ಮುಡಾ ಅವ್ಯವಹಾರಗಳ ತನಿಖೆಗೆ ತಾಂತ್ರಿಕ ಸಮಿತಿ
ಮೈಸೂರು

ಮುಡಾ ಅವ್ಯವಹಾರಗಳ ತನಿಖೆಗೆ ತಾಂತ್ರಿಕ ಸಮಿತಿ

August 17, 2022

ಮೈಸೂರು,ಆ.16(ಆರ್‍ಕೆ)-ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾದ ಭಾರೀ ಅವ್ಯವಹಾರ, ಅನುದಾನ ದುರ್ಬಳಕೆ ಸೇರಿ ದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸರ್ಕಾರ ತಾಂತ್ರಿಕ ಸಮಿತಿ ರಚಿಸಿದೆ.

ತಾಂತ್ರಿಕ ಸಮಿತಿ ಅಧ್ಯಕ್ಷರಾಗಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ಟಿ.ವಿ.ಮುರಳಿ, ಆಗಸ್ಟ್ 11ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದು, ಪ್ರಾಧಿಕಾರದಲ್ಲಿ ಅನುದಾನ ದುರ್ಬ ಳಕೆ, ಬದಲಿ ನಿವೇಶನಗಳ ಹಂಚಿಕೆ, ಭೂ ಸ್ವಾಧೀನ ಪರಿಹಾರ ಪ್ರಾಧಿಕಾರದ ಸಭೆಯಲ್ಲಿ ಕಾಯ್ದೆ, ನಿಯಮ, ವಲಯ ನಿಯಮಗಳಿಗೆ ವಿರುದ್ಧವಾಗಿ ವಿಷಯಗಳನ್ನು ಮಂಡಿಸಿ ನಿರ್ಣಯ ಕೈಗೊಂಡಿ ರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ ಎಂದು ತಿಳಿಸಿದ್ದಾರೆ. ಮುಡಾ ಅಧ್ಯಕ್ಷರ ವಿರುದ್ಧ ಆಯುಕ್ತರು ಹಾಗೂ ಆಯುಕ್ತರ ವಿರುದ್ಧ ಅಧ್ಯಕ್ಷರೂ ಪರಸ್ಪರ ಆರೋಪಿಸಿ ದೂರುಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ದೂರುಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಾಂತ್ರಿಕ ಸಮಿತಿ ರಚಿಸಿದ್ದು, ಆ ಕುರಿತು ತನಿಖೆ ಕೈಗೊಂಡು ಸ್ಪಷ್ಟ ಅಭಿಪ್ರಾಯದೊಂದಿಗೆ 15 ದಿನದೊಳಗಾಗಿ ವರದಿ ಸಲ್ಲಿಸುವಂತೆ ಸರ್ಕಾರ ಆದೇಶಿಸಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಸದರಿ ದೂರುಗಳ ಸಂಬಂಧದ ಎಲ್ಲಾ ಕಡತಗಳನ್ನು ಸಿದ್ಧಪಡಿಸಿಕೊಂಡು ಆಗಸ್ಟ್ 17ರಂದು ಪ್ರಾಧಿಕಾರಕ್ಕೆ ಭೇಟಿ ನೀಡುವ ತಾಂತ್ರಿಕ ಸಮಿತಿ ಮುಂದೆ ಹಾಜರುಪಡಿಸುವಂತೆ ಸೂಚಿಸಲಾಗಿದ್ದು, ಆ ವೇಳೆ ಸಂಬಂಧಪಟ್ಟ ಅಧಿಕಾರಿಗಳನ್ನು ನಿಯೋಜಿಸಿ ದೂರಿನ ಸಂಬಂಧ ಕೋರಲಾದ ಕಡತಗಳು ಹಾಗೂ ಮಾಹಿತಿ ಒದಗಿಸಿ ತನಿಖೆಗೆ ಸಹಕರಿಸುವಂತೆಯೂ ಮುರಳಿ, ಮುಡಾ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Translate »