ಮೈಸೂರು ಪ್ರವಾಸೋದ್ಯಮದಿಂದ `ಆಹ್ವಾನ’
ಮೈಸೂರು

ಮೈಸೂರು ಪ್ರವಾಸೋದ್ಯಮದಿಂದ `ಆಹ್ವಾನ’

June 7, 2020

ಮೈಸೂರು,ಜೂ.6(ಎಂಟಿವೈ)- ಕೊರೊನಾ ಹಾವಳಿಯಿಂದ ಕಂಗೆಟ್ಟಿರುವ ಮೈಸೂರು ಪ್ರವಾಸೋದ್ಯಮ ಗರಿಗೆದರಲು ಸಜ್ಜಾಗಿದ್ದು, `ನೋಡು ಬಾ ನಮ್ಮೂರ’ ಕಾರ್ಯಕ್ರಮ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ರೂಪುರೇಷೆ ಸಿದ್ಧಪಡಿಸುತ್ತಿದೆ.

ರಾಜ್ಯದಲ್ಲಿ ಜೂ.8ರಿಂದ ದೇವಾಲಯ, ಮೃಗಾಲಯ, ಹೋಟೆಲ್, ರೆಸ್ಟೋರೆಂಟ್, ಮಾಲ್ ಸೇರಿದಂತೆ ಜನಾಕರ್ಷಕ ತಾಣಗಳ ಪುನಾ ರಂಭಕ್ಕೆ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಜೂ.10ರಿಂದ ಪ್ರವಾಸಿತಾಣಗಳ ಪುನಾರಂಭಕ್ಕೂ ಪ್ರವಾಸೋದ್ಯಮ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಹೊರ ರಾಜ್ಯದ ಪ್ರವಾಸಿ ತಾಣ ಗಳಿಗೆ ರಾಜ್ಯ ಪ್ರವಾಸಿಗರು ತೆರಳಲು ಹಿಂದೇಟು ಹಾಕುವಂತೆಯೇ ಹೊರರಾಜ್ಯ ಹಾಗೂ ವಿದೇಶಿ ಪ್ರವಾಸಿಗರು ರಾಜ್ಯಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸಿ ತಾಣ ಗಳಿಗೆ ಭೇಟಿ ನೀಡುವಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರವಾಸಿಗರಿಗೆ ಆಹ್ವಾನ ನೀಡುವ ಕಾರ್ಯ ಆರಂಭವಾಗಲಿದೆ.

ಸಿದ್ಧತೆ: ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಪಿ. ಜನಾರ್ಧನ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳತ್ತ ಪ್ರವಾಸಿಗರನ್ನು ಸೆಳೆಯಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ, ಸಿದ್ಧತೆ ನಡೆದಿದೆ. ಜಿಲ್ಲೆಯ ಪ್ರವಾಸಿ ತಾಣಗಳು ಸುರಕ್ಷಿತ ವಾಗಿವೆ ಎಂಬುದನ್ನು ಪ್ರವಾಸಿಗರಿಗೆ ತಿಳಿಸುವುದು ನಮ್ಮ ಜವಾಬ್ದಾರಿ. ಪ್ರವಾಸಿಗರ ಸುರಕ್ಷತೆ ಕೈಗೊಂಡಿರುವ ಕ್ರಮಗಳು, ಆಫರ್‍ಗಳ ಬಗ್ಗೆ ಹೋಟೆಲ್ ಉದ್ಯಮಿಗಳು, ಟ್ರಾವೆಲ್ಸ್ ಅಸೋಸಿಯೇಷನ್‍ನಿಂದ ಮಾಹಿತಿ ಪಡೆದುಕೊಂಡಿದ್ದೇವೆ ಎಂದರು. ಮೈಸೂರಿನ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿ ಇಲಾಖೆಯಿಂದ ಪುನಾರಂಭ ಮಾಡಬೇಕಾದ ಯಾವುದೇ ಚಟುವಟಿಕೆ ಅಥವಾ ತಾಣಗಳಿಲ್ಲ. ಅರಮನೆ, ನ್ಯಾಷನಲ್ ಪಾರ್ಕ್, ಮೃಗಾಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳೂ ಪ್ರತ್ಯೇಕ ಇಲಾಖೆಗೆ ಸೇರಿವೆ. ಈ ಹಿನ್ನೆಲೆಯಲ್ಲಿ ಆಯಾ ಪ್ರವಾಸಿ ತಾಣಗಳ ಅಧಿಕಾರಿಗಳು ಪುನರಾರಂಭದ ಬಗ್ಗೆ ನಿಲುವು ತಾಳುತ್ತಾರೆ. ಪ್ರವಾಸಿ ತಾಣ ಸುರಕ್ಷಿತವಾಗಿವೆ ಎಂದು ಜನರಿಗೆ ಮನವರಿಕೆ ಮಾಡಿಕೊಡು ವುದೇ ನಮ್ಮ ಇಲಾಖೆ ಕೆಲಸವಾಗಿದೆ. ಅದಕ್ಕೆ ಕಾರ್ಯಕ್ರಮ ರೂಪಿಸ ಲಾಗುತ್ತಿದೆ. ಮೈಸೂರು ಜಿಲ್ಲೆಯ ಪ್ರವಾಸಿ ತಾಣ ಸುರಕ್ಷಿತ ಹಾಗೂ ಸಂಪದ್ಭರಿತ. ನ್ಯಾಷನಲ್ ಪಾರ್ಕ್ ಜನಾಕರ್ಷಕ ಎಂದರು.

`ನೋಡು ಬಾ ನಮ್ಮೂರ’
ಪ್ರವಾಸೋದ್ಯಮ ಇಲಾಖೆ ಸೋಮವಾರ ಅಥವಾ ಮಂಗಳ ವಾರ ಬಳಿಕ ಪ್ರವಾಸಿಗರ ಆಕರ್ಷಣೆಗಾಗಿ ವಿವಿಧ ಸ್ವರೂಪದ ಜಾಗೃತಿ ಕಾರ್ಯಕ್ರಮ ಆಯೋಜಿಸಲಿದೆ. `ನೋಡು ಬಾ ನಮ್ಮೂರ’ ಶೀರ್ಷಿಕೆಯಲ್ಲಿ ಪ್ರವಾಸಿಗರಿಗೆ ಆಹ್ವಾನ ಕಾರ್ಯಕ್ರಮ ರೂಪಿಸು ತ್ತಿದೆ. ಜಿಲ್ಲೆಗಳ ಪ್ರವಾಸಿ ತಾಣ, ಪ್ರಾದೇಶಿಕ ವಿಭಾಗದಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಕಿರುಚಿತ್ರ, ವಿಡಿಯೊ, ಜಾಹೀರಾತು ಫಲಕ, ವಾಹಿನಿ ಹಾಗೂ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಪ್ರವಾಸಿಗರನ್ನು ಆಹ್ವಾನಿಸಲು ನಿರ್ದರಿಸಲಾಗಿದೆ. ಪರಿಣಿತರ ಅಭಿ ಪ್ರಾಯ ಕಲೆ ಹಾಕಿದ ನಂತರವಷ್ಟೇ ಕಾರ್ಯಕ್ರಮ ಬಿತ್ತರಗೊಳ್ಳಲಿದೆ.

Translate »