ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ ಸಚಿವ ಈಶ್ವರಪ್ಪ ಮುಖ್ಯಮಂತ್ರಿಗೆ ನಿಷ್ಠರಾಗಿಲ್ಲ
ಬೆಂಗಳೂರು, ಏ.2(ಕೆಎಂಶಿ)- ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಿಡು ಗಡೆ ಮಾಡಿರುವ ಮಾರ್ಗಸೂಚಿಗಳು ಎಲ್ಲರಿಗೂ ಅನ್ವಯವಾಗಬೇಕು. ಅದನ್ನು ಬಿಟ್ಟು ತಮಗೆ ಬೇಕಾ ದಾಗ ಮಾರ್ಗಸೂಚಿ ಬಿಡುಗಡೆ ಮಾಡಿ, ಬೇಡವಾ ದಾಗ ಅದನ್ನು ಸಡಿಲ ಮಾಡಬಾರದು. ಆ ರೀತಿ ಮಾಡಿ ದರೆ ನಾವು ರಾಜಕೀಯ ಹೊರಾಟ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸರ್ಕಾರ ಮಾರ್ಗಸೂಚಿ ಮಾಡಲಿ, ಅದು ಅವರಿಗೂ ಹಾಗೂ ಎಲ್ಲರಿಗೂ ಅನ್ವಯವಾಗುವಂತೆ ಮಾಡಲಿ. ಅವರಿಗೆ ಬೇಕಾದವರಿಗೆ ಅನುಕೂಲವಾಗುವ ರೀತಿಯಲ್ಲಿ ಮಾರ್ಗಸೂಚಿ ಮಾಡುವುದು ಬೇಡ. ಇದು ಪ್ರಜಾಪ್ರಭುತ್ವದ ಹಕ್ಕನ್ನು ಮೊಟಕುಗೊಳಿಸುವ ಪ್ರಯತ್ನವಾಗಿದೆ. ಜನರ ಸುರಕ್ಷತೆ ಹಾಗೂ ಒಳ್ಳೆಯದಕ್ಕಾಗಿ ಕಾನೂನು ಮಾಡಲಿ, ನಾವು ಬೇಡ ಎನ್ನುವುದಿಲ್ಲ. ಆ ಕಾನೂನನ್ನು ಎಲ್ಲರೂ ಪಾಲಿಸಬೇಕು. ಅವರಿಗೆ ಬೇಕಾದಾಗ ಕಾನೂನು ಸಡಿಲ ಮಾಡುವುದು, ಬೇಕಾದಾಗ ಕಠಿಣ ಮಾಡುವುದು ಸರಿಯಲ್ಲ. ಆ ರೀತಿ ಮಾರ್ಗಸೂಚಿ ಮಾಡಿದರೆ ನಾವು ನಮ್ಮದೇ ಆದ ರಾಜಕೀಯ ಹೋರಾಟ ಮಾಡುತ್ತೇವೆ.
ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದಾಗ ಈ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು? ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲು ಅವಕಾಶ ಕೊಟ್ಟಿರುವವರು ಯಾರು? ಅವರೇ ಪತ್ರ ಬರೆದು ನಮಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಈಶ್ವರಪ್ಪನವರು ಯಾರಿಗೆ ನಿಷ್ಠರಾಗಿದ್ದಾರೆ? ಸಂವಿಧಾನದ ವ್ಯಾಪ್ತಿಯಲ್ಲಿ ರಾಜ್ಯ ಪಾಲರು, ಮುಖ್ಯಮಂತ್ರಿಗಳಿಗೆ ಪ್ರಮಾಣವಚನ ಬೋಧಿ ಸಿದ್ದಾರೆ. ಈಶ್ವರಪ್ಪ ಅವರು ಮುಖ್ಯಮಂತ್ರಿಗಳ ವಿರುದ್ಧವೇ ಸಿಡಿದೆದ್ದು, ರಾಜ್ಯಪಾಲರಿಗೆ ಪತ್ರ ಬರೆದ ಮೇಲೆ ಅವರು ಯಾರಿಗೆ ನಿಷ್ಠೆ ತೋರುತ್ತಿದ್ದಾರೆ? ಇಲ್ಲಿರು ವವರೆಲ್ಲ ಚಿಕ್ಕ ಮಕ್ಕಳೇ? ಸಾಮಾನ್ಯ ಪ್ರಜ್ಞೆ ಇರುವ ಹಳ್ಳಿ ಜನರಿಗೂ ಇದರ ಬಗ್ಗೆ ಅರ್ಥವಾಗುತ್ತದೆ. ಸಿಎಂ ವಿರುದ್ಧ ಬೇಸತ್ತು, ಎಲ್ಲ ಕಾನೂನು ನಿಯಮ ಗಳನ್ನು ನಮೂದಿಸಿ ರಾಜ್ಯಪಾಲರಿಗೆ ಪತ್ರ ಬರೆದು ಅವರು ಅವರ ಪಕ್ಷಕ್ಕೆ ನಿಷ್ಠರಿರಬಹುದು. ಆದರೆ ಮುಖ್ಯಮಂತ್ರಿಗಳಿಗೆ ನಿಷ್ಠೆ ತೋರುತ್ತಿಲ್ಲ. ಇಲ್ಲಿ ಸರ್ಕಾರದ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಮುಖ್ಯಮಂತ್ರಿಗಳು ಯಾಕೆ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸದೇ ಸುಮ್ಮನೆ ಕೂತಿದ್ದಾರೆ? ಆ ಮೂಲಕ ಮುಖ್ಯಮಂತ್ರಿಗಳೇ ತಾವು ತಪ್ಪು ಮಾಡಿರುವುದಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆಯಾದರೂ ಮಾಡಿಕೊಳ್ಳಲಿ, ಏನಾದರೂ ಮಾಡಿಕೊಳ್ಳಲಿ. ಈಗಾಗಲೇ ಅವರು ಸಹಿ ಸಂಗ್ರಹ ಮಾಡಿಕೊಳ್ಳುತ್ತಿದ್ದಾರೆ. ಇದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ಶಾಸಕರು ಮಾತ ನಾಡಿದ್ದನ್ನು ಮೊದಲು ಇಡಿ, ಐಟಿಗೆ ಕಳುಹಿಸಿಕೊಡಲಿ. ನಾಳೆ ನಾನು ಕೇರಳಕ್ಕೆ ತೆರಳಲಿದ್ದು, ಐದು ಕಡೆ ಸಭೆಯಲ್ಲಿ ಪಾಲ್ಗೊಳ್ಳಲಿ ದ್ದೇನೆ. ಆ ನಂತರ ರಾಜ್ಯಕ್ಕೆ ಮರಳುತ್ತೇನೆ ಎಂದರು.