ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮತ್ತೊಂದು ನಿರ್ಮಾಣ ತೆರವು
ಮೈಸೂರು

ಇರ್ವಿನ್ ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗಿದ್ದ ಮತ್ತೊಂದು ನಿರ್ಮಾಣ ತೆರವು

August 17, 2022

ಮೈಸೂರು, ಆ. 16(ಆರ್‍ಕೆ)- ಮೈಸೂರಿನ ಹೃದಯ ಭಾಗದ ಇರ್ವಿನ್ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಅಡ್ಡಿಯಾಗಿದ್ದ ಧಾರ್ಮಿಕ ಕೇಂದ್ರದ ಕಟ್ಟಡದ ಕೆಲ ಭಾಗವನ್ನು ತೆರವುಗೊಳಿಸಲಾಗಿದೆ.

ಗುರುತಿಸಲಾದ ನಿರ್ಮಾಣದ ಭಾಗವನ್ನು ವಕ್ಫ್ ಬೋರ್ಡ್‍ನಿಂದಲೇ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿ ಸಹಕಾರ ನೀಡಿದ್ದು, ಉಳಿದ ಕಾಂಪೌಂಡ್ ಗೋಡೆ ಯನ್ನು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ರಾತ್ರಿ ಜೆಸಿಬಿ ಮೂಲಕ ತೆರವುಗೊಳಿಸಿದರು.

ಈ ಹಿನ್ನೆಲೆಯಲ್ಲಿ ಇಂದು ಶಾಸಕ ಎಲ್. ನಾಗೇಂದ್ರ, ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ, ಕಾರ್ಪೊರೇಟರ್ ಗಳಾದ ಎಂ.ಡಿ.ನಾಗರಾಜ್, ಸತೀಶ್, ಪಾಲಿಕೆ ಸೂಪ ರಿಂಟೆಂಡಿಂಗ್ ಇಂಜಿನಿಯರ್ ಮಹೇಶ್, ಜಗದೀಶ್, ಮುಖಂಡರಾದ ಅರವಿಂದ, ಬೋರ್ಡ್ ಪ್ರಮುಖರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕ ನಾಗೇಂದ್ರ, ಇರ್ವಿನ್ ರಸ್ತೆಯಲ್ಲಿ ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಅಗಲೀಕರಣಗೊಳಿಸುವ ಕಾಮಗಾರಿ ಯನ್ನು ಪಾಲಿಕೆಯಿಂದ ಕೈಗೆತ್ತಿಕೊಳ್ಳಲಾಗಿತ್ತು. ಇಕ್ಕೆಲ ಗಳಲ್ಲಿದ್ದ ಅಂಗಡಿ-ಮುಂಗಟ್ಟುಗಳ ಕಟ್ಟಡದ ಕೆಲ ಭಾಗವನ್ನು ಸೂಕ್ತ ಪರಿಹಾರ ನೀಡಿದ ನಂತರ ಕೆಡವಿ ಈಗಾಗಲೇ ರಸ್ತೆ ಅಗಲೀಕರಣಗೊಳಿಸಲಾಗಿದೆ. ಕೆಲ ತಾಂತ್ರಿಕ ಕಾರಣದಿಂದಾಗಿ ನೆಹರು ಸರ್ಕಲ್‍ನ ಎಸ್‍ಬಿಐ ಪಕ್ಕದಲ್ಲಿರುವ ಧಾರ್ಮಿಕ ಕಟ್ಟಡ ಹಾಗೂ ಮತ್ತೊಂದು ಖಾಸಗಿ ಕಟ್ಟಡವನ್ನು ಕೆಲ ತಾಂತ್ರಿಕ ಕಾರಣದಿಂದ ತೆರವುಗೊಳಿಸಿರಲಿಲ್ಲ ಎಂದರು. ಇದೀಗ ವಕ್ಫ್ ಬೋರ್ಡ್ ಅಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಮಾತನಾಡಿ, ಸೌಹಾರ್ದಯುತವಾಗಿ ಗುರ್ತಿಸಿರುವ ಕಟ್ಟಡದ ಜಾಗವನ್ನು ಅವರೇ ತೆರವುಗೊಳಿಸಿ ರಸ್ತೆ ಅಗಲೀಕರಣ ಗೊಳಿಸಲು ಸಹಕಾರ ನೀಡಿದ್ದಾರೆ. ಕಾಮಗಾರಿ ಆರಂಭವಾಗಿದ್ದು, ವಾರದೊಳಗಾಗಿ ಅಗಲೀಕರಣ ಕೆಲಸ ಪೂರ್ಣಗೊಳ್ಳಲಿದೆ ಎಂದು ನಾಗೇಂದ್ರ ತಿಳಿಸಿದರು.

ಉಳಿದ ಕಾಂಪೌಂಡ್ ಭಾಗವನ್ನಷ್ಟೇ ಪಾಲಿಕೆಯಿಂದ ನೆಲಸಮಗೊಳಿಸಲಾಗಿದ್ದು, ಮತ್ತೊಂದು ಖಾಸಗಿ ಒಡೆತನದ ಕಟ್ಟಡದ ಭಾಗವನ್ನೂ ಇಷ್ಟರಲ್ಲೇ ತೆರವುಗೊಳಿಸಿ ಇರ್ವಿನ್ ರಸ್ತೆ ಅಗಲೀಕರಣದ ಉಳಿಕೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲಾಗು ವುದು ಎಂದು ನಾಗೇಂದ್ರ ತಿಳಿಸಿದರು. ಎರಡೂ ಕಡೆ ಕಾಂಕ್ರಿಟ್ ಬಾಕ್ಸ್ ಡ್ರೇನ್, ರಸ್ತೆ ವಿಭಜಕ, ಸ್ಟ್ರೀಟ್ ಲೈಟ್ಸ್, ಡಾಂಬರೀಕರಣ ಕಾಮಗಾರಿ ಪೂರ್ಣಗೊಳಿಸಿದಲ್ಲಿ ಇರ್ವಿನ್ ರಸ್ತೆಯಲ್ಲಿ ವಾಹನಗಳು ಸರಾಗವಾಗಿ ಸಂಚರಿಸಲು ಸಾಧ್ಯವಾಗುತ್ತದೆ ಎಂದ ಅವರು, ಕಟ್ಟಡ ತೆರವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ದೇವರಾಜ ಉಪವಿಭಾಗದ ಎಸಿಪಿ ಎಂ.ಎನ್. ಶಶಿಧರ್, ದೇವರಾಜ ಠಾಣೆ ಇನ್ಸ್‍ಪೆಕ್ಟರ್ ಪಿ.ಪಿ. ಸಂತೋಷ್ ಹಾಗೂ ಸಿಬ್ಬಂದಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

Translate »