ಇ-ಜನ್ಮ ಮೂಲಕ ಜನನ, ಮರಣ ಪ್ರಮಾಣ ಪತ್ರ ವಿತರಣೆ
ಮೈಸೂರು

ಇ-ಜನ್ಮ ಮೂಲಕ ಜನನ, ಮರಣ ಪ್ರಮಾಣ ಪತ್ರ ವಿತರಣೆ

April 1, 2021

ಮೈಸೂರು,ಮಾ.31-ನಾಗರಿಕ ನೋಂದಣಿ ಪದ್ಧತಿಯಡಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ಅಪರ ಜಿಲ್ಲಾಧಿಕಾರಿ ಬಿ.ಎಸ್.ಮಂಜುನಾಥಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಈ ಹಿಂದೆ ಬರಹದ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತಿತ್ತು. ಆದರೆ ಪ್ರಸ್ತುತ ಆನ್‍ಲೈನ್ ಇ-ಜನ್ಮದ ಮೂಲಕ ಜನನ ಮತ್ತು ಮರಣ ಪ್ರಮಾಣ ಪತ್ರವನ್ನು ವಿತರಿಸಲಾಗುತ್ತಿದ್ದು, ಮೊದಲು ದೃಢೀಕರಣ ಪ್ರಮಾಣ ಪತ್ರವನ್ನು ಉಚಿತವಾಗಿ ನಂತರದ ಪ್ರತಿಗಳಿಗೆ ಶುಲ್ಕ ವಿಧಿಸಿ ವಿತರಿಸಲಾಗುವುದು ಎಂದು ಎಡಿಸಿ ಮಂಜುನಾಥಸ್ವಾಮಿ ಅಧಿಕಾರಿಗಳು ತಿಳಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿ-16ರ ಸೂಚಕ 16.9.1ರ ಸೂಚಕಕ್ಕೆ ಸಂಬಂಧಿಸಿದಂತೆ ಜನನ ಘಟನೆಗಳ ಶೇ.100ರಷ್ಟು ನೋಂದಣಿ ಸಾಧಿಸಲು ಹಾಗೂ ಜನನ ಮರಣಗಳ ನೋಂದಣಿ ಅಧಿನಿಯಮ 1969 ಮತ್ತು 1999ರ ಸೂಚನೆಯ ಅನುಸಾರ ಜನನ ಮತ್ತು ಮರಣ ಘಟನೆಗಳ ನೋಂದಣಿಯನ್ನು ಈ ಶೇ.100ರಷ್ಟು ಸಾಧಿಸಲು ನೋಂದಣಾಧಿಕಾರಿ/ ಉಪನೋಂದಣಾಧಿಕಾರಿಗಳ ವ್ಯಾಪ್ತಿಯಲ್ಲಿ ಘಟಿಸುವಂತಹ ಎಲ್ಲಾ ಘಟನೆಗಳನ್ನು ನೋಂದಾಯಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ತಾಲೂಕು ಮಟ್ಟದಲ್ಲಿ ಇರುವ ಸಮಸ್ಯೆಗಳನ್ನು ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮನ್ವಯ ಸಮಿತಿ ಸಭೆ ಕೈಗೊಂಡು ಜನನ ಮರಣ ಶೇ.100ಕ್ಕೆ 100ರಷ್ಟು ನೋಂದಣಿ ಮಾಡುವುದು, ಕುಂದು-ಕೊರತೆಗಳು, ಸಮಸ್ಯೆಗಳು, ಗೊಂದಲಗಳನ್ನು ತಾಲೂಕು ಮಟ್ಟದಲೇ ಬಗೆಹರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜನನ ಮರಣ ನೋಂದಾಯಿತ ಘಟನೆಗಳ ಪ್ರಮಾಣ ಪತ್ರಗಳು ಎಲ್ಲೆಡೆ ಸಾರ್ವಜನಿಕ ರಿಗೆ ಲಭ್ಯವಾಗುವ ಸಲುವಾಗಿ ಸರ್ಕಾರ ಅವಕಾಶ ಕಲ್ಪಿಸಿದ್ದು, ನೋಂದಣಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಸಹಿ ಉಪಯೋಗಿಸಿ ನೋಂದಣಿ ಕಾರ್ಯ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪ್ರಮಾಣ ಪತ್ರಗಳನ್ನು ವಿತರಿಸಲು, ನಾಗರಿಕ ನೋಂದಣಿ ದಾಖಲೆ, ಜನನ- ಮರಣದ ಕಾನೂನು ದಾಖಲಾತಿಗಳನ್ನು ಪಡೆದು ಸಂರಕ್ಷಿಸಲು ಸಂರಕ್ಷಣಾಧಿಕಾರಿಗಳಿಗೆ ಅಗತ್ಯ ಕ್ರಮ ವಹಿಸುವಂತೆ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾ, ಜಿಪಂ, ತಾಲೂಕು ತಹಸೀಲ್ದಾರ್, ಆರೋಗ್ಯಾಧಿಕಾರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಪರವಾಗಿ ಜನನ ಮತ್ತು ಮರಣ ವಿಭಾಗದ ಅಧಿಕಾರಿಗಳು, ಸ್ಥಳೀಯ ಸಂಸ್ಥೆಯ ಪೌರಾಯುಕ್ತರು ಹಾಗೂ ಇತರರು ಹಾಜರಿದ್ದರು.

Translate »