ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ವಿತರಣೆ
ಮೈಸೂರು

ವಿದ್ಯಾರ್ಥಿಗಳಿಗೆ ವಚನ ದೀವಿಗೆ ಪ್ರಮಾಣಪತ್ರ ವಿತರಣೆ

January 21, 2021

ಮೈಸೂರು,ಜ.20-ವಚನಗಳು ಅನುಭಾವಿಗಳ ಸಾಹಿತ್ಯ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ಹೇಳಿದರು.

ಶರಣು ವಿಶ್ವವಚನ ಫೌಂಡೇಷನ್ ಮೈಸೂರಿನ ಗೌರಿಶಂಕರನಗರದಲ್ಲಿ ಹಮ್ಮಿಕೊಂಡಿದ್ದ ಅನ್ನಪೂರ್ಣ ಮತ್ತು ಪ್ರೇಮ ಪ್ರಭುಸ್ವಾಮಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ, ಶರಣರು ತಮ್ಮ ಅನುಭವಗಳನ್ನು ಹೃದಯದಿಂದ ಹೃದಯಕ್ಕೆ ಮುಟ್ಟುವಂತೆ ಬಿಡಿ ಮಾತುಗಳ ಮೂಲಕ ಬಿಡಿ ಮುತ್ತುಗಳಂತೆ ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುವುದರ ಮೂಲಕ ಜನರ ಮಧ್ಯದಲ್ಲಿ ಹುಟ್ಟಿದ ಸಾಹಿತ್ಯ ಇಂದು ವಿಶ್ವಾದ್ಯಂತ ಜನಪ್ರಿಯವಾಗಲು ಕಾರಣರಾದರು.

ವಚನ ಎಂಬುದು ಪ್ರತಿಜ್ಞೆ ಹಾಗೂ ಆತ್ಮಸಾಕ್ಷಿಯ ಮಾತು. ನುಡಿದಂತೆ ನಡೆದ ಆತ್ಮ ಸಾಕ್ಷಿಯ ವಾಣಿಯೇ ವಚನಗಳು. ವಚನ ಸಾಹಿತ್ಯ ಪ್ರಕಟಣಾ ಕಾರ್ಯ ಡಾ.ಫ.ಗು. ಹಳಕಟ್ಟಿ ಯವರಿಂದ ವಿಜಾಪುರದಲ್ಲಿ ಪ್ರಾರಂಭವಾಗಿ, ಧಾರವಾಡದಲ್ಲಿ ಡಾ.ಹಿರೇಮಠರವರಿಂದ ಬೆಳೆದು, ಗದುಗಿನಲ್ಲಿ ಡಾ.ಎಂ.ಎಂ.ಕಲಬುರ್ಗಿಯವರಿಂದ ಒಂದು ಅಂತಿಮ ರೂಪ ಪಡೆದು ಜನಮಾನಸಕ್ಕೆ ಕೇವಲ ಎರಡು ಹೊತ್ತಿಗೆಯಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ವಚನಗಳನ್ನು ನೀಡಿರುವುದು ವಚನಪ್ರಿಯರಿಗೆ ಅಮೃತ ಕುಡಿದಂತೆ ಆಯಿತು ಎಂದರು.

ಗೌರಿಶಂಕರನಗರದ ಪಂಚಗವಿಮಠದ ಗುರುಬಸವಲಿಂಗಸ್ವಾಮಿಗಳು ಮಾತನಾಡಿ, ವಚನಗಳು ಕರ್ನಾಟಕದ ಜನಸಾಮಾನ್ಯರ ಧ್ವನಿಯಾಗಿ ರೂಪು ತಾಳಿ ಸಮಸಮಾಜ ನಿರ್ಮಾಣ ಮಾಡಲು ಸಹಕಾರಿಯಾದವು. ಇವುಗಳನ್ನು ಅಧ್ಯಯನ ಮಾಡಿದರೆ ಪ್ರತಿಯೊಬ್ಬರೂ ಸುಸಂಸ್ಕøತರಾಗಿ ಸಂಸ್ಕಾರಯುತ ಸಮಾಜ ನಿರ್ಮಾಣಕ್ಕೆ ಸಹಕಾರಿ ಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಶರಣು ವಿಶ್ವವಚನ ಫೌಂಡೇಷನ್ ಉಪಾಧ್ಯಕ್ಷೆ ಪ್ರೇಮ ಪ್ರಭುಸ್ವಾಮಿ, ಕೇಂದ್ರೀಯ ಸಂಚಾಲಕ ಲಿಂಗಣ್ಣ, ಶಿವಪುರ ಉಮಾಪತಿ, ಪ್ರಭುಸ್ವಾಮಿ, ಉಷಾ ನಾಗೇಶ್, ಮಂಜುನಾಥ್ ಉಪಸ್ಥಿತರಿದ್ದರು.

 

 

Translate »