ಹಳಿ ತಪ್ಪಿರುವ ಕಸಾಪ ಸರಿ ದಾರಿಗೆಳೆಯುವ ಹೊಣೆ ಶಿಕ್ಷಕರದ್ದು
ಮೈಸೂರು

ಹಳಿ ತಪ್ಪಿರುವ ಕಸಾಪ ಸರಿ ದಾರಿಗೆಳೆಯುವ ಹೊಣೆ ಶಿಕ್ಷಕರದ್ದು

April 27, 2021

ಪಿರಿಯಾಪಟ್ಟಣ, ಏ. 26(ವೀರೇಶ್)- ಶಿಕ್ಷಕರೆಂದರೆ ತಪ್ಪನ್ನು ಸರಿಪಡಿಸುವ, ತಿದ್ದಿ ತೀಡುವ ಶಿಲ್ಪಿಗಳು. ಶಿಕ್ಷಕರು ಮನಸು ಪಟ್ಟರೆ ಏನು ಬೇಕಾದರೂ ಮಾಡಬಲ್ಲವರಾಗಿದ್ದು ಪ್ರಸ್ತುತ ಹಳಿ ತಪ್ಪಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸರಿದಾರಿಗೆ ತರುವ ಹೊಣೆ ಅವರದ್ದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮೈಸೂರು ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ, ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕಿನ ಶಿಕ್ಷಕರ ಭವನದ ಸಭಾಂಗಣದಲ್ಲಿ ನಡೆದ ಶಿಕ್ಷಕರ ಸಭೆಯಲ್ಲಿ ಮತ ಕೋರಿದ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕನ್ನಡ ಸಾಹಿತ್ಯದ ಉದ್ಧಾರಕ್ಕಾಗಿ, ಕನ್ನಡ ಭಾಷೆಯ ಸರ್ವತೋಮುಖ ಪ್ರಗತಿಗಾಗಿ, ಸದುದ್ದೇಶದಿಂದ ಹಿರಿಯರು ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ತು ಇಂದು ಎತ್ತ ಸಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ತನ್ನ ಮೂಲ ಉದ್ದೇಶವನ್ನೇ ಮರೆತು ಕೆಲವು ಸ್ವಾರ್ಥ ವ್ಯಕ್ತಿಗಳಿಂದಾಗಿ ಸಾಹಿತ್ಯ ಪರಿಷತ್ತು ಸಾಹಿತೀಕರಣ ಗೊಳ್ಳುವುದರ ಬದಲು ವ್ಯಾಪಾರೀಕರಣ ಹಾಗೂ ರಾಜಕೀಯಕರಣ ವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತರಾದ ಶಿಕ್ಷಕರು ಪರಿಷತ್ತಿನ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ. ಏಕೆಂದರೆ ಪರಿಷತ್ತನ್ನು ಕಟ್ಟುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು ಸ್ವಾರ್ಥಪರವಾದ ಒಂದು ಗುಂಪಿನ ಕಪಿಮುಷ್ಟಿಯಿಂದ ಇಂದು ಪರಿಷತ್ತನ್ನು ಬಿಡಿಸಿಕೊಳ್ಳಬೇಕಾಗಿದೆ. ಜಿಲ್ಲೆಗಳು ಸೇರಿದಂತೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಒಟ್ಟಾರೆ ಸುಮಾರು ಮೂರೂವರೆ ಲಕ್ಷ ಸದಸ್ಯರಿದ್ದು ಅವರಲ್ಲಿ ಬಹುಪಾಲು ಮಂದಿ ಶಿಕ್ಷಕರೇ ಆಗಿದ್ದು ಪ್ರಸ್ತುತ ನಡೆಯಲಿರುವ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುವಲ್ಲಿ ಅಭ್ಯರ್ಥಿಗಳ ಹಿನ್ನೆಲೆ ಅರಿತು ಯೋಗ್ಯರನ್ನು ಆಯ್ಕೆ ಮಾಡುವ ಕೆಲಸವನ್ನು ಪ್ರತಿಯೊಂದು ಜಿಲ್ಲೆಯಲ್ಲಿಯೂ ಶಿಕ್ಷಕರು ಮಾಡಬೇಕಾಗಿದೆ. ಹಾಗೆಯೇ ಮೈಸೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾನು ನನಗೇ ತಮ್ಮ ಮತ ವನ್ನು ನೀಡಬೇಕೆಂದು ಒತ್ತಾಯಿಸುವುದಿಲ್ಲ. ಆದರೆ ಪರಿಷತ್ತನ್ನು ಮುನ್ನಡೆಸಿ ಕನ್ನಡ ವನ್ನು ಕಟ್ಟಲು ನಾನು ಅರ್ಹನೆನಿಸಿದರೆ ನನಗೆ ಮತ ನೀಡಿ ಎಂದ ಅವರು, ತಾವು ಗೆದ್ದರೆ ಕನ್ನಡ ಸಾಹಿತ್ಯ ಪರಿಷತ್ತನ್ನು ಸಂಪೂರ್ಣ ಶುದ್ಧೀಕರಿಸಿ ಗುಂಪುಗಾರಿಕೆಯಿಂದ ಮುಕ್ತಗೊಳಿಸುವುದರ ಜೊತೆಗೆ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಶಿಕ್ಷಕರಿಗೆ ಆದ್ಯತೆ ನೀಡುವುದಾಗಿ ಹೇಳಿದರು.

ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್. ಕೆ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸರ್ಕಾರಿ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾಮಚಂದ್ರ, ಗೌರವ ಅಧ್ಯಕ್ಷ ಸಿ. ಚಿಕ್ಕ ಮಾದಪ್ಪ, ಸೋಮಶೇಖರ್, ಉಪಾಧ್ಯಕ್ಷ ಅಶೋಕ್, ಪ್ರಧಾನ ಕಾರ್ಯದರ್ಶಿ ಕೆ. ಎಚ್.ಮಹದೇವಪ್ಪ, ಖಜಾಂಚಿ ಮಧು ರೇಶ್, ಸಹಕಾರ್ಯದರ್ಶಿ ಜಾವಿದ್ ಪಾಷ, ಲೋಕೇಶ್, ಜಿಲ್ಲಾ ಉಪಾಧ್ಯಕ್ಷೆ ಅನಿತಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ್ ರಾವಂದೂರು, ಸಿ. ನಾಗೇಂದ್ರಪ್ಪ, ಸದಸ್ಯೆ ರಾಣಿ, ಪಿ.ಎನ್.ಪ್ರಶಾಂತ್, ಸಾಹಿತಿ ಡಿ. ಎನ್.ಕೃಷ್ಣಮೂರ್ತಿ ವಕೀಲ ಆರ್. ಡಿ. ಕುಮಾರ್ ಕನ್ನಡ ಪರಿಚಾರಕ ಕೋ. ಸು. ನರಸಿಂಹಮೂರ್ತಿ, ಚಿಂತಕ ವೆಂಕಟೇಶ್ ಬಾಬು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಮತ್ತಿತರರಿದ್ದರು.

Translate »