ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಮಾಜಿ ಮೇಯರ್ ನಾರಾಯಣ ಆಗ್ರಹ
ಮೈಸೂರು

ಗುತ್ತಿಗೆ ಪೌರಕಾರ್ಮಿಕರ ಖಾಯಂಗೆ ಮಾಜಿ ಮೇಯರ್ ನಾರಾಯಣ ಆಗ್ರಹ

June 7, 2020

ಮೈಸೂರು, ಜೂ. 6(ಆರ್‍ಕೆ)- ಮೈಸೂರು ಸೇರಿದಂತೆ ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಗುತ್ತಿಗೆ ಆಧಾರದ ಪೌರಕಾರ್ಮಿಕರ ಸೇವೆಯನ್ನು ಸರ್ಕಾರ ಖಾಯಂಗೊಳಿಸಬೇಕು ಎಂದು ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ, ಮಾಜಿ ಮೇಯರ್ ನಾರಾಯಣ ಒತ್ತಾಯಿಸಿದ್ದಾರೆ. ನಿವೃತ್ತರಾದ, ಸಾವನ್ನಪ್ಪಿರುವ ಅಥವಾ ಸ್ವಯಂ ನಿವೃತ್ತಿ ಪಡೆದಿರುವುದರಿಂದ ಖಾಲಿಯಾಗಿರುವ ಶೇ.1ರಷ್ಟು ಖಾಯಂ ಪೌರಕಾರ್ಮಿಕರ ಸ್ಥಾನ ಭರ್ತಿ ಮಾಡುವುದರಿಂದ ಹಲವು ವರ್ಷಗಳಿಂದ ಬಾಕಿ ಇರುವ ನಮ್ಮ ಬೇಡಿಕೆ ಈಡೇರಿಕೆ ಯಾಗುವುದಿಲ್ಲ. ಅದು ಸರ್ಕಾರದ ನಿರಂತರ ಪ್ರಕ್ರಿಯೆಗಳಲ್ಲೊಂದಷ್ಟೆ ಎಂದು ಅವರು ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ 1,200 ಸೇರಿದಂತೆ ರಾಜ್ಯದಾದ್ಯಂತ ಸುಮಾರು 40,000 ಪೌರಕಾರ್ಮಿಕರು ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಮ ಪಂಚಾಯ್ತಿಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಾರಾಯಣ ಅವರು ಹೇಳಿದರು. ಅವರ ಸೇವೆಯನ್ನು ಖಾಯಂಗೊಳಿಸಿ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕೆಂದು ನಾವು ಹಲವು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಯಾವ ಸರ್ಕಾರವೂ ನಮ್ಮ ಬೇಡಿಕೆಗಳನ್ನು ಈಡೇರಿಸಲಿಲ್ಲ. ಇದೇ ಯಡಿಯೂರಪ್ಪ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಪೌರಕಾರ್ಮಿಕರನ್ನು ಖಾಯಂಗೊಳಿಸುತ್ತೇನೆಂದು ಹೇಳಿದ್ದರು ಎಂದು ಅವರು ಉಲ್ಲೇಖಿಸಿದರು.

Translate »