ಪಾಲಿಕೆಯಿಂದ ಆಸ್ತಿ ತೆರಿಗೆ  ಏರಿಕೆ ವಿರೋಧಿಸಿ ಪ್ರತಿಭಟನೆ
ಮೈಸೂರು

ಪಾಲಿಕೆಯಿಂದ ಆಸ್ತಿ ತೆರಿಗೆ ಏರಿಕೆ ವಿರೋಧಿಸಿ ಪ್ರತಿಭಟನೆ

April 1, 2021

ಮೈಸೂರು,ಮಾ.31(ಆರ್‍ಕೆಬಿ)- ಮೈಸೂರು ಮಹಾನಗರಪಾಲಿಕೆಯಿಂದ ಆಸ್ತಿ ತೆರಿಗೆ ಏರಿಕೆಯನ್ನು ಮೈಸೂರು ಕನ್ನಡ ವೇದಿಕೆ ಖಂಡಿಸಿದೆ. ಕಳೆದ ವರ್ಷದ ಕೊರೊನಾ ಆಘಾತದಿಂದ ಜನತೆ ಇನ್ನೂ ಚೇತರಿಸಿಕೊಳ್ಳದೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ಇದು ಸರ್ಕಾರಕ್ಕೆ ತಿಳಿಯದ ವಿಷಯವೇನಲ್ಲ. ಹೀಗಿದ್ದೂ ಮಹಾ ನಗರಪಾಲಿಕೆ ಏಕಾಏಕಿ ಆಸ್ತಿ ತೆರಿಗೆ ಏರಿಕೆ ಮಾಡಿರುವುದು ಜನವಿರೋಧಿ ಕ್ರಮವಾಗಿದೆ ಎಂದು ವೇದಿಕೆ ಕಾರ್ಯ ಕರ್ತರು ಮೈಸೂರು ನಗರಪಾಲಿಕೆ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ನಗರದ ರಸ್ತೆಗಳು ಹದಗೆಟ್ಟಿವೆ. ನಗರಪಾಲಿಕೆಯ ಹಿಂಭಾಗದ ದಳವಾಯಿ ವಿದ್ಯಾಸಂಸ್ಥೆಯ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿದೆ. ಇಂತಹ ನೂರಾರು ರಸ್ತೆಗಳು ನಗರದಲ್ಲಿ ಹಳ್ಳಕೊಳ್ಳ ಗಳಿಂದ ಕೂಡಿದ್ದು, ಜನರು, ವಾಹನ ಸವಾರರು ಓಡಾಡಲಾಗದ ಸ್ಥಿತಿಯಲ್ಲಿವೆ. ಅಲ್ಲದೆ ನಗರದ ಅನೇಕ ವಾರ್ಡ್‍ಗಳಲ್ಲಿ ನೀರಿನ ಸಮಸ್ಯೆ ಇದೆ. ಹೀಗಿದ್ದೂ ನಗರದ ರಸ್ತೆ, ನೀರು ಇನ್ನಿತರೆ ಸೌಲಭ್ಯಗಳ ಅಭಿವೃದ್ಧಿ ಮಾಡದೇ ಏಕಾಏಕಿ ತೆರಿಗೆ ಏರಿಕೆ ಮಾಡಿರುವುದು ಸರಿಯಲ್ಲ ಎಂದು ದೂರಿದರು. ಅಲ್ಲದೆ ಸ್ವಚ್ಛ ಸರ್ವೇಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಪ್ರಕಟಣೆಗಳನ್ನು ಇಂಗ್ಲಿಷ್‍ನಲ್ಲೇ ಹೊರಡಿಸಲಾಗುತ್ತಿದ್ದು, ಇದು ಕನ್ನಡ ವಿರೋಧಿ ನೀತಿಯಾಗಿದೆ. ಕೂಡಲೇ ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವತ್ತ ಪಾಲಿಕೆ ಸದಸ್ಯರು, ಅಧಿಕಾರಿಗಳು ಚಿಂತಿಸಿ, ತೆರಿಗೆ ಏರಿಕೆ ಕೈಬಿಡಬೇಕು. ಪಾಲಿಕೆಯ ಎಲ್ಲಾ ಪ್ರಕಟಣೆಗಳು ಕನ್ನಡದಲ್ಲೇ ಇರಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಪ್ಯಾಲೆಸ್ ಬಾಬು, ಸಿದ್ದಪ್ಪ, ಗೋಪಿ ಉಪಸ್ಥಿತರಿದ್ದರು.

 

 

Translate »