾಚಾರದ ಆರೋಪ ಬಂದಾಗ ಅದರ ಸತ್ಯಾಸತ್ಯತೆಯನ್ನು ಅರಿಯಲೆಂದೇ ಇಂತಹ ಸ್ವಾಯತ್ತ ಸಂಸ್ಥೆಗಳು ತನಿಖೆ ಕೈಗೊಂಡು ನೈಜತೆಯನ್ನು ಪತ್ತೆ ಮಾಡಲಿವೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಬಿಡಿ ಎಂದು ಡಾ.ಸುಧಾಕರ್ ಹೇಳಿದರು.

 

Translate »